ಕೋಲಾರ: ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ 4. 16 ಲಕ್ಷ ಕುಟುಂಬಗಳಿಗೆ ಈಗಾಗಲೆ ಸಾಲ ನೀಡಿದ್ದು, ಉಳಿದ 5.25 ಲಕ್ಷ ಕುಟುಂಬದ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲ ಸೌಲಭ್ಯ ಕಲ್ಪಿಸುವ ಸಂಕಲ್ಪ ತೊಡಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಕಸಬಾ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಿಂದ ಗುರುವಾರ ಆಯೋಜಿಸಿದ್ದ 1.5 ಕೋಟಿ ರೂ. ಸಾಲ ವಿತರಣಾ ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಸಾಲದ ಚೆಕ್ ವಿತರಿಸಿ ಮಾತನಾಡಿ, ಎರಡೂ ಜಿಲ್ಲೆಗಳಲ್ಲಿ 9.46 ಲಕ್ಷ ಬಿಪಿಎಲ್ ಕುಟುಂಬಗಳಿವೆ. ಬಡತನ ರೇಖೆಗಿಂತ ಕೆಳಗಿರುವ ಎಲ್ಲ ಕುಟುಂಬಗಳಿಗೂ ಸಾಲ ಸೌಲಭ್ಯ ಒದಗಿಸುವ ಬದ್ಧತೆ ನಮ್ಮ ಆಡಳಿತ ಮಂಡಳಿಯದು ಎಂದರು.
ಪ್ರತಿ ಬಿಪಿಎಲ್ ಕುಟುಂಬದ ಮಹಿಳೆಗೂ ಸಾಲ ತಲುಪಿಸುವ ನಮ್ಮ ಸಂಕಲ್ಪ ಕೈಗೂಡಿದರೆ, ಜಾತಿ, ಧರ್ಮ, ಪಕ್ಷಾಧಾರಿತ ಸಾಲ ವಿತರಣೆ ಎಂಬ ಸಂಕುಚಿತ ಮನಸ್ಸುಗಳ ಆರೋಪಗಳಿಗೆ ಶಾಶ್ವತವಾಗಿ ಕಡಿವಾಣ ಬೀಳಲಿದೆ. ಮಹಿಳೆಯರ ಆರ್ಥಿಕ ಸಬಲೀಕರಣ ಬ್ಯಾಂಕ್ ಗುರಿಯಾಗಿದೆ. ಇಂತಹ ಸಂದರ್ಭದಲ್ಲಿ ಅವರ ಜಾತಿ, ಧರ್ಮ, ಪಕ್ಷವನ್ನು ಎಂದೂ ಕೇಳಿಲ್ಲ, ಪರಿಗಣಿಸಿಯೂ ಇಲ್ಲ ಎಂದರು.
ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಡಿಸಿಸಿ ಬ್ಯಾಂಕಿನಿಂದ ರೈತರಿಗೆ ಮತ್ತು ಮಹಿಳಾ ಸ್ವಸಹಾಯ ಸಂಘಗಳಿಗೆ ಈವರೆಗೆ 1500 ಕೋಟಿ ರೂ. ಸಾಲ ಸೌಲಭ್ಯವನ್ನು ಬಡ್ಡಿ ರಹಿತವಾಗಿ ಕಲ್ಪಿಸಿದೆ. ಇದಕ್ಕೆ 320 ಕೋಟಿ ರೂ. ಬಡ್ಡಿಯನ್ನು ಸರ್ಕಾರ ಪಾವತಿಸುತ್ತಿದೆ. ಬ್ಯಾಂಕ್ ಪ್ರಗತಿಯನ್ನು ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತರು ಅಪಪ್ರಚಾರಕ್ಕೆ ಮುಂದಾಗಿದ್ದಾರೆ. ಅಂಥವರಿಗೆ ನೀವುಗಳೇ ಪಾಠ ಕಲಿಸಬೇಕು ಎಂದರು.
ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಕಸಬಾ ಸೊಸೈಟಿಗೆ 9 ಕೋಟಿ ರೂ. ಸಾಲವನ್ನು 450 ಮಹಿಳಾ ಸ್ವಸಹಾಯ ಸಂಘಗಳಿಗೆ ಮಂಜೂರು ಮಾಡಲಾಗಿದೆ. ಇದು ಮೂರನೇ ಹಂತದ ಸಾಲ ವಿತರಣೆ ಕಾರ್ಯಕ್ರಮ ಎಂದರು.
ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್, ಕಸಬಾ ಸೊಸೈಟಿ ಅಧ್ಯಕ್ಷ ಚೋಳಘಟ್ಟ ಶ್ರೀನಿವಾಸ್, ನಿರ್ದೇಶಕರಾದ ಶ್ರೀರಾಮರೆಡ್ಡಿ, ಅಮ್ಮೇರಹಳ್ಳಿ ಶ್ರೀನಿವಾಸ್, ಬೆಗ್ಲಿ ಪ್ರಕಾಶ್, ಕಾರ್ಯದರ್ಶಿ ವೆಂಕಟೇಶ್. ಬ್ಯಾಂಕ್ ವ್ಯವಸ್ಥಾಪಕ ಅಂಬರೀಷ್ ಹಾಜರಿದ್ದರು.
ಮಹಿಳಾ ಸ್ವಸಹಾಯ ಸಂಘಗಳಿಗೆ ಹಾಲಿ ವಿತರಿಸುತ್ತಿರುವ 5 ಲಕ್ಷ ರೂ. ಸಾಲದ ಮಿತಿಯನ್ನು ಮುಂದಿನ ದಿನಗಳಲ್ಲಿ 10 ಲಕ್ಷ ರೂ.ಗೆ ಏರಿಕೆ ಮಾಡಿ ಸಂಘದ ಪ್ರತಿ ಸದಸ್ಯೆಗೆ 1 ಲಕ್ಷ ರೂ. ಬಡ್ಡಿ ರಹಿತ ಸಾಲ ನೀಡಲಾಗುವುದು. ಕಿಸಾನ್ ಶ್ರೀ ಲಕ್ಷ್ಮೀಬಾಂಡ್ ಯೋಜನೆಯಡಿ ಹಣ ಠೇವಣಿ ಇಟ್ಟರೆ ವಾರ್ಷಿಕವಾಗಿ ಶೇ.8ರವರೆಗೆ ಬಡ್ಡಿ ನೀಡಲಾಗುವುದು. ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ