ಜಿಲ್ಲೆ

ರಸ್ತೆಗಳಲ್ಲಿ ಸಾರ್ವಜನಿಕರು ಕಸ ಸುರಿದರೆ ದಂಡ, ಜಿಲ್ಲಾಧಿಕಾರಿ ಸತ್ಯಭಾಮ ಎಚ್ಚರಿಕೆ

Kolar

ಕೋಲಾರ: ನಗರದಲ್ಲಿ ಇನ್ನು ಮುಂದೆ ಕಸವನ್ನು ಎಲ್ಲೆಂದರಲ್ಲಿ ಸುರಿಯುವಂತಿಲ್ಲ. ರಸ್ತೆಯಲ್ಲಿ ಕಸ ಸುರಿಯುವವರಿಗೆ ಮೊದಲು ನೋಟಿಸ್, ಎರಡನೇ ಬಾರಿ ದಂಡ ವಿಧಿಸುವುದು, ಪುನರಾವರ್ತನೆಯಾದರೆ ಬೀದಿಯ ಎಲ್ಲ ಕಸವನ್ನು ಅವರ ಮನೆ ಮುಂದೆಯೇ ಸುರಿಯಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ಎಚ್ಚರಿಸಿದರು.

ನಗರದ ಬೈರೇಗೌಡರ ನಗರದಲ್ಲಿ ಕಸ ವಿಂಗಡಣೆ ವಿಲೇವಾರಿಗೆ ಸೋಮವಾರ ಚಾಲನೆ ನೀಡಿ ಶ್ರೀಕೃಷ್ಣ ದೇವಾಲಯದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನೆಗಳಲ್ಲಿ ಸಂಗ್ರಹಿಸುವ ಕಸಗಳನ್ನು ಹಸಿ ಕಸ, ಒಣ ಕಸ ಹಾಗೂ ನಿರುಪಯುಕ್ತ ಕಸಗಳೆಂದು ವಿಂಗಡಿಸಿ ಮನೆ ಮುಂದೆ ಬರುವ ನಗರಸಭೆ ವಾಹನಗಳಿಗೆ ನೀಡಿದಾಗ ಸ್ವಚ್ಛತೆ ಕಾಪಾಡಲು ಸಾಧ್ಯ ಎಂದರು.

ಉತ್ತಮ ಪರಿಸರ ನಿರ್ಮಿಸಲು ನಗರಸಭೆಯೊಂದಿಗೆ ಕೈ ಜೋಡಿಸಬೇಕು. ನಿಗಧಿತ ಅವಧಿಯಲ್ಲಿ ತೆರಿಗೆ ಪಾವತಿಸುವಂತಾಗಬೇಕು. ಒಮ್ಮೆಲೇ ಸಾಧ್ಯವಾಗದಿದ್ದರೆ ಕಂತುಗಳಲ್ಲಿ ಪಾವತಿಸಲು ಅವಕಾಶವಿದೆ. ಕೆಲವೊಂದು ಸಮಸ್ಯೆಗಳಿಂದ ಮೂಲ ಸೌಲಭ್ಯ ಕಲ್ಪಿಸಲು ಅಡಚಣೆಯಾಗುತ್ತಿದ್ದು, ಮುಂದಿನ ದಿನದಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.

ನಗರದಲ್ಲಿ ಮೂರು ರಸ್ತೆಗಳನ್ನು ವಿಸ್ತರಿಸಬೇಕು, ಪ್ರಮುಖವಾಗಿ ಎಂ.ಜಿ.ರಸ್ತೆ ವಿಸ್ತರಿಸಬೇಕಿದೆ. ಕೆಲವರು ತಡೆಯಾಜ್ಞೆ ತಂದಿದ್ದರಿಂದ ಸಾಧ್ಯವಾಗಿರಲಿಲ್ಲ. ಬಂಗಾರಪೇಟೆ ರಸ್ತೆಯಲ್ಲಿ ಮೆಕ್ಕೆ ವೃತ್ತದಿಂದ ಇಟಿಸಿಎಂ ವೃತ್ತದವರೆಗೆ ಸಾರ್ವಜನಿಕರೇ ತಮ್ಮ ಕಟ್ಟಡಗಳನ್ನು ತೆರವು ಮಾಡಿ ರಸ್ತೆ ವಿಸ್ತರಣೆಗೆ ಸಹಕಾರ ನೀಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿದರು.

ನಗರಸಭೆಯು ಮಿನಿ ಸರ್ಕಾರದ ಆಡಳಿತವಿದ್ದಂತೆ. ವಾಣಿಜ್ಯ ಮಳಿಗೆಗಳ ಹರಾಜಿನಿಂದ ಕ್ರೋಡಿಕೃತವಾಗಿರುವ 11 ಕೋಟಿ ರೂ. ನ್ಯಾಯಾಲಯದಲ್ಲಿದೆ. ನ್ಯಾಯಾಲಯದ ಆದೇಶದ ನಂತರ ಹಣ ಬಳಕೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು. ಈ ವರ್ಷ ರಸ್ತೆ ಸರಿಪಡಿಸಲು ಸರ್ಕಾರ 75 ಲಕ್ಷ ರೂ. ಮಂಜೂರು ಮಾಡಿದೆ ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಮಾತನಾಡಿ, ಸ್ವಚ್ಛತೆ ಕಾಪಾಡಿಕೊಂಡಾಗ ಮಾತ್ರ ಆರೋಗ್ಯದ ರಕ್ಷಣೆ ಸಾಧ್ಯ. ಬೈರೇಗೌಡ ನಗರದಲ್ಲಿ ನೀರಿನ ಸಮಸ್ಯೆಯಿದೆ. ಎರಡು ತಿಂಗಳಿನಿಂದ ಪಂಪ್‌ಸೆಟ್ ದುರಸ್ತಿ ಮಾಡಿಲ್ಲ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿ.ಕೃಷ್ಣರೆಡ್ಡಿ, ನಗರಸಭೆ ಪೌರಾಯುಕ್ತ ಶ್ರೀಕಾಂತ್, ಕುಡಾ ಸದಸ್ಯ ಅಪ್ಪಿನಾರಾಯಣಸ್ವಾಮಿ, ನಿವಾಸಿಗಳಾದ ದೇವರಾಜ್, ರಾಮಲಿಂಗೇಗೌಡ, ಕೃಷ್ಣಪ್ಪ, ಪವನ್ ನಾರಾಯಣಸ್ವಾಮಿ, ಲಕ್ಷ್ಮಣ್ ಇದ್ದರು.