ಜಿಲ್ಲೆ

ಕೊಡಿಗೇಹಳ್ಳಿ ಗ್ರಾಪಂನಲ್ಲಿ ಕೈ-ದಳ ಮೈತ್ರಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ತಾಲೂಕಿನ ಕೊಡಿಗೇಹಳ್ಳಿ ಗ್ರಾಪಂನ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿವೆ.
ಒಟ್ಟು 34 ಸದಸ್ಯರನ್ನು ಒಳಗೊಂಡಿರುವ ಕೊಡಿಗೇಹಳ್ಳಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಪಾಲನಜೋಗಿಹಳ್ಳಿ ಸದಸ್ಯೆ ಆಶಾರಾಣಿ ನಾಗರಾಜು ಮತ್ತು ಅನುರಾಧಾ ನಾಮಪತ್ರ ಸಲ್ಲಿಸಿದ್ದರು. 21 ಮತಗಳನ್ನು ಪಡೆದ ಆಶಾರಾಣಿ ಅಧ್ಯಕ್ಷೆಯಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಕುರುಬರಹಳ್ಳಿ ವಾರ್ಡ್‌ನ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಸೌಭಾಗ್ಯಾ ಮಂಜುನಾಥ 20 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ನೂತನ ಅಧ್ಯಕ್ಷೆ, ಉಪಾಧ್ಯಕ್ಷೆಯರನ್ನು ಜೆಡಿಎಸ್ ಮುಖಂಡ ಬಿ.ಮುನೇಗೌಡ, ಕಾಂಗ್ರೆಸ್‌ನ ಹಸನಘಟ್ಟ ರವಿ ಸೇರಿ ಮತ್ತಿತರರು ಸನ್ಮಾನಿಸಿದರು.
ತಾಪಂ ಮಾಜಿ ಸದಸ್ಯ ಹಸನಘಟ್ಟ ರವಿ ಮಾತನಾಡಿ, ಅಭಿವೃದ್ಧಿ ದೃಷ್ಟಿಯಿಂದ ಜೆಡಿಎಸ್ ಜತೆ ಕೈ ಜೋಡಿಸಿದ್ದೇವೆ. ಗ್ರಾಪಂ ವ್ಯಾಪ್ತಿಯಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೆಲಸ ಮಾಡುವ ಒಡಂಬಡಿಕೆಯೊಂದಿಗೆ ಪರಸ್ಪರ ಒಂದಾಗಿದ್ದೇವೆ. ಸದಸ್ಯರು ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಚರಂಡಿ, ರಸ್ತೆ ಇತ್ಯಾದಿ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು, ಎಲ್ಲರೂ ಒಗ್ಗಟ್ಟಿನಿಂದ ಅಭಿವೃದ್ಧಿ ಹಾದಿಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದರು.