ಜಿಲ್ಲೆ

ಕಸ ವಿಲೇವಾರಿಗೆ ಇಚ್ಛಾಶಕ್ತಿ ಕೊರತೆ, ಸಂಸ್ಕರಣಾ ಘಟಕ ಸ್ಥಾಪಿಸಲು ಮೀನಮೇಷ

Kolar

ಕೋಲಾರ: ನಗರದಲ್ಲಿ ಪ್ರತಿದಿನ 70ರಿಂದ 100 ಟನ್ ಹಸಿ ಮತ್ತು ಒಣ ಕಸ ಸಂಗ್ರಹಣೆಯಾಗುತ್ತಿದ್ದು, ಸಾರ್ವಜನಿಕರ ಇಚ್ಛಾಶಕ್ತಿ ಕೊರತೆಯಿಂದ ಘನತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಕಗ್ಗಂಟಾಗಿದೆ.

ಘನತ್ಯಾಜ್ಯ ವೈಜ್ಞಾನಿಕ ವಿಲೇವಾರಿ ಮಾಡಲು ಸುಪ್ರೀಂಕೋರ್ಟ್ ಕೋಲಾರ ನಗರಸಭೆಗೆ ಹಲವು ಬಾರಿ ಚಾಟಿ ಬೀಸಿದೆ, ಆದರೆ ಸಂಗ್ರಹಿಸಿದ ಕಸ ಸುರಿಯಲು ಶಾಶ್ವತ ಜಾಗ ಗುರುತಿಸಲು ಈವರೆಗೆ ಸಾಧ್ಯವಾಗಿಲ್ಲ.

ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನಿವೇಶನ ಒದಗಿಸಲಾಗಿದ್ದು ಕೋಲಾರದಲ್ಲಿ ಸೂಕ್ತ ಜಾಗ ಗುರುತಿಸಿ ಸಂಸ್ಕರಣಾ ಘಟಕ ಸ್ಥಾಪಿಸಲು ಮೀನಮೇಷ ಎಣಿಸಲಾಗುತ್ತಿದೆ. ಕಸ ವಿಲೇವಾರಿಗೆ ಜಾಗ ಹುಡುಕಿಕೊಡಿ ಎಂದು ಬೊಬ್ಬೆ ಹೊಡೆಯುವ ಕೆಲ ಸ್ವಯಂ ಘೋಷಿತ ಪರಿಸರವಾದಿಗಳು, ಹೋರಾಟಗಾರರು ಜಿಲ್ಲಾಡಳಿತ ಕಸ ಎಸೆಯಲು ವ್ಯವಸ್ಥೆ ಮಾಡುವ ಜಾಗಕ್ಕೆ ತಕರಾರು ಮಾಡಿ ಅಡ್ಡಗಾಲು ಹಾಕುತ್ತಿರುವುದರಿಂದ ನಗರಸಭೆ ಬೀಸೋ ದೊಣ್ಣೆಯಿಂದ ಪಾರಾಗಲು ತಾತ್ಕಾಲಿಕ ನಿವೇಶನಗಳಲ್ಲಿ ಕಸ ಸುರಿಯುವ ಪರಿಸ್ಥಿತಿ ಉಂಟಾಗಿದೆ.

2012-13ನೇ ಸಾಲಿನಲ್ಲಿ ನಗರಸಭೆಯಿಂದ ಘನತ್ಯಾಜ್ಯ ವಿಲೇವಾರಿಗೆ ದೊಡ್ಡ ಮಟ್ಟದಲ್ಲಿ ಆಂದೋಲನ ನಡೆದಿತ್ತು, ನಗರಸಭೆಯ ಅಂದಿನ ಅಧ್ಯಕ್ಷ ಬಿ.ಎಂ.ಮುಬಾರಕ್ ನೇತೃತ್ವದಲ್ಲಿ ಕೆಲ ದಿನ ವೈಜ್ಞಾನಿಕವಾಗಿ ಕಸ ಸಂಗ್ರಹಣೆ ಕಾರ್ಯ ಸಾಗಿತ್ತು. ಆಗಿನ ಡಿಸಿ ದಿ.ಡಿ.ಕೆ.ರವಿ ಜನ ಜಾಗೃತಿ ಮೂಡಿಸಿದ್ದರು, ಆದರೆ ಜಾಗದ ಸಮಸ್ಯೆಯಿಂದ ಆಂದೋಲನ ವಿಫಲವಾಯಿತು, ಕೆಲವರು ಸಂಗ್ರಹಿಸಿದ ಪ್ಲಾಸ್ಟಿಕ್ ಗುಜರಿಗೆ ಮಾರಿ ಜೇಬು ತುಂಬಿಸಿಕೊಂಡ ಆರೋಪ ಕೇಳಿ ಬಂತು.

ಅನೇಕ ಕಡೆ ದಾಳಿ ಮಾಡಿ ಪ್ಲಾಸ್ಟಿಕ್ ವಶ ಪಡಿಸಿಕೊಳ್ಳಲಾಗಿತ್ತಾದರೂ ಜನಪ್ರತಿನಿಧಿಗಳ ಹಸ್ತಕ್ಷೇಪದಿಂದ ಅಧಿಕಾರಿಗಳು ಅಸಹಾಯಕರಾದರು.

ತ್ರೀಲೋಕಚಂದ್ರ ಅವರ ಕಾಲದಲ್ಲೂ ನಗರ ಸ್ವಚ್ಛತೆಗೆ ಪ್ರಯತ್ನ ನಡೆದಿತ್ತು. ಆದರೆ ಕಸ ವಿಲೇವಾರಿಗೆ ಜಾಗ ಸಿಗದೆ ವಿಫಲವಾಯಿತು. ಸತ್ಯವತಿ ಡಿಸಿಯಾದ ಮೇಲೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದರು, ಕಸ ಸುರಿಯಲು ಜಾಗ ಗುರುತಿಸಿದರಾದರೂ ಕೆಲವರು ರೈತರನ್ನು ಎತ್ತಿಕಟ್ಟಿದ್ದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಲಿಲ್ಲ, ಜೆ.ಮಂಜುನಾಥ್ ಕಾಲದಲ್ಲೂ ಜಾಗ ಹುಡುಕಲು ಗಂಭೀರ ಪ್ರಯತ್ನ ನಡೆಯಿತು. ಕೋಲಾರ-ಮುಳಬಾಗಿಲು ತಾಲೂಕಿನ ನಡುವೆ ಪೊಂಬರಹಳ್ಳಿ ಬಳಿ ಸರ್ಕಾರಿ ಜಾಗ ಹುಡುಕಲಾಗಿತ್ತು, ಒಂದು ಕಡೆ ಗ್ರಾಮಸ್ಥರು ಅಕ್ಷೇಪ ಮಾಡಿದರೆ, ಮತ್ತೊಂದೆಡೆ ಅರಣ್ಯ ಇಲಾಖೆಯವರು ಈ ಜಾಗ ನಮ್ಮದು ಎಂದು ಪ್ರತಿಪಾದಿಸಿದ್ದರಿಂದ ಮುಕ್ತಿ ಸಿಗದಂತಾಯಿತು.

ಪ್ರಸ್ತುತ ಡಿಸಿ ಸಿ.ಸತ್ಯಭಾಮ ಕಸ ಸಮಸ್ಯೆ ನಿವಾರಿಸಲು ಹೆಜ್ಜೆ ಇಟ್ಟಿದ್ದಾರೆ, ವೈಜ್ಞಾನಿಕವಾಗಿ ಕಸ ವಿಂಗಡಿಸಿ ಕೊಡುವಂತೆ ಜನರಿಗೆ ತಾಕೀತು ಮಾಡಿದ್ದಾರೆ, ಸಮಸ್ಯೆ ನಿವಾರಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ನಗರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಜನರಲ್ಲಿ ಅರಿವು ಮೂಡಿಸಲು ಇನ್ನಷ್ಟು ಕ್ರವ ಜರುಗಿಸದಿದ್ದರೆ ಸಮಸ್ಯೆ ಹಾಗೇ ಉಳಿಯುವುದರಲ್ಲಿ ಅನುಮಾನವಿಲ್ಲ.

ಪ್ರತಿ ವಾರ್ಡ್ ಸದಸ್ಯರ ಸಮ್ಮುಖದಲ್ಲಿ ಸಭೆ ನಡೆಸಿ ಜಾಗೃತಿ ಮೂಡಿಸಬೇಕು, ಕಸ ಬೀದಿಗೆ ಬೀಳದಂತೆ, ಪ್ರತಿದಿನ ಕಸ ಸಂಗ್ರಹಣೆ ಮಾಡಲು ನಗರಸಭೆ ಸಿದ್ಧತೆ ಮಾಡಿಕೊಳ್ಳಬೇಕು, ಸಿಬ್ಬಂದಿ ಕೊರತೆ ನಿವಾರಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಸ್ಥಳೀಯ ಶಾಸಕರ ಮೇಲೆ ಒತ್ತಡ ತಂದು ವೈಜ್ಞಾನಿಕವಾಗಿ ಕಸ ಸಂಸ್ಕರಣೆ ಮಾಡಲು ಏರ್ಪಾಟು ಮಾಡಿಕೊಂಡರೆ ಮಾತ್ರ ಸುಧಾರಣೆ ಕಾಣಲು ಸಾಧ್ಯ.

ಸಾರ್ವಜನಿಕರ ಸಹಕಾರವಿಲ್ಲದೆ ಸಮಸ್ಯೆ ನಿವಾರಣೆ ಅಸಾಧ್ಯ, ಕಸ ಬೀದಿಗೆ ಎಸೆಯುವಂತಿಲ್ಲ, ಒಂದು ವೇಳೆ ಎಸೆಯುವುದು ಕಂಡು ಬಂದರೆ ಅದೇ ಕಸವನ್ನು ಮತ್ತೆ ಅವರ ಮನೆ ಮುಂದೆ ಸುರಿಯುವುದು ಅನಿವಾರ್ಯವಾಗುತ್ತದೆ. ನಗರಸಭೆಯಿಂದ ಏನಾದರು ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತಂದರೆ ಸರಿಪಡಿಸುವೆ. ಸಿ.ಸತ್ಯಾಭಾಮ, ಜಿಲ್ಲಾಧಿಕಾರಿ, ಕೋಲಾರ ಕಸ ವಿಲೇವಾರಿಗೆ ಜಾಗ ಗುರುತಿಸಲಾಗಿದೆ, ಜನರು ಮನೆಗಳಲ್ಲೇ ಕಸಿ ಮತ್ತು ಒಣ ಕಸ ವಿಂಗಡಿಸಿ ಕೊಟ್ಟರೆ ಸಮಸ್ಯೆ ಕಡಿಮೆಯಾಗುತ್ತದೆ, ಡಿಸಿ ಸೂಚನೆ ಮೇರೆಗೆ ಪ್ರತಿ ಮನೆಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ, ಯಾರು ಕಸ ವಿಂಗಡಿಸಿಕೊಡುತ್ತಿಲ್ಲ ಎಂದು ಪತ್ತೆ ಮಾಡಲು ಫೋಟೋ ತೆಗೆಯಲಾಗುತ್ತದೆ. ಶ್ರೀಕಾಂತ್, ಪೌರಾಯುಕ್ತ, ನಗರಸಭೆ, ಕೋಲಾರ