ಕೋಲಾರ: ನಗರದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಳ್ಳುತ್ತಿರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ನಚಿಕೇತ ನಿಲಯಕ್ಕೆ ಮಂಗಳವಾರ ದಿಢೀರ್ ಭೇಟಿ ನೀಡಿದ ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಕುಮಾರ್ ಕಳಪೆ ಕಾಮಗಾರಿಗೆ ಆಕ್ರೋಶ ವ್ಯಕ್ತಪಡಿಸಿದರು.
ನಚಿಕೇತ ನಿಲಯದಲ್ಲಿ ಕಿತ್ತು ಹೋಗಿರುವ ಮೇಲ್ಛಾವಣಿಗೆ ನಡೆದಿರುವ ಕೆಲಸ ತೇಪೆ ಹಾಕಿದಂತಿರುವುದು, ಕೆಲಸ ಪೂರ್ಣವಾಗಿರುವ ಗೋಡೆ ಕೂಡಾ ಬಿರುಕು ಬಿಟ್ಟಿರುವುದು, ಪ್ಲಾಸ್ಟಿಂಗ್ ಹಾಳಾಗಿರುವುದು ಕಂಡುಬಂತು. ಕಟ್ಟಡದ ಮೇಲ್ಛಾವಣಿ ಬಿರುಕುಬಿಟ್ಟಿದ್ದರೂ ಸರಿಪಡಿಸದೆ ಸುಣ್ಣಬಣ್ಣ ಬಳಿಯತ್ತಿರುವುದು ಹಾಗೂ ಬಳಿದಿರುವ ಬಣ್ಣವೂ ಕಿತ್ತು ಬರುವಂತಿದ್ದುದನ್ನು ಕಂಡು ಗುತ್ತಿಗೆದಾರರ ವಿರುದ್ಧ ಕಿಡಿಕಾರಿದ ಅಧ್ಯಕ್ಷರು ಕಾಟಾಚಾರಕ್ಕೆಂಬಂತೆ ಹಾಸ್ಟೆಲ್ ನವೀಕರಣ ಮಾಡುತ್ತಿದ್ದಾರೆ. 1 ಕೋಟಿ ರುಪಾಯಿ ತಮಾಷೆಯಲ್ಲ, ಅರ್ಧಂಬರ್ದ ಕೆಲಸ ಮಾಡಿ ಹಣ ಖರ್ಚಾಗಿದೆ ಎಂದು ಲೆಕ್ಕ ತೋರಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಕಳಪೆ ಕಾಮಗಾರಿ ಕುರಿತು ಪ್ರಶ್ನೆ ಮಾಡಿದ ಆಧ್ಯಕ್ಷರ ಮಾತಿಗೆ ಸಮರ್ಪಕ ಉತ್ತರ ನೀಡದೆ ತಡಬಡಾಯಿಸಿದ ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡ ಅರುಣ್‌ಕುಮಾರ್ ಈಗಲಾದರೂ ಉಳಿದಿರುವ ಕಾಮಗಾರಿ ಗುಣಮಟ್ಟದಿಂದ ಮಾಡಿ ಇಲ್ಲದಿದ್ದರೆ ನಿಮ್ಮನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಿ ಮುಂದೆ ಯಾವುದೇ ಟೆಂಡರ್ ಸಿಗದಂತೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅರುಣ್‌ಕುಮಾರ್, ನಚಿಕೇತ ನಿಲಯದಲ್ಲಿ ಓದಿದ ಅನೇಕರು ಉತ್ತಮ ಆಧಿಕಾರಿ ಹಾಗೂ ಜನಪ್ರತಿನಿಧಿಗಳಾಗಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಇಲ್ಲಿಂದಲೇ ಭವಿಷ್ಯ ರೂಪಿಸಿಕೊಂಡಿದ್ದಾರೆ. ನಾನು ಸ್ಥಾಯಿ ಸಮಿತಿ ಆಧ್ಯಕ್ಷ ಸ್ಥಾನದಿಂದ ಇಳಿಯುವುದರೊಳಗೆ ಕಟ್ಟಡ ನವೀಕರಣಗೊಳಿಸಿ ಜಿಲ್ಲೆಯಲ್ಲಿ ಮಾದರಿಯಾಗಿ ಮಾಡಲಾಗುವುದು ಎಂದರು.
1 ಕೋಟಿ ರೂ. ವೆಚ್ಚದಲ್ಲಿ ಹಾಸ್ಟೆಲ್ ಕಟ್ಟಡ ನವೀಕರಣಗೊಳ್ಳುತ್ತಿದೆ. ಕಟ್ಟಡ ಪರಿಶೀಲನೆ ವೇಳೆ ಲೋಪದೋಷ ಕಂಡುಬಂದಿದ್ದರಿಂದ ಆಧಿಕಾರಿಗಳಿಗೆ ಎಚ್ಚರಿಕೆ ನೀಡಿ ಗುಣಮಟ್ಟದ ಕಾಮಗಾರಿ ನಡೆಸಲು ಸೂಚಿಸಿದ್ದಾಗಿ ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಪ್ರಭಾರ ಜಂಟಿ ನಿರ್ದೇಶಕ ಬಾಲಾಜಿ, ಇಂಜಿನಿಯರ್‌ಗಳಾದ ಬೀರಲಿಂಗಪ್ಪ, ಬೋಗೇಗೌಡ, ನಾಗರಾಜ್, ಗುತ್ತಿಗೆದಾರ ಏಕಾಂಬರಯ್ಯ, ಹಾಸ್ಟೆಲ್ ವಾರ್ಡನ್ ರವಿ ಇತರರು ಇದ್ದರು.