ಮಂಡ್ಯ: ಬಸ್ ಸೌಲಭ್ಯಕ್ಕೆ ಒತ್ತಾಯಿಸಿ ತಾಲೂಕಿನ ಕೋಡಿದೊಡ್ಡಿ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಸರ್ಕಾರಿ ಬಸ್ ತಡೆದು ನಿಗಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಬಸ್ ಸೌಲಭ್ಯ ಒದಗಿಸುವಂತೆ ಆಗ್ರಹಿಸಿದರು. ಕೊಪ್ಪದಿಂದ ಬೆಳಗ್ಗೆ ಹೊರಡುತ್ತಿದ್ದ ಸರ್ಕಾರಿ ಬಸ್ ಮೂಡಲದೊಡ್ಡಿ ಮೂಲಕ ಸಾಗಿ ಮಂಡ್ಯಕ್ಕೆ ತಲುಪುತ್ತಿತ್ತು. ಇದು ಕೋಡಿದೊಡ್ಡಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿತ್ತು. ಆದರೆ ಕೋಡಿದೊಡ್ಡಿ ಗ್ರಾಮದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೊಪ್ಪ ಹೊರಡುವ ಬಸ್ ಮಾರಗೌಡನಹಳ್ಳಿ, ಕೆರಗೋಡು ಮಾರ್ಗವಾಗಿ ಮಂಡ್ಯಕ್ಕೆ ಹೋಗುತ್ತಿದೆ. ಪರಿಣಾಮ ಕೋಡಿದೊಡ್ಡಿ ಗ್ರಾಮಸ್ಥರಿಗೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವಿಚಾರದ ಬಗ್ಗೆ ಬಸ್ ಸಿಬ್ಬಂದಿ ಡಿಪೋ ಮ್ಯಾನೇಜರ್ ಗಮನಕ್ಕೆ ತಂದರು. ಮುಂದಿನ ಸೋಮವಾರದಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಡಿಪೋ ಮ್ಯಾನೇಜರ್ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಗ್ರಾಮಸ್ಥರಾದ ನಾಗರಾಜು, ವಿನಯ್, ಮರಿಯಪ್ಪ , ಸತೀಶ್ ಇತರರಿದ್ದರು.