ಜಿಲ್ಲೆ

ಕೃಷಿ ಇಲಾಖೆ ಚಿಹ್ನೆಬಳಸಿಕೊಂಡು ಗುರುತಿನ ಚೀಟಿ ತಯಾರಿಸಿಕೊಡುತ್ತಿರುವ ಸೈಬರ್ ಸೆಂಟರ್‌ಗಳ ವಿರುದ್ಧ ಕ್ರಮಕ್ಕೆ ಕೃಷಿ ಇಲಾಖೆ ಪಟ್ಟು

Kolar

ಕೋಲಾರ: ಶ್ರೀನಿವಾಸಪುರ ತಾಲೂಕಿನಲ್ಲಿ ಕೃಷಿ ಇಲಾಖೆ ಚಿಹ್ನೆ ಹಾಗೂ ಇಲಾಖೆಯ ಫ್ರೂಟ್ಸ್ (ಫಾರ್ಮರ್ ರಿಜಿಸ್ಟ್ರೇಷನ್ ಆ್ಯಂಡ್ ಯೂನಿಫೈಡ್ ಬೆನಿಫೀಷಿಯರ್ಸ್‌ ಇನ್‌ರ್ಮೇಷನ್) ತಂತ್ರಾಂಶದಲ್ಲಿ ದಾಖಲಾಗಿರುವ ರೈತರ ವಿವರ ಬಳಸಿಕೊಂಡು ಗುರುತಿನ ಚೀಟಿ ತಯಾರಿಸಿಕೊಡುತ್ತಿರುವ ಸೈಬರ್ ಸೆಂಟರ್‌ಗಳ ವಿರುದ್ಧ ಕ್ರಮಕ್ಕೆ ಕೃಷಿ ಇಲಾಖೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಕುಳಿತಲ್ಲೇ ದುಡ್ಡು ಮಾಡೋದಕ್ಕೆ ನಾನಾ ತಂತ್ರಗಾರಿಕೆ ಹೆಣೆಯುತ್ತಿರುವುದು ನಿರಂತರವಾಗಿ ನಡೆಯುತ್ತಿದ್ದು, ಕರೊನಾ ಸಂಕಷ್ಟದಲ್ಲಿ ರೈತನಿಗೆ ಬಲೆ ಹೆಣೆದಿರುವ ಕೆಲ ಸಂಸ್ಥೆಗಳು ಕೃಷಿ ಇಲಾಖೆ ಚಿಹ್ನೆ ಹಾಗೂ ವೆಬ್‌ಸೈಟ್ ದುರುಪಯೋಗಪಡಿಸಿಕೊಂಡು ಎಫ್‌ಐಡಿ ಗುರುತಿನ ಚೀಟಿ ಮಾಡಿಕೊಡುತ್ತಿರುವುದು ಬೆಳಕಿಗೆ ಬಂದಿದೆ.

ಏನಿದು ಫ್ರೂಟ್ಸ್ ಐಡಿ: ಆಹಾರ, ಕೃಷಿ ಮತ್ತು ಕಂದಾಯ ಇಲಾಖೆಯಿಂದ ರೈತರ ಬೆಳೆಯ ಜಿಪಿಎಸ್ ಆಧಾರಿತ ಸರ್ವೇ ನಡೆಸಿ ಸಂಗ್ರಹಿಸಿದ ವಿವರಗಳನ್ನು ಫ್ರೂಟ್ಸ್ ತಂತ್ರಾಂಶಕ್ಕೆ ಜೋಡಿಸಲಾಗಿದ್ದು, ರೈತನಿಗೆ ಐಡಿ ಸಂಖ್ಯೆ ನೀಡಲಾಗಿದೆ. ಬೆಳೆ ನಷ್ಟ ಪರಿಹಾರ, ಬೆಂಬಲ ಬೆಲೆಯಲ್ಲಿ ಧಾನ್ಯ ಖರೀದಿ ವೇಳೆ ಈ ನಂಬರ್ ಬಳಕೆಯಾಗುತ್ತದೆ. ಕಳೆದ ಬಾರಿ ರಾಗಿ ಬೆಂಬಲ ಬೆಲೆ ಖರೀದಿ ಸಂದರ್ಭದಲ್ಲಿ ಈ ಐಡಿ ಬಳಕೆಯಾಗಿತ್ತು.

ಕಾರ್ಡ್‌ಗೆ 200-300 ರೂ.: ಫ್ರೂಟ್ಸ್ ಐಡಿ ಸಂಖ್ಯೆ, ಆತನ ಹೆಸರು ಹಾಗೂ ವಿಳಾಸ, ಕ್ಯೂಆರ್ ಕೋಡ್‌ನ್ನು ಡೌನ್‌ಲೋಡ್ ಮಾಡಿಕೊಂಡು ಸ್ಮಾರ್ಟ್ ಕಾರ್ಡ್‌ನಂತೆ ಸಿದ್ಧಪಡಿಸಿ ನೀಡುತ್ತಿದ್ದಾರೆ. ಇದಕ್ಕೆ ಪ್ರತಿ ರೈತನ ಬಳಿ 200-300 ರೂ. ವರೆಗೆ ಪಡೆಯುತ್ತಿದ್ದಾರೆ. ಈ ಮೋಸದ ಜಾಲಕ್ಕೆ ಸಿಲುಕಿ ಈಗಾಗಲೇ ನೂರಾರು ರೈತರು ಕಾರ್ಡ್ ಮಾಡಿಕೊಂಡು ಹಣ ಕಳೆದುಕೊಂಡಿದ್ದಾರೆ.

ಠಾಣೆಗೆ ದೂರು: ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಕೃಷಿ ಇಲಾಖೆ, ಇದು ರೈತರನ್ನು ದಾರಿ ತಪ್ಪಿಸುವ ಹಾಗೂ ಕಾನೂನುಬಾಹಿರ ಕೃತ್ಯವಾಗಿದೆ. ಇಲಾಖೆಯ ವೆಬ್‌ಸೈಟ್ ಹಾಗೂ ಚಿಹ್ನೆ ದುರ್ಬಳಕೆ ಮಾಡುತ್ತಿರುವ ಸೈಬರ್ ಸೆಂಟರ್‌ಗಳವರನ್ನು ಪತ್ತೆಹಚ್ಚಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶ್ರೀನಿವಾಸಪುರ ಸಹಾಯಕ ಕೃಷಿ ನಿರ್ದೇಶಕ ಎಂ.ಧನಂಜಯ ಶ್ರೀನಿವಾಸಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇಲಾಖೆಯಿಂದ ಗುರುತಿನ ಚೀಟಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಯಾರಾದರೂ ಸಂಪರ್ಕಿಸಿ ಹಣ ಕೇಳಿ ಕಾರ್ಡ್ ನೀಡುತ್ತೇವೆ ಎಂದರೆ ರೈತರು ನಂಬಬಾರದು. ಸರ್ಕಾರದ ಲೋಗೋ, ಫ್ರೂಟ್ಸ್ ಐಡಿ ಬಳಸಿಕೊಂಡು ನಕಲಿ ಕಾರ್ಡ್ ವಿತರಿಸುವ ಬಗ್ಗೆ ಶ್ರೀನಿವಾಸಪುರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ರೂಪಾದೇವಿ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಕೆಲ ಸೈಬರ್ ಸೆಂಟರ್‌ಗಳು, ಸಂಸ್ಥೆಗಳು ರೈತನ ಎಫ್‌ಐಡಿ ಸಂಖ್ಯೆ ವಿವರಗಳನ್ನು ಪಡೆದು ಕಲರ್ ಜೆರಾಕ್ಸ್ ಪ್ರಿಂಟ್ ತೆಗೆದು ಐಡಿ ಕಾರ್ಡ್ ರೀತಿ ಮಾಡಿಕೊಡುತ್ತಿದ್ದಾರೆ. ಇದು ದೊಡ್ಡ ದಂಧೆಯಾಗಿದೆೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಾಲಾಜಿ, ರೈತ ಶ್ರೀನಿವಾಸಪುರ