ಬೂದಿಕೋಟೆ: ಕರೊನಾ ಲಾಕ್‌ಡೌನ್ ಸಮಯದಲ್ಲಿ ಸೂಕ್ತ ಬೆಲೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದ ರೈತರ ನೆರವಿಗೆ ರಾಜ್ಯ ಸರ್ಕಾರ ಧಾವಿಸಿ ಸಹಾಯ ಧನ ಘೋಷಣೆ ಮಾಡಿ ಹಲವು ತಿಂಗಳು ಕಳೆದರೂ ಪರಿಹಾರ ಮಾತ್ರ ಇನ್ನೂ ಕೈ ಸೇರಿಲ್ಲ.
ಲಾಕ್‌ಡೌನ್ ಸಮಯದಲ್ಲಿ ಹೂವು, ಹಣ್ಣು ಹಾಗೂ ಇತರ ತರಕಾರಿ ಬೆಳೆದು ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ಇಲ್ಲದೆ ನಷ್ಟವಾಗಿ ಆರ್ಥಿಕ ಸಂಕಷ್ಟ ಅನುಭವಿಸುವಂತಾಯಿತು. ಈ ಸಂದರ್ಭದಲ್ಲಿ ಸರ್ಕಾರ ಹೂವು ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 25 ಸಾವಿರ ರೂ. ಹಾಗೂ ಹಣ್ಣು ಮತ್ತು ತರಕಾರಿ ಬೆಳೆಗಳಾರರಿಗೆ ಪ್ರತಿ ಹೆಕ್ಟೇರ್‌ಗೆ 15 ಸಾವಿರ ರೂ. ಪರಿಹಾರ ನೀಡುವುದಾಗಿ ಘೋಷಿಸಿತ್ತು.
ಸರ್ವೇಯಲ್ಲಿ ಲೋಪ: ಸರ್ವೇದಾರರು ಸರಿಯಾಗಿ ಬೆಳೆ ಸರ್ವೇ ಮಾಡದೆ, ಬೆಳೆಯ ಹೆಸರನ್ನು ನಮೂದಿಸದೆ ತಪ್ಪು ಮಾಹಿತಿ ಅಪ್‌ಲೋಡ್ ಮಾಡಿರುವುದರಿಂದ ಸರ್ಕಾರ ಘೋಷನೆ ಮಾಡಿದ ಪರಿಹಾರ ಪಡೆಯಲು ರೈತರು ಅನರ್ಹರಾಗಿದ್ದಾರೆ. ಮೊದಲೇ ಬೆಳೆ ಕಳೆದುಕೊಂಡು ನಷ್ಟದಲ್ಲಿದ್ದ ರೈತರು ಸರ್ವೇಯಲ್ಲಿ ಸಮರ್ಪಕ ಮಾಹಿತಿ ಇಲ್ಲದೆ ಕಂಗಾಲಾಗಿದ್ದು, ಇತ್ತ ಬೆಳೆಯೂ ಇಲ್ಲದೆ ಅತ್ತ ಪರಿಹಾರವೂ ಇಲ್ಲದೆ ಪರಿತಪಿಸುವಂತಾಗಿದೆ.
ಬಂಗಾರಪೇಟೆ ಮತ್ತು ಕೆಜಿಎಫ್ ತಾಲೂಕಿನಲ್ಲಿ ಸರ್ವೇ ಪಟ್ಟಿಯಲ್ಲಿ ಇಲ್ಲದ ಸುಮಾರು 600 ರೈತರು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಬೆಳೆ ಪರಿಹಾರ ನೀಡುವಂತೆ ಎಲ್ಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿ ಹಲವು ತಿಂಗಳು ಕಳೆದರೂ ಪರಿಹಾರದ ಹಣ ಮಾತ್ರ ಬಂದಿಲ್ಲ.
ತೋಟದಲ್ಲೇ ಬೆಳೆ ನಾಶ: ಬೂದಿಕೋಟೆ ಹೋಬಳಿಯಲ್ಲಿನ ಉಕ್ಕುಂದ, ಮಾರಾಂಡಹಳ್ಳಿ, ಬೂದಿಕೋಟೆ, ಪಚ್ಚಾರ‌್ಲಹಳ್ಳಿ ಸೇರಿ ಹೋಬಳಿ ವ್ಯಾಪ್ತಿಯ ರೈತರು ಅಲ್ಪಸ್ವಲ್ಪ ನೀರಿನಿಂದ ನೂರಾರು ಎಕರೆ ಪ್ರದೇಶದಲ್ಲಿ ಟೊಮ್ಯಾಟೊ, ಚೆಂಡು ಹೂವು ಹಾಗೂ ಇತರ ತರಕಾರಿ ಬೆಳೆದಿದ್ದರು. ಲಾಕ್‌ಡೌನ್ ಸಮಯದಲ್ಲಿ ಸಮರ್ಪಕ ಬೆಲೆ ಇಲ್ಲದೆ ಕೆಲವು ರೈತರು ತೋಟದಲ್ಲಿಯೇ ಬೆಳೆ ನಾಶಪಡಿಸಿದ್ದರಿಂದ ರೈತರಿಗೆ ಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿದೆ.
ಪರಿಹಾರ ನೀಡಲು ಒತ್ತಾಯ: ಬೆಳೆ ಸಮೀಕ್ಷೆ ಪಟ್ಟಿಯಲ್ಲಿ ಇರುವ ಕೆಲ ರೈತರಿಗೆ ಮಾತ್ರ ಪರಿಹಾರದ ಹಣ ಬಂದಿದ್ದು, ಉಳಿದ ರೈತರು ಪರಿಹಾರಕ್ಕಾಗಿ ಕಚೇರಿಗೆ ಅಲೆಯುವಂತಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ: ಸರ್ಕಾರ 2019-20ರ ಹಿಂಗಾರು ಮತ್ತು ಮುಂಗಾರಿನ ಬೆಳೆ ಸರ್ವೇ ಮಾನದಂಡವನ್ನಾಗಿಟ್ಟುಕೊಂಡು ಪರಿಹಾರ ನೀಡಲು ಮುಂದಾಗಿರುವುದರಿಂದ ಸಾವಿರಾರು ರೈತರು ಸಹಾಯಧನದಿಂದ ವಂಚಿತರಾಗಿದ್ದಾರೆ. ಬಂಗಾರಪೇಟೆ ಮತ್ತು ಕೆಜಿಎಫ್ ತಾಲೂಕಿನ ಸುಮಾರು 2400 ಸರ್ವೇ ನಂಬರ್‌ಗಳಿಗೆ ಮಾತ್ರ ಪರಿಹಾರ ನೀಡಲು ಮುಂದಾಗಿದ್ದು, ಅಧಿಕಾರಿಗಳ ಹಾಗೂ ಬೆಳೆ ಸಮೀಕ್ಷಕರ ನಿರ್ಲಕ್ಷ್ಯದಿಂದ ಸರ್ಕಾರ ನೀಡುವ ಪರಿಹಾರದಿಂದ ವಂಚಿತರಾದರು.
ಮೂರು ಎಕರೆಯಲ್ಲಿ ಟೊಮ್ಯಾಟೊ ಹಾಗೂ 2 ಎಕರೆಯಲ್ಲಿ ಚೆಂಡು ಹೂವು ಬೆಳೆದಿದ್ದು, ಬೆಲೆ ಇಲ್ಲದೆ ಲಕ್ಷಾಂತರ ರೂ ನಷ್ಟವಾಗಿದೆ. ಸರ್ವೇದಾರರ ನಿರ್ಲಕ್ಷ್ಯದಿಂದ ಪರಿಹಾರದ ಫಲಾನುಭವಿ ಪಟ್ಟಿಯಿಂದ ಕೈ ಬಿಡಲಾಗಿದ್ದು, ಪರಿಹಾರ ನೀಡುವಂತೆ ಇಲಾಖೆಗೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೃಷ್ಣಮೂರ್ತಿ, ಮಾರಾಂಡಹಳ್ಳಿ ರೈತ ಸರ್ವೇ ಪಟ್ಟಿಯಲ್ಲಿದ್ದ ರೈತರು ಪರಿಹಾರಕ್ಕಾಗಿ ಸಲ್ಲಿಸಿದ ದಾಖಲೆ ಸರಿ ಇಲ್ಲದ ಕಾರಣ ಕೆಲವರಿಗೆ ಹಣ ಜಮೆ ಆಗಲಿಲ್ಲ. ಕೆಲ ರೈತರಿಂದ ಮತ್ತೊಮ್ಮೆ ದಾಖಲೆ ಪಡೆದಿದ್ದು, ಹಣ ಜಮಾ ಆಗುವ ಹಂತದಲ್ಲಿದೆ. ಎನ್.ಶಿವಾರೆಡ್ಡಿ, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ ಬಂಗಾರಪೇಟೆ