ಮಡಿಕೇರಿ: ಕುಶಾಲನಗರದ ಚಿಕ್ಕಅಳುವಾರದಲ್ಲಿ ಪ್ರಾರಂಭವಾಗಲಿರುವ ಕೊಡಗು ವಿಶ್ವವಿದ್ಯಾನಿಲಯದ ಕೇಂದ್ರ ಕಚೇರಿಯನ್ನು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ತೆರೆಯುವ ಬೇಡಿಕೆಗೆ ಸಕರಾತ್ಮಕವಾಗಿ ಸ್ಪಂದಿಸುವುದಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಭರವಸೆ ನೀಡಿದರು.
ಮಂಗಳೂರು ವಿಶ್ವವಿದ್ಯಾನಿಲಯ ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠ ಪ್ರಸಾರಾಂಗ ಮತ್ತು ಕೊಡವ ಮಕ್ಕಡ ಕೂಟದ ಜಂಟಿ ಆಶ್ರಯದಲ್ಲಿ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪಟ್ಟೋಲೆ ಪಳಮೆ (ಕೊಡವ-ಕನ್ನಡ-ಇಂಗ್ಲೀಷ್ ಆವೃತ್ತಿ) ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಡಗಿನಲ್ಲಿ ಕೊಡವತನ ಉಳಿಯಬೇಕು. ಆ ನಿಟ್ಟಿನಲ್ಲಿ ಎಲ್ಲಾ ಸಹಕಾರ ನೀಡಲಾಗುವುದು. ಕೊಡಗಿನ ಶೈಕ್ಷಣಿಕ ಪ್ರಗತಿಯ ಬೇಡಿಕೆಗೆ ಸ್ಪಂದಿಸುವುದಾಗಿ ತಿಳಿಸಿದ ಅವರು, ಪಟ್ಟೋಲೆ ಪಳಮೆ ಕೃತಿ ಕೊಡವರಿಗೆ ಭಗವದ್ಗೀತೆ ಇದ್ದಂತೆ. ಪ್ರಸ್ತುತ ಕನ್ನಡ, ಇಂಗ್ಲಿಷ್‌ಗೆ ತರ್ಜುಮೆ ಆಗುವ ಮೂಲಕ ಸಪ್ತಸಾಗರದ ದಾಚೆಗೆ ಹೋಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೃತಿ ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ ಬಾಚರಣಿಯಂಡ ಅಪ್ಪಣ್ಣ, ಪಟ್ಟೋಲೆ ಪಳಮೆ ಕೃತಿಯಲ್ಲಿ ಕೊಡವರ ಪ್ರಾಚೀನ ಕಾಲದ ಪದ್ಧತಿ, ಪರಂಪರೆ, ಸಂಸ್ಕೃತಿಯನ್ನು ಸಂಗ್ರಹಿಸಲಾಗಿದ್ದು, ಕಾವೇರಿ ಪುರಾಣ, ವಿವಾಹ ಪದ್ಧತಿ, ಸಾವಿನ ಪದ್ಧತಿ, ಕೊಡಗಿನ ಐತಿಹಾಸಿಕ ವಿವರ, ಕೊಡವ ಗಾದೆ, ಒಗಟು, ಮೂಡನಂಬಿಕೆ ಸೇರಿದಂತೆ ಹುಟ್ಟಿನಿಂದ ಸಾವಿನವರೆಗಿನ ಎಲ್ಲಾ ವಿವರಗಳನ್ನು ನೀಡಲಾಗಿದೆ. ಇದರಿಂದ ಕೊಡಗಿನ ಸಂಸ್ಕೃತಿ, ಆಚಾರ-ವಿಚಾರಗಳು ಇನ್ನೂ ಜೀವಂತವಾಗಿ ಉಳಿಯಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಕೊಡವ ಮಕ್ಕಡ ಕೂಟದಿಂದ ಏಳು ವರ್ಷ ನಡೆಸಲಾದ ಆಟ್ ಪಾಟ್ ಪಡಿಪು ಕಾರ್ಯಕ್ರಮದಲ್ಲಿ ಪಟ್ಟೋಲೆ ಪಳಮೆ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ಹಾಗೂ ೪ ಸಾವಿರ ಆಟುಪಾಟ್ ಪಡಿಪು ಪುಸ್ತಕಗಳನ್ನು ಶಾಲೆಗಳಿಗೆ ಉಚಿತವಾಗಿ ನೀಡುವ ಮೂಲಕ ಯುವ ಪೀಳಿಗೆಗೆ ಕೊಡವ ಆಚಾರ, ವಿಚಾರ, ಪದ್ಧತಿಯನ್ನು ತಿಳಿಸುವ ಕೆಲಸ ಮಾಡಲಾಗಿದೆ. ಅಲ್ಲದೆ ಪಟ್ಟೋಲೆ ಪಳಮೆ ಅತೀ ಹೆಚ್ಚು ಬಾರಿ ಮುದ್ರಣವಾಗಿರುವ ಪುಸ್ತಕವಾಗಿದ್ದು, ಇದು ಕೊಡವರ ಧರ್ಮಗ್ರಂಥವಾಗಿದೆ ಎಂದು ಅಭಿಪ್ರಾಯಪಟ್ಟರು.
ಚಿಕ್ಕಅಳುವಾರದಲ್ಲಿ ಪ್ರಾರಂಭಿಸಲಾಗುವ ಕೊಡಗು ವಿಶ್ವಾವಿದ್ಯಾನಿಲಯದ ಕೇಂದ್ರ ಕಚೇರಿಯನ್ನು ನಗರದ ಫೀಲ್ಡ್ ಮಾರ್ಷಿಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ತೆರೆಯಲು ಅವಕಾಶ ಕಲ್ಪಿಸುವಂತೆ ಇದೇ ಸಂದರ್ಭ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಟ್ಟೋಲೆ ಪಳಮೆ ಕೃತಿಯ ಕೊಡವ-ಕನ್ನಡ-ಇಂಗ್ಲಿಷ್ ಅವೃತ್ತಿಯ ಅನುವಾದಕರಾದ ಬೊವ್ವೇರಿಯಂಡ ನಂಜಮ್ಮ ಮತ್ತು ಚಿಣ್ಣಪ್ಪ ವರ್ಚುವಲ್ ಮೂಲಕ ಮಾತನಾಡಿ ಕೊಡವ ಭಾಷೆ, ಸಂಸ್ಕೃತಿ, ಆಚಾರ, ವಿಚಾರ, ಜನಪದ ಕಲೆಗಳ ಕುರಿತು ಅಭಿಪ್ರಾಯ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಮುಂಬೈ ಎಸ್.ಎನ್.ಡಿ.ಟಿ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ವೀಣಾ ಪೂಣಚ್ಚ, ಪಾಲೆಯಂಡ ಕಾವ್ಯ, ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠದ ಸಂಯೋಜಕಿ ಡಾ.ಎಂ.ಎಂ.ಮೀನಾಕ್ಷಿ, ಚೋಕಿರ ಅನಿತಾ ದೇವಯ್ಯ, ಐಚಂಡ ರಶ್ಮಿ ಮೇದಪ್ಪ ಇದ್ದರು.