ಉಪ್ಪುಂದ: ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ವಾರ್ಷಿಕ ಜಾತ್ರೆಯ (ಕೊಡಿಹಬ್ಬ) ಪೂರ್ವಭಾವಿ ಸಭೆ ಗುರುವಾರ ದೇವಳದ ಸಭಾಭವನದಲ್ಲಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.
ಜಾತ್ರಾ ಮಹೋತ್ಸವ ದೇವರ ಉತ್ಸವಾದಿ ಧಾರ್ಮಿಕ ಕಾರ್ಯ ಸಂಪ್ರದಾಯಕ್ಕೆ ಚ್ಯುತಿ ಆಗದಂತೆ ನಡೆಯಲಿವೆ. ಹೊರಗಿನಿಂದ ಬರುವ ವ್ಯಾಪಾರಸ್ಥರಿಗೆ, ಅಂಗಡಿ ಮುಂಗಟ್ಟುಗಳಿಗೆ ಅವಕಾಶ ನಿರಾಕರಿಸಲಾಗಿದೆ. ಪ್ರತಿದಿನ ಸಾಯಂಕಾಲದ ಕಟ್ಟೆ ಉತ್ಸವದಲ್ಲಿ 25 ಜನರಿಗೆ ಅವಕಾಶ ನೀಡಲಾಗಿದೆ. ರಥೋತ್ಸವದಂದು ಬೆಳಗ್ಗೆ ರಥಾರೋಹಣ ಸಾಯಂಕಾಲ 100 ಜನರಿಗೆ ಸೀಮಿತಗೊಳಿಸಿ ರಥೋತ್ಸವ ನಡೆಸಲು ನಿರ್ಣಯಿಸಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಶಾಸಕರು ಮನವಿ ಮಾಡಿದರು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾತನಾಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ಸರಳವಾಗಿ ಜಾತ್ರೆ ನಡೆಸಲು ಅವಕಾಶವಿದೆ. ಜಿಲ್ಲೆಯ ಜನರ ಸಹಕಾರದಿಂದ ಕರೊನಾ ನಿಯಂತ್ರಣದಲ್ಲಿದೆ. ಈ ಬಗ್ಗೆ ಜನರೇ ಸ್ವಯಂ ಜಾಗೃತರಾಗಬೇಕು ಎಂದು ಸಲಹೆ ನೀಡಿದರು. ನ.26ರಂದು ವಾರ್ಷಿಕ ಜಾತ್ರಾ ಮಹೋತ್ಸವ ಆರಂಭಗೊಂಡು ಡಿ.1ರಂದು ರಥೋತ್ಸವ, ಡಿ.2ರಂದು ಅವಭೃತ ಸ್ನಾನ ಜರುಗಲಿದೆ.
ಜಿಪಂ ಸದಸ್ಯರಾದ ಸುರೇಶ ಬಟ್ವಾಡಿ, ಗೌರಿ ದೇವಾಡಿಗ, ತಾಪಂ ಸದಸ್ಯೆ ಪ್ರಮಿಳಾ ದೇವಾಡಿಗ, ತಹಸೀಲ್ದಾರ್ ಬಸಪ್ಪ ಪಿ. ಪೂಜಾರ್, ಎಎಸ್‌ಪಿ ಹರಿರಾಂಶಂಕರ್, ಬೈಂದೂರು ಪಿಎಸ್‌ಐ ಸಂಗೀತಾ, ದೇವಳದ ತಂತ್ರಿ ಕೊಲ್ಲೂರು ಮಂಜುನಾಥ ಅಡಿಗ, ಪ್ರಧಾನ ಅರ್ಚಕ ಪ್ರಕಾಶ ಉಡುಪ, ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್, ನೆಲ್ಯಾಡಿ ದೀಪಕ್‌ಕುಮಾರ್ ಶೆಟ್ಟಿ, ಶಿವರಾಮ ಕಾರಂತ್, ಜಯರಾಮ ಶೆಟ್ಟಿ ಉಪಸ್ಥಿತರಿದ್ದರು. ಸಂದೇಶ ಭಟ್ ಕಾರ್ಯಕ್ರಮ ನಿರ್ವಹಿಸಿದರು.