ಜಿಲ್ಲೆ

ಪ್ರವಾಸಿ ತಾಣವಾಗಿ ಎಸ್. ಅಗ್ರಹಾರ ಕೆರೆ

Kolar

ಕೋಲಾರ: ಜಿಲ್ಲೆಯಲ್ಲಿ ದೊಡ್ಡ ಕೆರೆಗಳಲ್ಲಿ ಒಂದಾದ ಎಸ್.ಅಗ್ರಹಾರ ಕೆರೆಯನ್ನು ಪ್ರವಾಸಿ ತಾಣವಾಗಿಸಿ ಕೋಡಿ ಪಕ್ಕ ಉದ್ಯಾನ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ತಾಲೂಕಿನ ಎಸ್.ಅಗ್ರಹಾರ ಕೆರೆಗೆ ಭಾನುವಾರ ಬಾಗಿನ ಅರ್ಪಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ನೀರು ಸಂಗ್ರಹದಲ್ಲಿ ಜಿಲ್ಲೆಯ ದೊಡ್ಡ ಕೆರೆ ಹಾಗೂ ಸುಂದರವಾದ ಕೋಡಿ ಹೊಂದಿರುವ ಈ ಕೆರೆ ವೀಕ್ಷಣೆಗೆ ವಿವಿಧೆಡೆಯಿಂದ ಜನ ಬರುತ್ತಿದ್ದಾರೆ. ಅರಣ್ಯ, ತೋಟಗಾರಿಕೆ ಇಲಾಖೆಗಳ ಸಹಕಾರ ಪಡೆದು ಇಲ್ಲಿ ಉದ್ಯಾನ ನಿರ್ಮಿಸಲು ಸೂಚಿಸಿದ್ದೇನೆ.

ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ಕೆರೆ ಪಕ್ಕ ಅರಣ್ಯವೂ ಇರುವುದರಿಂದ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಅವಕಾಶವಿದೆ. ಮೀನುಗಾರಿಕೆಗೂ ಅವಕಾಶ ಇರುವುದರಿಂದ ಅಗತ್ಯ ಕ್ರಮ ವಹಿಸಲು ಸೂಚಿಸಲಾಗಿದೆ ಎಂದರು.

ಕೋಲಾರ ಕೃಷ್ಣಾ ಕಣಿವೆ ವ್ಯಾಪ್ತಿಯಲ್ಲಿ ಬರುವುದರಿಂದ ಕೃಷ್ಣಾನದಿ ನೀರಿನಲ್ಲಿ ನಮ್ಮ ಪಾಲು ಪಡೆಯುವ ಸಂಬಂಧ ಸಿಎಂ ಯಡಿಯೂರಪ್ಪ, ನೀರಾವರಿ ಸಚಿವ ಮಾಧುಸ್ವಾಮಿ ಜತೆ ಚರ್ಚಿಸಿ ಮುಂಬರುವ ಅಧಿವೇಶನದಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರಸಿಂಗ್ ಶೇಖಾವತ್ ಗಮನ ಸೆಳೆದು ಆಂಧ್ರದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು ಎಂದರು.

ಶಾಸಕ ಕೆ.ಆರ್.ರಮೇಶ್‌ಕುಮಾರ್ ಮಾತನಾಡಿ, ಕೆಸಿ ವ್ಯಾಲಿ ಯೋಜನೆಗೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಕ್ಷ ಭೇದ ಮರೆತು ಒಗ್ಗಟ್ಟಾಗಿ ಯೋಜನೆ ಜಾರಿ ಮಾಡಿದ್ದಾರೆ. ಇದರಿಂದ ಜಿಲ್ಲೆಗೆ ತಟ್ಟಿರುವ ಶಾಪ ಸ್ವಲ್ಪಮಟ್ಟಿಗೆ ನಿವಾರಣೆಯಾಗಲಿದೆ. ನೀರಿನ ಹರಿವು ಪ್ರಮಾಣ ಅಕ್ಟೋಬರ್ ಅಂತ್ಯಕ್ಕೆ 100 ಎಂಎಲ್‌ಡಿ ಹೆಚ್ಚಳವಾಗಲಿದ್ದು, ಡಿಸೆಂಬರ್ ಅಂತ್ಯದೊಳಗೆ 600 ಎಂಎಲ್‌ಡಿ ನೀರು ಹರಿಯುವ ಸಾಧ್ಯತೆಯಿದೆ ಎಂದರು.

ಕೆಸಿ ವ್ಯಾಲಿ ಮೊದಲ ಹಂತ 126 ಕೆರೆ ಎರಡನೇ ಹಂತ 225 ಕೆರೆಗೆ ನೀರು ಬರುತ್ತದೆ. ರೈತರು ಕೆರೆ ತುಂಬುವವರೆಗೂ ತಾಳ್ಮೆಯಿಂದ ಇರಬೇಕು, ಎರಡನೇ ಹಂತದ ಯೋಜನೆಗೆ ಅವಶ್ಯವಿರುವ 450 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದರು.

ಎತ್ತಿನಹೊಳೆ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣುತ್ತಿಲ್ಲ, ನೀರು ಸಂಗ್ರಹ ಭೂಮಿ ಸಮಸ್ಯೆ ಭೂ ಪರಿಹಾರ ವಿಚಾರದಲ್ಲಿ ಅಸಮಾನತೆ ಇದೆ, ಏಕರೂಪ ದರ ನಿಗದಿ ಮಾಡಲು ವಿಳಂಬವಾಗಿದೆ ಎಂದರು.

ಶಾಸಕರಾದ ಕೆ.ಶ್ರೀನಿವಾಸಗೌಡ, ಕೃಷ್ಣಭೈರೇಗೌಡ, ತಹಸೀಲ್ದಾರ್ ಆರ್. ಶೋಭಿತಾ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಎಸ್‌ಎಫ್‌ಸಿಎಸ್ ಅಧ್ಯಕ್ಷ ತಿಮ್ಮರಾಯಪ್ಪ, ಬ್ಯಾಟಪ್ಪ ಮತ್ತಿತರರು ಉಪಸ್ಥಿತರಿದ್ದರು.

ಈಜುಗಾರರ ಚಮತ್ಕಾರ: ಇತ್ತೀಚೆಗೆ ಸುರಿದ ಧಾರಾಕಾರ ಮಳೆ ಮತ್ತು ಕೆಸಿ ವ್ಯಾಲಿ ನೀರಿನಿಂದ ಭರ್ತಿಯಾಗಿ ಸೋಮಾಂಬುದಿ ಅಗ್ರಹಾರ ಕೆರೆ ಕೋಡಿ ಹೋಗುತ್ತಿದ್ದು ಜಲಧಾರೆ ಸವಿಯಲು ವಿವಿಧೆಡೆಯಿಂದ ನೂರಾರು ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ.ಕೆರೆಯಲ್ಲಿ ಈಜದಂತೆ ಸಣ್ಣ ನೀರಾವರಿ ಇಲಾಖೆಯಿಂದ ಸೂಚನಾ ಫಲಕ ಅಳವಡಿಸಲಾಗಿದೆ. ಆದರೂ ಅನೇಕರು ಕೆರೆ ದಡದಿಂದ ವಿವಿಧ ಭಂಗಿಗಳಲ್ಲಿ ನೀರಿಗೆ ನೆಗೆದು ಈಜುವ ಮೂಲಕ ಸಾಹಸ ಪ್ರದರ್ಶಿಸುತ್ತಿರುವುದು ಅಧಿಕಾರಿಗಳಲ್ಲಿ ಗಾಬರಿಯನ್ನುಂಟು ಮಾಡಿದೆ.

15 ವರ್ಷಗಳ ನಂತರ ಕೆರೆ ಭರ್ತಿ: ಭಾನುವಾರ ಅಗ್ರಹಾರ ಕೆರೆ ಅಕ್ಷರಶಃ ಫಿಕಿನಿಕ್ ಸ್ಪಾಟ್ ಆಗಿತ್ತು. ವಿವಿಧೆಡೆಯಿಂದ ನೀರು ಬುತ್ತಿ ಸಮೇತ ಬಂದಿದ್ದ ಜನರು ಕೆಲ ಸಮಯ ನೀರಿನಲ್ಲಿ ಆಟವಾಡಿ ಮರದ ಕೆಳಗೆ ಕುಳಿತು ಬುತ್ತಿ ಸವಿದರು. 15 ವರ್ಷಗಳ ನಂತರ ಕೆರೆ ಭರ್ತಿ ಆಗಿರುವುದರಿಂದ ಗ್ರಾಮಸ್ಥರು ಕುಟುಂಬ ಸಮೇತ ಬಂದು ಗಂಗೆ ಮಾತೆಗೆ ಬಾಗಿನ ಸಮರ್ಪಿಸಿದರು.