ಬೂದಿಕೋಟೆ: ಗ್ರಾಪಂ ಚುನಾವಣೆಗೆ ದಿನಾಂಕ ನಿಗದಿಯಾಗದಿದ್ದರೂ, ಹಳ್ಳಿಗಳಲ್ಲಿ ಮೀಸಲಾತಿ ಆಧಾರದ ಮೇಲೆ ರಾಜಕೀಯ ಚದುರಂಗದಾಟ ಗರಿಗೆದರಿದೆ. ಚುನಾವಣೆಗೆ ಮೀಸಲಾತಿ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿರುವ ಕಾರಣ ಗುಂಪು ಚರ್ಚೆ ಆರಂಭವಾಗಿದ್ದು, ದಿನದಿಂದ ದಿನಕ್ಕೆ ಚುನಾವಣೆ ಕಾವು ಏರತೊಡಗಿದೆ. ದಿನಾಂಕ ನಿಗದಿಗೂ ಮುಂಚೆಯೇ ಆಕಾಂಕ್ಷಿಗಳು ಮತದಾರರ ಓಲೈಕೆಗೆ ಮುಂದಾಗಿದ್ದಾರೆ.
ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಪಂ ಚುನಾವಣೆಯು ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಕಣವಾಗಿದೆ. ಪಂಚಾಯಿತಿ ವ್ಯಾಪ್ತಿಗೆ 8 ಗ್ರಾಮಗಳನ್ನೊಳಗೊಂಡು ಸುಮಾರು 7000 ಜನಸಂಖ್ಯೆಯಿದ್ದು, ಪಂಚಾಯಿತಿ 16 ಸದಸ್ಯರಿಗೆ ಅವಕಾಶವಿದೆ. ಬೂದಿಕೋಟೆ ಗ್ರಾಮದಿಂದ 9 ಸದಸ್ಯರು, ಇತರ ಗ್ರಾಮಗಳಿಂದ 7 ಸದಸ್ಯರಾಗಲು ಅವಕಾಶವಿದೆ.
ಅವಕಾಶ ವಂಚಿತ: ಕಳೆದ ಬಾರಿ 16 ಸದಸ್ಯರ ಪೈಕಿ 10 ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದರು. ಮೀಸಲಾತಿಯಲ್ಲಿ ಅಧ್ಯಕ್ಷರ ಆಯ್ಕೆಗೆ ಕಾಂಗ್ರೆಸ್‌ನಲ್ಲಿ ಸದಸ್ಯರಿಲ್ಲದ ಕಾರಣ ಬಿಜೆಪಿ ಬೆಂಬಲಿತರನ್ನು ಸೆಳೆದು ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಯಶಸ್ವಿಯಾಗಿದ್ದರು.
ತೆರೆಮರೆಯಲ್ಲಿ ಬಿರುಸಿನ ಪ್ರಚಾರ: ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತ ಆಕಾಂಕ್ಷಿಗಳು ತೆರೆಮರೆಯಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದರೆ, ಬೂದಿಕೋಟೆ ಹೋಬಳಿಯಲ್ಲಿ ಜೆಡಿಎಸ್‌ಗೆ ನಾಯಕರ ಕೊರತೆ ಎದ್ದು ಕಾಣುತ್ತಿದೆ. ವಿಧಾನಸಭೆಯ ಪರಾಜಿತ ಅಭ್ಯರ್ಥಿ ಮಲ್ಲೇಶ್‌ಬಾಬು ಕಾರ್ಯಕರ್ತರನ್ನು ಸಂಘಟಿಸಲು ಯಾವ ತಂತ್ರ ಅನುಸರಿಸುತ್ತಾರೋ ಕಾದು ನೋಡಬೇಕಿದೆ.
ಪ್ರಬಲ ಪೈಪೋಟಿ: ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಾಗೂ ಬಿಜೆಪಿ ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪಗೆ ಪ್ರತಿಷ್ಠೆಯ ಕಣವಾಗಿರುವ ಬೂದಿಕೋಟೆ ಗ್ರಾಪಂ ಅನ್ನು ಹಿಡಿತಕ್ಕೆ ಪಡೆಯಬೇಕೆಂಬ ಉದ್ದೇಶದಿಂದ ಈಗಾಗಲೆ ರಾಜಕೀಯದ ಆಟ ಆರಂಭಿಸಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಹಾಲಿ ಶಾಸಕರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಪಕ್ಷಕ್ಕೆ ವರವಾಗಬಹುದು ಎಂಬುದು ಕಾಂಗ್ರೆಸ್ ಮುಖಂಡರ ಅಭಿಪ್ರಾಯ.
ಕ್ಷೇತ್ರದ ಮತ್ತೊಬ್ಬ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಜೆಡಿಎಸ್ ಜತೆ ಮುಂದುವರಿದು ಪಕ್ಷಕ್ಕೆ ಶಕ್ತಿ ತುಂಬುವರೇ ಅಥವಾ ಬಿಜೆಪಿಗೆ ವಾಲುವರೇ ಎಂಬ ಕುತೂಹಲ ಮೂಡಿಸಿದೆ, ಈ ಚುನಾವಣೆ ಮೂಲಕ ಕೆಲ ನಾಯಕರು ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಬಿಜೆಪಿಗೆ ಅಧಿಕಾರದ ಹಂಬಲ: ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಮಾನದಂಡವನ್ನಾಗಿ ಇಟ್ಟುಕೊಂಡು ಈ ಬಾರಿ ಪಂಚಾಯಿತಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎನ್ನುವುದು ಬಿಜೆಪಿ ಬೆಂಬಲಿತ ಮುಖಂಡರ ಅಭಿಪ್ರಾಯ. ಪಕ್ಷಗಳ ಮುಖಂಡರಲ್ಲಿ ಜಾತಿ ಹಾಗೂ ಪಕ್ಷವಾರು ಲೆಕ್ಕಾಚಾರ ಪ್ರಾರಂಭವಾಗಿದ್ದು, ಸ್ಥಳೀಯ ರಾಜಕೀಯ ಪ್ರಭಾವದಿಂದ ಹೊಂದಾಣಿಕೆ, ಅವಿರೋಧ ಆಯ್ಕೆಗೆ ಪ್ರಯತ್ನ, ಮತದಾರರ ಪಟ್ಟಿಯಲ್ಲಿ ಮತದಾರರ ಸ್ಥಳಾಂತರದ ಕೆಲಸ ತೆರೆಮರೆಯಲ್ಲಿ ನಡೆಯುತ್ತಿದ್ದು, ಯಾವ ಪಕ್ಷದ ಬೆಂಬಲಿತರು ಆಡಳಿತ ಚುಕ್ಕಾಣಿ ಹಿಡಿಯುತ್ತಾರೆ ಎಂಬ ಕುತೂಹಲ ಮತದಾರರಲ್ಲಿದೆ.