ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಒಂದು ಜನಾಂಗದ ಜೀವಸೆಲೆಯಾಗಿರುವ ಭಾಷೆ ಉಳಿದರೆ ಮಾತ್ರ ಜನಾಂಗದ ಉಳಿವು ಸಾಧ್ಯ ಎಂದು ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಕರವಟ್ಟಿರ ಪೆಮ್ಮಯ್ಯ ಅಭಿಪ್ರಾಯಿಸಿದರು.
ಕೊಡವಾಮೆರ ಕೊಂಡಾಟ ಸಂಘಟನೆಯ ತಿಂಗಕೋರ್ ಅರಿವು ಮಾಲಿಕೆಯ ೧೨ನೇ ವೆಬಿನಾರ್‌ನಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಅತ್ಯಂತ ಪುರಾತನವೂ, ವಿಶಿಷ್ಟವೂ ಆದ ಕೊಡವ ಭಾಷೆಯು, ಅವನತಿಯತ್ತ ಸಾಗುತ್ತಿರುವುದು ವಿಷಾದನೀಯ. ಜನಾಂಗ ಉಳಿಯಬೇಕಾದರೆ ಭಾಷೆ ಬೆಳೆಸಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಪ್ರತಿಯೊಬ್ಬ ಕೊಡವರು ಜಾಗರೂಕರಾಗಿ ತಮ್ಮ ಮನೆಗಳಲ್ಲಿ, ಸಂಬಂಧಿಕರೊಂದಿಗೆ ಕೊಡವ ಭಾಷೆಯಲ್ಲಿಯೆ ವ್ಯವಹರಿಸಬೇಕೆಂದರು.
ಮಕ್ಕಳಲ್ಲಿ ಭಾಷೆಯ ಅಭಿಮಾನ ಜಾಗೃತಿಗೊಳಿಸುವತ್ತ ಪಾಲಕರು ಗಮನ ಹರಿಸಬೇಕು. ಕೊಡವರು ಎಲ್ಲೇ ನೆಲೆಸಿದ್ದರೂ ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಪಾಲನೆಗೆ ಒತ್ತುಕೊಡಬೇಕು. ಹಬ್ಬಗಳ ಆಚರಣೆಗೆ ಗುರುಮನೆಗೆ ಬರಬೇಕು. ಹೀಗಾದಾಗ ಮಾತ್ರ ಮುಂದಿನ ಪೀಳಿಗೆಗೆ ಶ್ರೀಮಂತ ಕೊಡವ ಸಂಸ್ಕೃತಿ ಉಳಿಸಿಕೊಡಲು ಸಾಧ್ಯ. ಕೊಡವ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೆಂಗಳೂರು ಕೊಡವ ಸಮಾಜ ಸದಾ ಕಾರ್ಯ ಪ್ರವೃತ್ತವಾಗಿದೆ ಎಂದರು.
ಅಂತಾರಾಷ್ಟ್ರೀಯ ಅಥ್ಲೇಟ್ ತೀತಮಾಡ ಅರ್ಜುನ್ ದೇವಯ್ಯ, ಪ್ರಮುಖರಾದ ಮಾಳೇಟಿರ ಶ್ರೀನಿವಾಸ್, ಮಾಳೇಟಿರ ರಷ್ಮಿ ಉತ್ತಪ್ಪ, ಪೋಡಮಾಡ ಭವಾನಿ ನಾಣಯ್ಯ, ಮಾಳೇಟಿರ ಸೀತಮ್ಮ ವಿವೇಕ್, ಕನ್ನಿಗಂಡ ದೇವಯ್ಯ, ಮಾಣಿರ ಕವನ್, ಕಾಳೇಂಗಡ ಬೋಸ್, ಬೊಟ್ಟೋಳಂಡ ನಿವ್ಯಾ ದೇವಯ್ಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಕೊಡವಾಮೆರ ಕೊಂಡಾಟ ಸ್ಥಾಪಕಾಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಳೇಟಿರ ಶ್ರೀನಿವಾಸ್ ನೇರ್ಚೆ ಕಟ್ಟಿದರು. ಮಂಡೆಡ ಬೀನ ಸ್ವಾಗತಿಸಿದರು. ಬೊಳ್ಳೆರ ಸೀತಮ್ಮ ನಿರೂಪಿಸಿದರು. ಮತ್ರಂಡ ದೇಚಮ್ಮ ವಂದಿಸಿದರು.