ಅಂತರಾಷ್ಟ್ರೀಯ ಮಾರುಟ್ಟೆಯಲ್ಲಿ ಕೋಕೋ ಬೀಜ ಬೇಡಿಕೆಯಷ್ಟು ಪೂರೈಕೆಯಾಗದ ಹಿನ್ನೆಲೆಯಲ್ಲಿ ಮಾರುಕಟ್ಟೆ ಧಾರಣೆ ಗರಿಷ್ಠ ಮಟ್ಟಕ್ಕೆ ತಲುಪಿದೆ. ಅಕಾಲಿಕ ಮಳೆಯಿಂದ ಇಳುವರಿ ಕಡಿಮೆಯಿದ್ದರೂ, ಅಡಕೆ ಧಾರಣೆ ಕುಸಿತದಿಂದ ಕಂಗೆಟ್ಟಿರುವ ರೈತರಿಗೆ ಸ್ವಲ್ಪಮಟ್ಟಿನ ಆರ್ಥಿಕ ಚೇತರಿಕೆಗೆ ಅವಕಾಶ ಮಾಡಿಕೊಟ್ಟಿದೆ.
ಕೋಕೋ ಆಧಾರಿತ ಆಹಾರ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿರುವ ಕಾರಣದಿಂದ ಕ್ಯಾಂಪ್ಕೋ ಸಹಿತ ವಿವಿಧ ಕಂಪನಿಗಳು ಇದರತ್ತ ಹೆಚ್ಚಿನ ಗಮನ ಹರಿಸಿವೆ. ಆಪ್ರಿಕಾದ ವಿವಿಧ ದೇಶಗಳಲ್ಲಿ ಕೋಕೋ ಉತ್ಪಾದನೆ ಕುಸಿದ ಪರಿಣಾಮ ಬಹುರಾಷ್ಟ್ರೀಯ ಕಂಪನಿಗಳು ದೇಶದ ಕೋಕೋ ಬೀಜದ ಕಡೆಗೆ ಹೆಚ್ಚಿನ ಆಸಕ್ತಿ ತೋರಿಸಿ ಧಾರಣೆ ಏರಿಸುತ್ತಿದ್ದಾರೆನ್ನಲಾಗಿದೆ.
ಕರ್ನಾಟಕದ ಪಶ್ಚಿಮಘಟ್ಟದ ತಪ್ಪಲು ಪ್ರದೇಶದಲ್ಲಿ ಕೋಕೋ ಉತ್ತಮ ಇಳುವರಿ ನೀಡುತ್ತಿದೆ. ಕರ್ನಾಟಕದ ಕರಾವಳಿ ಭಾಗವಾದ ಕುಂದಾಪುರದಿಂದ ಸುಳ್ಯ ಭಾಗದ ಮಧ್ಯದಲ್ಲಿ ಕೋಕೋ ಬೆಳೆಯಲಾಗುತ್ತಿದೆ. ಸುಳ್ಯ ಭಾಗದ ಅರಂತೋಡು, ಚೆಂಬು ಸಹಿತ ಆಸುಪಾಸಿನ ಭಾಗದಲ್ಲಿ ಉತ್ತಮ -ಸಲು ಬರುತ್ತಿದೆ ಎಂಬುದು ಕೃಷಿಕರ ಮಾತಾಗಿದೆ. ಕರ್ನಾಟಕ ಹೊರತು ಪಡಿಸಿ ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಅಸ್ಸಾಂ ಭಾಗದಲ್ಲಿ ಕೋಕೋ ಬೆಳೆಯಲಾಗುತ್ತಿದೆ.
ಅಡಕೆ, ತೆಂಗಿನ ತೋಟದಲ್ಲಿ ಮಿಶ್ರ ಬೆಳೆಯಾಗಿ ಕೋಕೋವನ್ನು ಬೆಳೆಯುವ ಮೂಲಕ ಕೃಷಿಯನ್ನು ಲಾಭದಾಯಕವಾಗಿ ಮಾಡಲಾಗುತ್ತಿದೆ. ಕೆಲವು ವರ್ಷಗಳಿಂದ ಕೋಕೋಬೆಳೆಗೆ ಸರಿಯಾದ ಪ್ರೋತ್ಸಾಹ ಸಿಗದ ಕಾರಣ ಬೇಡಿಕೆಯಿದ್ದರೂ, ಬೆಳೆ ಕುಂಠಿತವಾಗುತ್ತಾ ಸಾಗಿದೆ. ಕರಾವಳಿ ಭಾಗದಲ್ಲಿ ಗುಣಮಟ್ಟದ ಕೊಕ್ಕೋ ಲಭಿಸುವುದರಿಂದ ವೈಜ್ಞಾನಿಕ ರೀತಿಯಲ್ಲಿ ಉಪ ಬೆಳೆಯಾಗಿ ಬೆಳೆಯಲು ಪ್ರೋತ್ಸಾಹ ನೀಡುವ ಅನಿವಾರ್ಯತೆ ಇದೆ.
ಅಕಾಲಿಕ ಮಳೆಯಿಂದ ಬೆಳೆ ಕುಂಠಿತ!
ಮಳೆಗಾಲ ಕಳೆದು ಬೇಸಿಗೆ ಬರುತ್ತಿದ್ದಂತೆ ಕೋಕೋ ಉತ್ತಮ ಇಳುವರಿ ನೀಡುತ್ತದೆ.ಕೋಕೋ ಗಿಡಗಳಿಗೆ ಒತ್ತಡ ನಿರ್ಮಾಣವಾಗಿ ಹೂಬಿಡುವ ಸಮಯವಾದ ನವೆಂಬರ್- ಡಿಸೆಂಬರ್‌ನಲ್ಲಿ ಈ ಬಾರಿ ಮಳೆಯಾಗಿರುವುದರಿಂದ ಗಿಡಗಳು ಹೂಬಿಡುವ ಬದಲಾಗಿ ಚಿಗುರೊಡೆದಿದೆ. ಇದರಿಂದ ಕೃಷಿಕರಿಗೆ ಸಮರ್ಪಕವಾಗಿ ಬೆಳೆ ಕೈಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.
ಅಡಕೆ ಧಾರಣೆ ಏರಿಕೆ ಪರಿಣಾಮ:
ಜಿಲ್ಲೆಯ ಸುಮಾರು ೧ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೋಕೋ ಬೆಳೆ ಇತ್ತಾದರೂ, ಕಳೆದ ಕೆಲವು ವರ್ಷಗಳಿಂದ ಅಡಕೆ ಧಾರಣೆಯಲ್ಲಿ ಏರಿಕೆ ಕಾಣಿಸಿದ್ದರಿಂದ ತೋಟಗಳ ಮಧ್ಯೆ ಇದ್ದ ಕೋಕೋ ಗಿಡಗಳನ್ನು ತೆಗೆದು ಅಡಕೆ ಬೆಳೆಯಲಾಗಿತ್ತು. ಇದರಿಂದ ಕೋಕೋ ಬೆಳೆಯ ಪ್ರಮಾಣದಲ್ಲಿ ದೊಡ್ಡ ಮಟ್ಟದ ಕುಸಿತವಾಗಿದೆ.
ಕ್ಯಾಂಪ್ಕೊ ಖರೀದಿ:
೨೦೨೦-೨೧ರಲ್ಲಿ ೩೨೫೦೦ ಕಿಂಟ್ವಾಲ್, ೨೦೨೧-೨೨ರಲ್ಲಿ ೨೩೮೦೦ ಕಿಂಟ್ವಾಲ್, ೨೨-೨೩ರಲ್ಲಿ ೧೪೦೧೯ ಕಿಂಟ್ವಾಲ್, ೨೩-೨೪ರಲ್ಲಿ ೧೬೫೦೦ ಕಿಂಟ್ವಾಲ್ ಕೋಕೋವನ್ನು ಕ್ಯಾಂಪ್ಕೊ ಖರೀದಿಸಿತ್ತು. ೨೦೨೧-೨೨ನೇ ಸಾಲಿನಲ್ಲಿ ಕನಿಷ್ಠ ೫೫ರೂ, ಗರಿಷ್ಠ ೭೦ರೂ, ೨೦೨೨-೨೩ನೇ ಸಾಲಿನಲ್ಲಿ ಕನಿಷ್ಠ ೫೮ ರೂ, ಗರಿಷ್ಠ ೭೫ ರೂ. ಧಾರಣೆ ನೀಡಲಾಗಿತ್ತು. ಕ್ಯಾಂಪ್ಕೊ ೧೦೦ರೂ.ಗೆ ಕೋಕೋ ಹಸಿ ಬೀಜವನ್ನು ಖರೀದಿಸಲು ಪ್ರಾರಂಭಿಸಿದ್ದು, ಸದ್ಯ ಕರಾವಳಿ ಮುಕ್ತ ಮಾರುಕಟ್ಟೆಯಲ್ಲೂ ಈ ಧಾರಣೆ ನೀಡಲಾಗುತ್ತಿದೆ. ಒಣ ಕೋಕೋ ಬೀಜವೂ ೩೭೦ ರೂ.ಗೆ ಖರೀದಿಯಾಗುತ್ತಿದೆ.
ರಿಯಾಯಿತಿ ದರದಲ್ಲಿ ಗಿಡ
ಕ್ಯಾಂಪ್ಕೊ ಸದಸ್ಯ ಬೆಳೆಗಾರರಿಗೆ ರಿಯಾಯಿತಿ ದರದಲ್ಲಿ ಗಿಡಗಳನ್ನು ವಿತರಣೆ ಮಾಡಲಾಗುತ್ತಿದೆ. ಒಂದು ಗಿಡಕ್ಕೆ ೫ರೂ. ವಿಽಸಲಾಗುತ್ತಿದ್ದು, ಬೇಡಿಕೆಯನ್ನು ಮಾರ್ಚ್ ಅಂತ್ಯದ ಮೊದಲು ಪಡೆದು ಮಳೆಗಾಲದ ಆರಂಭದಲ್ಲಿ ಗಿಡಗಳನ್ನು ಕೃಷಿಕರಿಗೆ ಪೂರೈಕೆ ಮಾಡುತ್ತದೆ. ಪ್ರತಿ ವರ್ಷ ೨೬ರಿಂದ೩೦ ಸಾವಿರ ಗಿಡ ವಿತರಣೆಯಾಗುತ್ತಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಕೋ ಬೆಲೆ ಏರಿಕೆಯಾಗಿದೆ. ಈ ಕಾರಣದಿಂದ ದೇಶದಲ್ಲಿ ಕೋಕೋ ಖರೀದಿಯ ಪೈಪೋಟಿ ಪ್ರಾರಂಭವಾಗಿ ಧಾರಣೆ ಸಾರ್ವಕಾಲಿಕ ದಾಖಲೆಗೆ ತಲುಪುತ್ತಿದೆ. ಬೆಳೆಗಾರರಿಂದ ಕಂಪನಿಗಳು ಖರೀದಿಗೆ ಮುಂದಾಗುತ್ತಿದೆಯಾದರೂ, ಅಗತ್ಯ ಬೇಡಿಕೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಕ್ಯಾಂಪ್ಕೋಗೆ ತಿಂಗಳಿಗೆ ೫೦೦ರಿಂದ ೬೦೦ ಟನ್ ಕೋಕೋ ಬೇಡಿಕೆ ಇರುವ ಕಾರಣಕ್ಕೆ ಆಂದ್ರ ಪ್ರದೇಶದ ಕಡೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿಕರು ಅಡಕೆ ಪರ್ಯಾಯ ಬೆಳೆಗೆ ಹೆಚ್ಚಿನ ಒತ್ತು ನೀಡುವ ಜತೆಗೆ, ಮಿಶ್ರಬೆಳೆಗೆ ಹೆಚ್ಚಿನ ಮಹತ್ವ ನೀಡುವುದರಿಂದ ಹೆಚ್ಚಿನ ಲಾಭಗಳಿಸಬಹುದು.
| ಶಂಕರನಾರಾಯಣ ಖಂಡಿಗ
ಉಪಾಧ್ಯಕ್ಷರು, ಕ್ಯಾಂಪ್ಕೊ