ಜಿಲ್ಲೆ

ಉಪ ಅಧೀಕ್ಷಕರ ಹುದ್ದೆಗಳಿಗೆ ಕೊಕ್

ಮರಿದೇವ ಹೂಗಾರ ಹುಬ್ಬಳ್ಳಿ

ಚರ್ಚೆಗೆ ಗ್ರಾಸವಾಗಿದ್ದ ಇಲ್ಲಿನ ಕಿಮ್್ಸ ಉಪ ವೈದ್ಯಕೀಯ ಅಧೀಕ್ಷಕ ಹುದ್ದೆಗಳಿಗೆ ಕೊಕ್ ನೀಡಲಾಗಿದೆ.

ವೈದ್ಯಕೀಯ ಅಧೀಕ್ಷಕ ಹುದ್ದೆಯೊಂದೇ ಉಳಿಯಲಿದ್ದು, ಮೂವರಿಗೆ ನೀಡಿದ್ದ ಈ ಅಧಿಕಾರವನ್ನು ಹಿಂಪಡೆಯಲಾಗಿದೆ.

ಆಡಳಿತಾತ್ಮಕ ವ್ಯವಸ್ಥೆ ಚುರುಕುಗೊಳಿಸಲು ಈ ಹಿಂದೆ ನಿರ್ದೇಶಕರಾಗಿದ್ದ ದತ್ತಾತ್ರೇಯ ಬಂಟ್ ಅವರು ಉಪ ವೈದ್ಯಕೀಯ ಅಧೀಕ್ಷಕರ ಹುದ್ದೆಗಳನ್ನು ಗವರ್ನಿಂಗ್ ಕೌನ್ಸಿಲ್​ನಲ್ಲಿಟ್ಟು ಅಂಕಿತಗೊಳಿಸಿದ್ದರು.

ಇದನ್ನೇ ಈಗಿನ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮುಂದುವರಿಸಿದ್ದಲ್ಲದೆ, ಇನ್ನೊಂದು ಇದೇ ಹುದ್ದೆಯನ್ನು ಸೃಜಿಸಿದ್ದರು. ಇದಕ್ಕೆ ಆಕ್ಷೇಪಿಸಿ ಕೆಲವರು ಕೋರ್ಟ್ ಮೆಟ್ಟಿಲು ಹತ್ತಿದ್ದರು.

ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಕೋರ್ಟ್ ಪತ್ರ ಬರೆದು ಹುದ್ದೆ ಬರ್ಖಾಸ್ತುಗೊಳಿಸಲು ಸೂಚಿಸಿದೆ. ಇದೇ ಆಧಾರದಲ್ಲಿ ನಿರ್ದೇಶಕರು, ಈ ಹುದ್ದೆಯನ್ನು ಹಿಂಪಡೆದಿದ್ದಾರೆ.

ಫಾರ್ಮಕಾಲಜಿ ವಿಭಾಗದ ಪ್ರಾಧ್ಯಾಪಕಿ ಡಾ. ಜಾನಕಿ ತೊರವಿ, ನೇತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ರಾಜಶೇಖರ ದ್ಯಾಬೇರಿ, ಸರ್ಜರಿ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಸ್.ವೈ. ಮುಲ್ಕಿಪಾಟೀಲ ಅವರ ಉಪ ವೈದ್ಯಕೀಯ ಅಧೀಕ್ಷಕ ಹುದ್ದೆಯನ್ನು ಜು. 31ರಂದು ಹಿಂಪಡೆದು ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಇದಕ್ಕೂ ಮೊದಲು ಮಾರ್ಚ್ ತಿಂಗಳಲ್ಲಿ ಅವರಿಗೆ ನೀಡುತ್ತಿದ್ದ ವಿಶೇಷ ಭತ್ಯೆಯನ್ನು ಸ್ಥಗಿತಗೊಳಿಸಲಾಗಿತ್ತು.

ಸರ್ಕಾರದ ನಿಗಾ: ಈ ಮೊದಲೆಲ್ಲ ಗವರ್ನಿಂಗ್ ಕೌನ್ಸಿಲ್​ನಲ್ಲಿ ಮಂಡಿಸಿ ಅದರ ಆಧಾರದ ಮೇಲೆ ಕೆಲವೊಂದು ನೀತಿ-ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿತ್ತು.

ಈಗೀಗ ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆಯೇ ಪ್ರತಿಯೊಂದರ ಮೇಲೆ ನಿಗಾ ಇರಿಸಿದೆ. ಮುಂಬಡ್ತಿ, ತಾತ್ಕಾಲಿಕ ನೇಮಕ ಸೇರಿ ಇತರ ಕೆಲಸಗಳನ್ನು ನೋಡುತ್ತಿದೆ.

ಕೆಲವರು ನಿರ್ದೇಶಕರ ಗಮನಕ್ಕೆ ತಾರದೇ ನೇರವಾಗಿ ಸರ್ಕಾರದ ಬಾಗಿಲು ತಟ್ಟುತ್ತಿದ್ದರಿಂದ ಸರ್ಕಾರವೇ ವಿಶೇಷವಾಗಿ ನಿಗಾ ಇಡಲಾರಂಭಿಸಿದೆ.ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಉಪ ವೈದ್ಯಕೀಯ ಅಧೀಕ್ಷಕರ ಹುದ್ದೆಯನ್ನು ಹಿಂಪಡೆಯಲಾಗಿದೆ.ಅವರಿಗೆ ಈ ಮೊದಲು ನೀಡುತ್ತಿದ್ದ ವಿಶೇಷ ಭತ್ಯೆ ತಡೆಹಿಡಿಯಲಾಗಿತ್ತು. ರಾಜ್ಯ ಸರ್ಕಾರದ ಸೂಚನೆಯನ್ವಯ ಈ ನಿರ್ಧಾರ ಕೈಗೊಳ್ಳಲಾಗಿದೆ.| ಡಾ. ರಾಮಲಿಂಗಪ್ಪ ಅಂಟರತಾನಿಕಿಮ್್ಸ ನಿರ್ದೇಶಕ

ಕೆಲವೆಡೆ ಇವೆ ಹುದ್ದೆಗಳು

ಹುಬ್ಬಳ್ಳಿಯ ಕಿಮ್ಸ್​ನಲ್ಲಿ 2400 ಬೆಡ್​ಗಳಿವೆ. ಸೂಪರ್ ಸ್ಪೆಷಾಲಿಟಿ, ತಾಯಿ ಮತ್ತು ಮಕ್ಕಳ ವಿಭಾಗ, ಹೃದ್ರೋಗ ಸೇರಿ ಹಲವು ವಿಭಾಗಗಳಿವೆ. ಒಬ್ಬ ವೈದ್ಯಕೀಯ ಅಧೀಕ್ಷಕರಿಂದ ನಿರ್ವಹಣೆ ಅಸಾಧ್ಯ. ಈಗಿದ್ದ ಉಪ ವೈದ್ಯಕೀಯ ಅಧೀಕ್ಷಕರಿಂದಲೂ ಕಾರ್ಯನಿರ್ವಹಣೆ ಉತ್ತಮವಾಗಿ ಸಾಗಿತ್ತು. ಈಗಾಗಲೇ ಬೆಂಗಳೂರು ಮತ್ತು ಮೈಸೂರು ಮೆಡಿಕಲ್ ಕಾಲೇಜ್​ಗಳಲ್ಲಿ 2-3 ವೈದ್ಯಕೀಯ ಅಧೀಕ್ಷಕರಿದ್ದಾರೆ. ಅದರಂತೆ ಇಲ್ಲಿಯೂ ವೈದ್ಯಕೀಯ ಅಧೀಕ್ಷಕರ ಹುದ್ದೆ ಸೃಷ್ಟಿಗೆ ಮುಂದಡಿ ಇಡುವ ಸಾಧ್ಯತೆ ಇದೆ.