ಕೋಲಾರ: ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಯ ನಿಟ್ಟಿನಲ್ಲಿ ವರ್ಗಾವಣೆ ನೀತಿಯಲ್ಲಿ ಸಡಿಲಿಕೆ ಮಾಡಿ ಶಿಕ್ಷಕ ಸ್ನೇಹಿಯಾಗಿಸುವಂತೆ ಸರ್ಕಾರ, ಶಿಕ್ಷಣ ಸಚಿವರನ್ನು ಒತ್ತಾಯಿಸಲಾಗುವುದು ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರದ ಸ್ಕೌಟ್ಸ್ ಭವನದಲ್ಲಿ ಶನಿವಾರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿ, ಶಿಕ್ಷಕ ಉತ್ತಮವಾಗಿ ಪಾಠ ಮಾಡಲು ಕುಟುಂಬ ಜತೆಗಿರಬೇಕು. ಕುಟುಂಬದಲ್ಲಿ ಪತಿ-ಪತ್ನಿ ಬೇರೆ ಬೇರೆ ಕಡೆ ಇದ್ದರೆ ಮಾನಸಿಕ ನೆಮ್ಮದಿ ಸಿಗದು. ಇದನ್ನು ಗಮನದಲ್ಲಿಟ್ಟುಕೊಂಡು ವರ್ಗಾವಣೆ ನೀತಿಯಲ್ಲಿ ಸಡಿಲಿಕೆ ಮಾಡಿ ಶಿಕ್ಷಕರು ಖುಷಿಯಿಂದ ಕೆಲಸ ಮಾಡುವ ವಾತಾವರಣ ರೂಪಿಸಬೇಕು ಎಂದರು.
ಜಿಲ್ಲಾ ಕೇಂದ್ರದಲ್ಲಿ ಗುರುಭವನ ನಿರ್ಮಾಣಕ್ಕೆ ಹಳೇ ಕಟ್ಟಡ ಕೆಡವಲು ಪಿಡಬ್ಲ್ಯುಡಿಗೆ ಪತ್ರ ಬರೆಯಲಾಗಿದೆ, ಪ್ರಕ್ರಿಯೆ ಮುಗಿದ ನಂತರ ಶೀಘ್ರ ಶಾಸಕರ ಸಮ್ಮುಖದಲ್ಲಿ ಗುರುಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು. ಭವನಕ್ಕೆ ಎಲ್ಲ ಸಹಕಾರ ನೀಡಲಾಗುವುದು ಎಂದರು.
ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಎಮ್ಮೆಲ್ಸಿ ವೈ.ಎ.ನಾರಾಯಣಸ್ವಾಮಿ, ಪ್ರಧಾನಿ ಮೋದಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸುತ್ತಿದ್ದಾರೆ. ಈ ಬಗ್ಗೆ ಹೆಚ್ಚು ವಿಮರ್ಶೆ, ಚರ್ಚೆ ನಡೆಯಬೇಕು. ಹಿಂದೆ 10,000 ಶಿಕ್ಷಕರ ನೇಮಕಕ್ಕೆ ನಡೆಸಿದ ಅರ್ಹತಾ ಪರೀಕ್ಷೆಯಲ್ಲಿ 1500 ಮಂದಿ ಮಾತ್ರ ಪಾಸಾಗಿದ್ದರು. ಇಂತಹ ಶಿಕ್ಷಣ ನೀಡುವ ತರಬೇತಿ ಸಂಸ್ಥೆಗಳ ಅಗತ್ಯವಿಲ್ಲ. ಉತ್ತರದಾಯಿತ್ವ ತುಂಬುವ, ಜೀವನ ಪರಿಕಲ್ಪನೆ ಕಲ್ಪಿಸುವ ಶಿಕ್ಷಣ ನಮ್ಮದಾಗಬೇಕು ಎಂದರು.
ಉತ್ತಮ ಶಿಕ್ಷಕರ ಪ್ರಶಸ್ತಿ ಆಯ್ಕೆಗೆ ಅರ್ಜಿ ಹಾಕಿಕೊಳ್ಳುವ ಪದ್ಧತಿ ಕೊನೆಗೊಂಡು ಸ್ವತಂತ್ರ ಸಂಸ್ಥೆಯಿಂದ ಆಯ್ಕೆ ನಡೆಸುವಂತೆ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೇನೆ. ಇದರಿಂದ ಪ್ರಾಮಾಣಿಕವಾಗಿ ಪಾಠ ಮಾಡುವ ಶಿಕ್ಷಕರಿಗೆ ಗೌರವ ಸಿಕ್ಕಂತಾಗುತ್ತದೆ ಎಂದರು.
ಶಾಸಕ ಕೆ.ಶ್ರೀನಿವಾಸಗೌಡ, ತಾಪಂ ಅಧ್ಯಕ್ಷ ಸೂಲೂರು ಆಂಜಿನಪ್ಪ, ಡಿಡಿಪಿಐ ಕೆ.ಎಂ.ಜಯರಾಮರೆಡ್ಡಿ, ಶಿಕ್ಷಣಾಧಿಕಾರಿಗಳಾದ ಎ.ಎನ್.ನಾಗೇಂದ್ರಪ್ರಸಾದ್, ಸಿ.ಆರ್.ಅಶೋಕ್, ಬಿಇಒ ನಾಗರಾಜಗೌಡ, ಡಿವೈಪಿಸಿ ಮೋಹನ್ ಬಾಬು, ವಿಷಯ ಪರಿವೀಕ್ಷಕರಾದ ಶಶಿವದನ, ಕೃಷ್ಣಪ್ಪ, ಗಾಯತ್ರಿ, ವೆಂಕಟೇಶಪ್ಪ, ದೈಹಿಕ ಶಿಕ್ಷಣ ಅಧೀಕ್ಷಕ ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ವಿ.ಜಗನ್ನಾಥ್, ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳಾದ ರುದ್ರಪ್ಪ, ಅನಿಲ್‌ಕುಮಾರ್, ಜಿ.ಶ್ರೀನಿವಾಸ್, ಶಂಕರಪ್ಪ, ಖಾಸಗಿ ಶಾಲೆಗಳ ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ಮುನಿಯಪ್ಪ ಮತ್ತಿತರರಿದ್ದರು.
57 ನಿವೃತ್ತ ಶಿಕ್ಷಕರನ್ನು ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ 18 ಶಿಕ್ಷಕರನ್ನು ಸನ್ಮಾನಿಸಲಾಯಿತು.
ಶಿಕ್ಷಕರೆಂದರೆ ಸಮಾಜದಲ್ಲಿ ಇಂದಿಗೂ ಗೌರವವಿದೆ. ವೃತ್ತಿ ಘನತೆ ಗಾಂಭೀರ್ಯತೆ ಉಳಿಸಿಕೊಳ್ಳಿ, ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಸೋಲದಿರಿ. ಬದಲಾವಣೆ ನಿರಂತರ, ಕರೊನಾದಿಂದ ಸ್ಥಿತ್ಯಂತರದ ಈ ವೃತ್ತಿಯಲ್ಲಿ ಶಿಕ್ಷಕರು ವಿದ್ಯಾಗಮನದಡಿ ಹಳ್ಳಿಗಳಿಗೆ ಹೋಗಿ ಕಲಿಸುತ್ತಿರುವುದು ಶ್ಲಾಘನೀಯ.
ಸಿ.ಸತ್ಯಭಾಮ, ಜಿಲ್ಲಾಧಿಕಾರಿ
ರೂ. 50 ಸಾವಿರ ಬಹುಮಾನ: ಮುಂದಿನ ವರ್ಷದಿಂದ ಉತ್ತಮ ಶಿಕ್ಷಕರ ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲೆಯ ಒಬ್ಬ ಅತ್ಯುತ್ತಮ ಶಿಕ್ಷಕರಿಗೆ 50,000 ರೂ. ಬಹುಮಾನ ನೀಡಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಗೋವಿಂದರಾಜು ಪ್ರಕಟಿಸಿದರು.