ಬೂದಿಕೋಟೆ: ಬೂದಿಕೋಟೆ ಹೋಬಳಿಯ ಗಡಿಭಾಗದ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದ್ದು, ಲಕ್ಷಾಂತರ ರೂ. ಬೆಳೆ ಬಾಳುವ ಟೊಮ್ಯಾಟೊ, ರಾಗಿ, ಚೆಂಡುಹೂವು, ಮೆಣಸಿನಕಾಯಿ, ಶೇಂಗಾ ಸೇರಿ ಅಪಾರ ಪ್ರಮಾಣದ ಬೆಳೆಗಳನ್ನು ನಾಶಪಡಿಸಿವೆ.
ಕಳೆದ ಹಲವು ದಿನಗಳಿಂದ ಯರಗೋಳ್ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿರುವ 10ಕ್ಕೂ ಹೆಚ್ಚು ಕಾಡಾನೆಗಳು ಭಾನುವಾರ ತಡರಾತ್ರಿ ಬಲಮಂದೆ ಪಂಚಾಯಿತಿ ವ್ಯಾಪ್ತಿಯ ಬೀಮಗಾನಹಳ್ಳಿಯ ರೈತ ಗುಂಡಪ್ಪ ಅವರ 2 ಎಕರೆ ಟೊಮ್ಯಾಟೊ, 2 ಎಕರೆ ರಾಗಿ, ನಾಗರಾಜಪ್ಪ ಅವರ 1 ಎಕರೆ ಮೆಣಸಿನಕಾಯಿ, 2 ಎಕರೆ ರಾಗಿ, ನಾರಾಯಣಪ್ಪ ಅವರ 1 ಎಕರೆ ಚೆಂಡು ಹೂವು, ಬಲಮಂದೆ ಗ್ರಾಮದ ರೈತರಾದ ನಾಗರಾಜಪ್ಪ ಹಾಗೂ ನಾರಾಯಣಸ್ವಾಮಿ ಅವರ ತಲಾ ಒಂದು ಎಕರೆ ಶೇಂಗಾ, ಸೋಮಶೇಖರ್ ಬೆಳೆದಿದ್ದ ಶೇಂಗಾ, ಮುನಿವೆಂಕಟಪ್ಪ ತೋಟದ ತೊಗರಿ ಬೆಳೆ ನಾಶಪಡಿಸಿವೆ.
ಗುಲ್ಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕೊತ್ತೂರು ಗ್ರಾಮದ ವೆಂಕಟರಾಮಪ್ಪ ಎಂಬುವವರ 1 ಎಕರೆ ರಾಗಿ, ಒಂದೂವರೆ ಎಕರೆ ಶೇಂಗಾ, ದಿನ್ನೂರು ರೈತ ಮಹಿಳೆ ನಾರಾಯಣಮ್ಮ ಅವರ ರಾಗಿ ಬೆಳೆ, ಶಾಂತಮ್ಮಅವರ ಶೇಂಗಾ, ಮುನಿರಾಜು ಹಾಗೂ ಪಲಮಡಗು ಗ್ರಾಮದ ರೈತ ರಾಮಚಂದ್ರಪ್ಪ ಆವರ ರಾಗಿ ಬೆಳೆ ನಾಶ ಮಾಡಿವೆ.
11 ಆನೆಗಳ ಹಿಂಡು ಎರಡು ಗುಂಪುಗಳಾಗಿ ಬೇರೆ ಬೇರೆ ಕಡೆ ಬೆಳೆ ನಾಶಮಾಡಿದ್ದು, ಎರಡೂ ಗುಂಪನ್ನು ಒಂದು ಕಡೆ ಸೇರಿಸಿ ಅರಣ್ಯಪ್ರದೇಶಕ್ಕೆ ಓಡಿಸಲು ಕಾರ್ಯಾಚರಣೆ ಮಾಡುತ್ತಿರುವುದಾಗಿ ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಗಡಿ ಭಾಗದಲ್ಲಿ ಪದೇ ಪದೆ ಆನೆ ದಾಳಿಗೆ ಬೆಳೆ ನಾಶವಾಗುತ್ತಿದೆ. ಭಾನುವಾರ ರಾತ್ರಿ ಕಾಡಾನೆ ದಾಳಿ ಗಮನಿಸಿ ಪಟಾಕಿ ಸಿಡಿಸಿ ಓಡಿಸಿದೆವು. ಮತ್ತೆ ಬೆಳಗಿನ ಜಾವ ಬಂದು ಬೆಳೆ ನಾಶಮಾಡಿವೆ. ಜನವರಿಯಲ್ಲಿ ಒಮ್ಮೆ ಬೆಳೆ ನಾಶವಾಗಿದ್ದು, ಅರಣ್ಯ ಇಲಾಖೆಗೆ ಪರಿಹಾರ ನೀಡಲ ಅರ್ಜಿ ಸಲ್ಲಿಸಿದ್ದರೂ ಪರಿಹಾರ ದೊರೆತಿಲ್ಲ. ನಾಗರಾಜಪ್ಪ, ರೈತ ಭೀಮಗಾನಹಳ್ಳಿ