ಸೋಮವಾರಪೇಟೆ ಕೊಡವ ಸಮಾಜದ ಸುವರ್ಣ ಮಹೋತ್ಸವದ ಅಂಗವಾಗಿ ಆಲೆಕಟ್ಟೆ ರಸ್ತೆಯಲ್ಲಿರುವ ಸಮಾಜದ ಜಾಗದಲ್ಲಿ ಜನಾಂಗದವರಿಗೆ ಆಯೋಜಿಸಲಾಗಿದ್ದ ಕ್ರೀಡಾಕೂಟವನ್ನು ಮಾಜಿ ಸಚಿವ ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ರಾಮ್, ಅಭಿಮನ್ಯುಕುಮಾರ್ ಮತ್ತಿತರರು ಇದ್ದರು. 
ಜಿಲ್ಲೆ

ಕೊಡವರು ಇತರ ಜನಾಂಗದವರನ್ನೂ ಗೌರವಿಸಿ

ಎಂ.ರವಿ

ಸೋಮವಾರಪೇಟೆ: ದೇಶ ಸೇವೆಯ ಹೆಸರು ಬಂದಾಗ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರನ್ನು ಇಡೀ ವಿಶ್ವವೇ ಗೌರವಿಸುತ್ತದೆ ಎಂದು ಮಾಜಿ ಸಚಿವ ಮಂಡೇಪಂಡ ಅಪ್ಪಚ್ಚು ರಂಜನ್ ಅಭಿಪ್ರಾಯಿಸಿದರು.

ಇಲ್ಲಿನ ಕೊಡವ ಸಮಾಜದ ಸುವರ್ಣ ಮಹೋತ್ಸವದ ಅಂಗವಾಗಿ ಚೌಡ್ಲು ಪಂಚಾಯಿತಿ ವ್ಯಾಪ್ತಿಯ ಆಲೆಕಟ್ಟೆ ರಸ್ತೆಯಲ್ಲಿರುವ ಸಮಾಜದ ಜಾಗದಲ್ಲಿ ಮಂಗಳವಾರ ಜನಾಂಗದವರಿಗೆ ಆಯೋಜಿಸಲಾಗಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕೊಡಗಿನವರಲ್ಲಿ ಕ್ರೀಡೆ ಎಂಬುದು ರಕ್ತಗತವಾಗಿ ಹರಿದು ಬಂದಿದೆ. ಹಾಕಿಯಲ್ಲಿ ಸಾಕಷ್ಟು ಒಲಂಪಿಯನ್‌ಗಳನ್ನು ನೀಡಿರುವ ಕೊಡಗು ಎಲ್ಲ ಕ್ರೀಡೆಗಳಲ್ಲೂ ಗುರುತಿಸಿಕೊಂಡಿದೆ. ಕ್ರೀಡಾ ಕಲಿಗಳು ಹುಟ್ಟಿರುವ ಕೊಡಗಿನಲ್ಲಿ ಕೋವಿಗೂ ವಿಶೇಷವಾದ ಸ್ಥಾನವಿದೆ. ಕೊಡವರು ಕೋವಿಯನ್ನು ಪೂಜ್ಯನೀಯ ಭಾವನೆಯಿಂದ ನೋಡುತ್ತಾರೆ. ಕೊಡವ ಜನಾಂಗದವರೂ ಇತರ ಜನಾಂಗದವರವನ್ನು ಮತ್ತು ಅವರ ಸಂಸ್ಕೃತಿಯನ್ನು ಗೌರವಿಸಬೇಕು. ಇಲ್ಲಿ ಎಲ್ಲರೂ ಸಮಾನರು. ಇತರ ರಾಜ್ಯಗಳಿಗೂ ಕೊಡಗಿನ ಕಾವೇರಿಯ ನೀರನ್ನು ಕೊಡುವ ಈ ಜಿಲ್ಲೆಯಲ್ಲಿ ಹುಟ್ಟಿದ ನಾವು ನಿಜಕ್ಕೂ ಧನ್ಯರು ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ಐಶ್ವರ್ಯಾ ಕಾಲೇಜಿನ ಅಧ್ಯಕ್ಷರಾದ ಪುಲಿಯಂಡ ರಾಮ್ ದೇವಯ್ಯ ಮಾತನಾಡಿ, ನಾವು ನಮ್ಮ ಸಂಪಾದನೆಯ ಸ್ವಲ್ಪ ಭಾಗವನ್ನಾದರೂ ಜನಾಂಗದ ಅಭಿವೃದ್ಧಿಗೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಬೇಕು. ಇಂದಿನ ಹಲವು ಯುವಕರು ಪಿಯುಸಿ ಅಭ್ಯಾಸದ ನಂತರ ಹಾದಿ ತಪ್ಪುತ್ತಿರುವುದು ದುರಂತ. ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುವ ಸಮಯದಲ್ಲಿ ಅನ್ಯದಾರಿ ಹಿಡಿಯುತ್ತಿದ್ದಾರೆ. ಜಿಲ್ಲೆಯ ಯುವಕರು ಕೊಡಗನ್ನು ಬಿಡಬಾರದು. ಇಲ್ಲಿಯ ಆಸ್ತಿಯನ್ನು ಯಾರೂ ಮಾರಬಾರದು ಎಂದು ಕಿವಿಮಾತು ಹೇಳಿದರು.

ಸಮಾಜದ ಅಧ್ಯಕ್ಷರಾದ ಮಾಳೇಟಿರ ಅಭಿಮನ್ಯುಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಉಪಾಧ್ಯಕ್ಷ ಬೊಳಂದಂಡ ಕುಟ್ಟಪ್ಪ, ಹಿರಿಯರಾದ ಕಲ್ಲೇಂಗಡ ಅಪ್ಪಚ್ಚು, ಉಪನ್ಯಾಸಕಿ ಪುಲಿಯಂಡ ಕಾವೇರಮ್ಮ ಇದ್ದರು.