ಜಿಲ್ಲೆ

ಕೋಡಿಯಾಲ ನೂತನ ಜಿಪಂ ಕ್ಷೇತ್ರ?

Haveri

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

ಜಿಪಂ, ತಾಪಂ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಚುನಾವಣೆ ಆಯೋಗವು ಕ್ಷೇತ್ರ ವಿಂಗಡಣೆ ಕಾರ್ಯದಲ್ಲಿ ಬ್ಯುಸಿಯಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಯಾವ ಕ್ಷೇತ್ರ ಬದಲಾವಣೆಯಾಗಲಿದೆ ಹಾಗೂ 7ನೇ ಜಿಪಂ ಕ್ಷೇತ್ರ ಯಾವುದಾಗಲಿದೆ ಎಂಬ ಕುತೂಹಲ ಮೂಡಿಸಿದೆ.

ತಾಲೂಕಿನ 6 ಜಿಪಂ ಕ್ಷೇತ್ರಗಳ ಪೈಕಿ ಪ್ರಸಕ್ತ ಸಾಲಿನಲ್ಲಿ

ಚುನಾವಣೆ ಆಯೋಗ ಕ್ಷೇತ್ರ ವಿಂಗಡಣೆ ಮಾಡಿದ್ದು, ತಾಲೂಕಿಗೆ ಮತ್ತೊಂದು ಕ್ಷೇತ್ರ ಲಭ್ಯವಾಗಿದೆ. ಇದರಿಂದಾಗಿ ತಾಲೂಕಿನಲ್ಲಿ ಇದೀಗ 7 ಜಿಪಂ ಕ್ಷೇತ್ರ ಲಭಿಸಿದಂತಾಗಿದೆ. ಚುನಾವಣೆ ನಿಯಮಾವಳಿ ಪ್ರಕಾರ ಹೆಚ್ಚಿನ ಜನಸಂಖ್ಯೆ ಹೊಂದಿರುವ ಗ್ರಾಮವನ್ನು ಜಿಪಂ ಕ್ಷೇತ್ರದ ಕೇಂದ್ರ ಸ್ಥಾನವನ್ನಾಗಿ ಘೊಷಿಸಲಾಗುತ್ತದೆ. ಸದ್ಯ ತಾಲೂಕಿನಲ್ಲಿ ಮೇಡ್ಲೇರಿ, ಕರೂರ, ಹಲಗೇರಿ, ತುಮ್ಮಿನಕಟ್ಟಿ, ಕಾಕೋಳ, ಜೋಯಿಸರಹರಳಹಳ್ಳಿ ಸೇರಿ 6 ಜಿಪಂ ಕ್ಷೇತ್ರಗಳಿವೆ.

ಇವುಗಳನ್ನು ಹೊರತು ಪಡಿಸಿದರೆ ತಾಲೂಕಿನಲ್ಲಿ ಕೋಡಿಯಾಲ ಗ್ರಾಮ 7,061 ಜನಸಂಖ್ಯೆ ಹೊಂದಿದ್ದು, ಅತಿಹೆಚ್ಚು ಜನಸಂಖ್ಯೆ ಹೊಂದಿದ ಗ್ರಾಮವಾಗಿದೆ. ಈ ದಿಸೆಯಲ್ಲಿ ಕೋಡಿಯಾಲವನ್ನು ನೂತನ ಜಿಪಂ ಕ್ಷೇತ್ರವನ್ನಾಗಿ ಮಾಡಲು ಚುನಾವಣೆ ಆಯೋಗ ಸಿದ್ಧತೆ ನಡೆಸಿದೆ. ಜತೆಗೆ ನಲವಾಗಿಲ, ಕವಲೆತ್ತು, ಹಿರೇಬಿದರಿ, ಐರಣಿ, ನದಿಹರಳಹಳ್ಳಿ, ಹೂಲಿಕಟ್ಟಿ, ವಡೇರಾನಯಹಳ್ಳಿ ಸೇರಿ 7 ಗ್ರಾಮಗಳನ್ನು ಕೋಡಿಯಾಲ ಜಿಪಂ ಕ್ಷೇತ್ರಕ್ಕೆ ಸೇರಿಸುವ ಸಾಧ್ಯತೆಯಿದೆ.

ಎರಡು ಕ್ಷೇತ್ರದ ಕೇಂದ್ರ ಸ್ಥಾನ ಬದಲು…? : ಜನಸಂಖ್ಯೆ ಆಧಾರದ ಮೇಲೆ ಕರೂರ ಜಿಪಂ ಕ್ಷೇತ್ರದ ಬದಲು ಚಳಗೇರಿಯನ್ನು ಹಾಗೂ ಜೋಯಿಸರಹರಳಹಳ್ಳಿ ಜಿಪಂ ಕ್ಷೇತ್ರದ ಬದಲು ಅಸುಂಡಿಯನ್ನು ಜಿಪಂ ಕ್ಷೇತ್ರದ ಕೇಂದ್ರ ಸ್ಥಾನ ಮಾಡಲು ಯೋಜನೆ ರೂಪಿಸಲಾಗಿದೆ ಎನ್ನಲಾಗುತ್ತಿದೆ.

ಚಳಗೇರಿ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ತೆರದಹಳ್ಳಿ, ಮುದೇನೂರ, ಮನುಮನಹಳ್ಳಿ, ಮಲಕನಹಳ್ಳಿ, ಮುಷ್ಟೂರು, ಕೃಷ್ಣಾಪೂರ, ನಾಗೇನಹಳ್ಳಿ, ಕರೂರ, ಖಂಡೇರಾಯನಹಳ್ಳಿ, ಮಾಕನೂರ, ಶ್ರೀನಿವಾಸಪುರ, ಪದ್ಮಾವತಿಪುರ, ರಾಹುತನಕಟ್ಟಿ, ಸಿದ್ದಾಪುರ, ಯಕ್ಲಾಸಪುರ, ಕಮದೋಡ, ಹುಣಸಿಕಟ್ಟೆ, ದೇವಗೊಂಡನಕಟ್ಟಿ, ಎಣ್ಣೆಹೊಸಳ್ಳಿ ಸೇರಿ 20 ಗ್ರಾಮಗಳನ್ನು ಸೇರಿಸಲಾಗುತ್ತಿದೆ.

ಅಸುಂಡಿ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಹೂಲಿಹಳ್ಳಿ, ಉಕ್ಕುಂದ, ವೀರಾಪುರ, ಸರ್ವಂದ, ಯರೇಕುಪ್ಪಿ, ಜೋಯಿಸರಹಳಹಳ್ಳಿ, ಗುಡ್ಡದಹೊಸಳ್ಳಿ, ಹೆಡಿಯಾಲ, ಗುಡ್ಡದಬೇವಿನಹಳ್ಳಿ, ಸುಣಕಲ್ಲಬಿದರಿ, ಗುಡಗೂರ, ಗಂಗಾಪುರ, ಮೈದೂರ, ಬೇವಿನಹಳ್ಳಿ, ಚನ್ನಾಪುರ ತಾಂಡಾ, ಶಿಡಗನಾಳ, ಕೂನಬೇವು, ಗುಡ್ಡದ ಆನ್ವೇರಿ ಸೇರಿ 19 ಗ್ರಾಮಗಳನ್ನು ಸೇರಿಸಲಾಗುತ್ತಿದೆ.

ಒಟ್ಟಿನಲ್ಲಿ ಈ ಬಾರಿಯ ಚುನಾವಣೆಗೂ ಮುನ್ನ ಕ್ಷೇತ್ರ ಬದಲಾವಣೆ ಹಾಗೂ ನೂತನ ಕ್ಷೇತ್ರ ಸೇರ್ಪಡೆ ಕಾರ್ಯ ಭರದಿಂದ ಸಾಗಿದ್ದು, ಚುನಾವಣೆಗೆ ಸ್ಪರ್ಧಿಸಲು ಸದ್ದಿಲ್ಲದೆ ಸಿದ್ಧತೆ ನಡೆಸಿರುವ ವಿವಿಧ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಚುನಾವಣೆ ಆಯೋಗದ ಘೊಷಣೆಯಾಗಿ ಕಾತುರದಿಂದ ಕಾಯುತ್ತಿದ್ದಾರೆ.

ತಾಪಂನ 4 ಕ್ಷೇತ್ರ ಕಡಿತ: ತಾಪಂನಲ್ಲಿ ಈ ಹಿಂದೆ 23 ಕ್ಷೇತ್ರಗಳಿದ್ದವು. ಇದೀಗ 4 ಕ್ಷೇತ್ರಗಳನ್ನು ಕಡಿತಗೊಳಿಸಲಾಗಿದೆ. ಹಿರೇಬಿದರಿ, ಗುಡ್ಡಗುಡ್ಡಾಪುರ, ಜೋಯಿಸರಹರಳಹಳ್ಳಿ, ಹರನಗಿರಿ, ಹೊನ್ನತ್ತಿ, ಬಿಲ್ಲಹಳ್ಳಿ, ತುಮ್ಮಿನಕಟ್ಟಿ, ಮೇಡ್ಲೇರಿ, ಗುಡಗೂರ, ಕಾಕೋಳ, ಅಸುಂಡಿ, ಕೋಡಿಯಾಲ, ಹಲಗೇರಿ, ಚಳಗೇರಿ, ಕುಪ್ಪೇಲೂರ, ಇಟಗಿ, ಶ್ರೀನಿವಾಸಪುರ, ಕರೂರ, ಅರೇಮಲ್ಲಾಪುರ ಸೇರಿ 19 ನೂತನ ತಾಪಂ ಕ್ಷೇತ್ರಗಳನ್ನು ಮಾಡಲು ಯೋಜನೆ ರೂಪಿಸಲಾಗಿದೆ ಎನ್ನಲಾಗಿದೆ.

ತಾಲೂಕಿನಲ್ಲಿ 6 ಜಿಪಂ ಕ್ಷೇತ್ರದ ಬದಲು ಈಗ 7 ಕ್ಷೇತ್ರವಾಗಲಿದೆ. ಈ ಬಗ್ಗೆ ವಿಂಗಡಣೆ ಮಾಡುವ ಕಾರ್ಯ ನಡೆದಿದ್ದು, ಕೊನೆಯ ಹಂತಕ್ಕೆ ಬಂದಿದೆ. ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮಗಳನ್ನು ಆಧರಿಸಿ ಜಿಪಂ ಕ್ಷೇತ್ರ ಘೊಷಿಸಲಾಗುತ್ತದೆ. ಈ ಕುರಿತು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿ, ಅನುಮೋದನೆ ದೊರೆತ ಬಳಿಕ ಅಧಿಕೃತ ಘೊಷಣೆ ಮಾಡಲಾಗುವುದು. | ಶಂಕರ ಜಿ.ಎಸ್., ತಹಸೀಲ್ದಾರ್