ಜಿಲ್ಲೆ

ಬಾರ್ಜ್​ ಮೂಲಕ ಕಸ ಸಂಗ್ರಹಣೆಗೆ ಹೊರಟ ಸ್ವಚ್ಛವಾಹಿನಿ

ಗೋಪಾಲಕೃಷ್ಣ ಪಾದೂರ್

ಉಡುಪಿ: ವ್ಯವಸ್ಥಿತ ರೀತಿಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ಸಂಗ್ರಹಣೆ ಹಾಗೂ ವೈಜ್ಞಾನಿಕ ವಿಲೇವಾರಿಯಲ್ಲಿ ರಾಜ್ಯದಲ್ಲೇ ಮಾದರಿ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಉಡುಪಿ ಜಿಲ್ಲೆಯಲ್ಲಿ 155 ಗ್ರಾಮ ಪಂಚಾಯಿತಿಗಳಲ್ಲಿಯೂ ಕಸ ಸಂಗ್ರಹಣೆಗಾಗಿ ಸ್ವಚ್ಛವಾಹಿನಿ ಹೆಸರಿನ ಕಸ ಸಂಗ್ರಹಣೆಯ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು, ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮ ಪಂಚಾಯಿತಿ ವತಿಯಿಂದ ಕೋಡಿಬೆಂಗ್ರೆ ಗ್ರಾಮಕ್ಕೆ ಬಾರ್ಜ್​ ಮೂಲಕ ತೆರಳಿ ಒಣತ್ಯಾಜ್ಯ ಸಂಗ್ರಹ ಮಾಡುತ್ತಿರುವುದು ವಿಶೇಷ ಗಮನಸೆಳೆದಿದೆ.

ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡಿಬೆಂಗ್ರೆ ಗ್ರಾಮಕ್ಕೆ ಸಂತೆಕಟ್ಟೆ ರಸ್ತೆ ಮೂಲಕ 35 ಕಿಮೀ ಕ್ರಮಿಸಬೇಕಿದ್ದು, ಒಂದು ಗ್ರಾಮದ ತ್ಯಾಜ್ಯ ಸಂಗ್ರಹಣೆಗೆ ಇಷ್ಟು ದೂರ ಕ್ರಮಿಸುವುದು ಎಸ್​.ಎಲ್​.ಆರ್​.ಎಂ ಘಟಕದ ಸಿಬ್ಬಂದಿಗೆ ಅಸಾಧ್ಯವಾಗಿತ್ತು. ಹೀಗಾಗಿ ಗ್ರಾಮ ಪಂಚಾಯಿತಿ ಹಸಿ ಕಸವನ್ನು ಮೂಲದಲ್ಲಿಯೇ ವಿಲೇವಾರಿ ಮಾಡುವ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಿದ್ದು, 15 ದಿನಕ್ಕೊಮ್ಮೆಒಣಕಸ ಸಂಗ್ರಹಣೆ ಮಾಡಲಾಗುತ್ತಿತ್ತು. ಪ್ರಸ್ತುತ ಕೋಡಿಬೆಂಗ್ರೆ ಗ್ರಾಮಕ್ಕೆ ಬಾರ್ಜ್​ ಸೇವೆ ಆರಂಭಗೊಂಡಿರುವುದರಿಂದ ಈ ಗ್ರಾಮದಲ್ಲಿಯೂ ವಾರಕೊಮ್ಮೆ ಸುಮಾರು 1 ಟನ್​ ಗೂ ಅಧಿಕ ಒಣ ಕಸ ಸಂಗ್ರಹ ಮಾಡಲಾಗುತ್ತಿದೆ. ಇದಕ್ಕಾಗಿ ಪಂಚಾಯಿತಿ ಸ್ವಚ್ಚ ವಾಹಿನಿ ವಾಹನದೊಂದಿಗೆ ಚಾಲಕ ಹಾಗು ಕಸ ಸಂಗ್ರಹ ಸಿಬ್ಬಂದಿ ಬಾರ್ಜ್​ ನಲ್ಲಿಯೇ ತೆರಳಿ ಸಂಗ್ರಹ ಮಾಡುತ್ತಿದ್ದಾರೆ.

ಕೋಡಿಬೆಂಗ್ರೆ ಗ್ರಾಮದಲ್ಲಿ 300ಕ್ಕೂ ಹೆಚ್ಚು ಮನೆಗಳಿದ್ದು, ಕೋಡಿ ಗ್ರಾಮ ಪಂಚಾಯಿತಿನಿಂದ ರಸ್ತೆ ಮೂಲಕ ಕ್ರಮಿಸುವುದಾದರೆ 35 ಕಿಮೀ ದೂರವಿದೆ. ಹೀಗಾಗಿ ಹಿಂದೆ 15 ದಿನಕ್ಕೊಮ್ಮೆ ಒಣಕಸ ಸಂಗ್ರಹ ಮಾಡುತ್ತಿದ್ದು, ಗ್ರಾಮಕ್ಕೆ ಬಾರ್ಜ್​ ಮೂಲಕ ತೆರಳಿದರೆ ಕೇವಲ 10 ಕಿಮೀ ದೂರವಿದೆ.