ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕೊಡಗಿನ ಪೂರ್ವದ ಗ್ರಾಮೀಣ ಇತಿಹಾಸ ದಾಖಲೀಕರಣಕ್ಕೆ ಅಗತ್ಯ ಪ್ರಯತ್ನ ನಡೆಯಬೇಕೆಂದು ಮುಂಬೈ ವುಮೆನ್ಸ್ ಯೂನಿವರ್ಸಿಟಿಯ ರಿಸರ್ಚ್ ಸೆಂಟರ್ ಫಾರ್ ವುಮೆನ್ಸ್ ಸ್ಟಡೀಸ್ ನಿರ್ದೇಶಕಿ ಡಾ.ನೆರವಂಡ ವೀಣಾ ಪೂಣಚ್ಚ ಹೇಳಿದರು.
ಮಡಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಮಡಿಕೇರಿ ಕೊಡವ ಸಮಾಜ ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಸಾಹಿತ್ಯ ಮತ್ತು ಸಂಶೋಧನಾ ದಿನ ಕಾರ್ಯಕ್ರಮದಲ್ಲಿ ೧೭ ಪುಸ್ತಕ ಅನಾವರಣ ಮಾಡಿ ಮಾತನಾಡಿದರು.
ಪ್ರಸ್ತುತ ಲಭ್ಯವಿರುವ ಎಲ್ಲಾ ಇತಿಹಾಸಗಳು ರಾಜರು ಮತ್ತು ಅವರ ಆಳ್ವಿಕೆಯ ಮಾಹಿತಿ ಒದಗಿಸುತ್ತವೆ. ಆದರೆ, ಕೊಡವ ಭಾಷಿಕರ ಪೂರ್ವ ಜರ ಬದುಕು, ಪರಂಪರೆ ದಾಖಲಿಸುವ ಪ್ರಯತ್ನ ಮತ್ತಷ್ಟು ನಡೆಯಬೇಕು. ಗ್ರಾಮೀಣ ಸಂಸ್ಕೃತಿ, ಪರಂಪರೆ, ಹಿಂದಿನ ದಿನಮಾನಗಳಿಗೆ ಸಂಬಂಧಿಸಿದಂತೆ ಅಲಿಖಿತವಾಗಿ ಒಬ್ಬರಿಂದ ಒಬ್ಬರಿಗೆ ಹರಿದು ಬಂದ ವಿಚಾರಗಳನ್ನು ಸಂಶೋಧನಾತ್ಮಕ ದೃಷ್ಟಿಕೋನದಿಂದ ಸಂಗ್ರಹಿಸಿ ಗ್ರಾಮೀಣ ಇತಿಹಾಸ ಉಳಿಸಿ ಬೆಳಸಲು ಪ್ರಯತ್ನ ನಡೆಯಬೇಕೆದರು.
ಕೊಡಗಿನಲ್ಲಿ ಈ ಹಿಂದೆ ನೆಲೆಸಿದ್ದ ಪೂರ್ವಜರ ಬದುಕು ಹೇಗಿತ್ತು, ಅರಣ್ಯ ಪ್ರದೇಶಗಳಲ್ಲಿ ಅಂದಿನ ಜನರ ಜೀವನ ಶೈಲಿ ಏನಾಗಿತ್ತು ಎನ್ನುವ ಅಂಶಗಳತ್ತ ಗ್ರಾಮೀಣ ಇತಿಹಾಸದ ದಾಖಲೀಕರಣದ ಮೂಲಕ ಬೆಳಕು ಚೆಲ್ಲುವ ಕಾರ್ಯ ನಡೆಯುವುದು ಅತ್ಯವಶ್ಯವೆಂದು ತಿಳಿಸಿದರು.
ಕೊಡಗಿನಲ್ಲಿ ಕೊಡವ ಭಾಷೆಗಳನ್ನಾಡುವ ವಿವಿಧ ಸಮುದಾಯಗಳಿವೆ. ಇವೆಲ್ಲವೂ ತಮ್ಮದೇ ಆದ ಆಚಾರ, ವಿಚಾರ, ಶ್ರೀಮಂತ ಸಂಸ್ಕೃತಿ ಹೊಂದಿದೆ. ಆ ನಿಟ್ಟಿನಲ್ಲಿ ಕೊಡವ ಭಾಷೆ, ಸಾಹಿತ್ಯ ಮತ್ತು ಪರಂಪರೆ ಉಳಿಸಿ ಬೆಳೆಸಿಕೊಂಡು ಹೋಗುವಂತಾಗಬೇಕೆಂದು ವೀಣಾ ಪೂಣಚ್ಚ ಹೇಳಿದರು.
ಮಡಿಕೇರಿ ಕೊಡವ ಸಮಾಜ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ಮಾತನಾಡಿ, ಕೊಡಗಿನ ಕಲೆ-ಸಂಸ್ಕೃತಿ ವಿಶಿಷ್ಟವಾದದ್ದು. ಅದನ್ನು ಉಳಿಸುವ ಕೆಲಸ ಆಗಬೇಕೆಂದರು. ಯುವಜನರು ಕೊಡಗಿನ ಆಚಾರ- ವಿಚಾರ ಬೆಳೆಸುವಂತಾಗಬೇಕು. ಮುಂದಿನ ಪೀಳಿಗೆಗೆ ಕೊಡವ ಭಾಷೆ ಮತ್ತು ಸಂಸ್ಕೃತಿ ಉಳಿಸುವಂತಾಗಬೇಕೆಂದರು.
ಕೊಡವ ಸಮಾಜ ಎಲೆಮರೆ ಕಾಯಿಯಂತೆ ಇರುವ ಪ್ರತಿಭೆಗಳನ್ನು ಹೊರ ತರುವಂತ ಕೆಲಸ ಮಾಡುತ್ತಿದೆ. ಕೊಡಗಿನ ಜನರು ಒಂದೇ ಎನ್ನುವ ಭಾವದಿಂದ ಕೂಡಿದಾಗ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಮಾತನಾಡಿ, ಕೊಡಗಿನ ಆಚಾರ- ವಿಚಾರ, ಸಂಸ್ಕೃತಿ ಮಾನ್ಯತೆ ಪಡೆದಿದೆ. ಎಲ್ಲಾ ಭಾಷೆಗಳಿಗೂ ಅದರದೇ ಆದ ಮಾನ್ಯತೆಯಿದೆ. ಅಂತೆಯೇ ಕೊಡವ ಭಾಷೆಗೂ ಹೆಚ್ಚಿನ ಮಾನ್ಯತ ಇದೆ ಎಂದು ಹೇಳಿದರು.
ಅಕಾಡೆಮಿಯ ತ್ರೈಮಾಸಿಕ ಪತ್ರಿಕೆ ಪೊಂಗುರಿ ಇದೇ ಸಂದರ್ಭ ಬಿಡುಗಡೆ ಮಾಡಲಾಯಿತು. ಅಕಾಡೆಮಿ ಮಾಜಿ ಅಧ್ಯಕ್ಷೆ ಐಮುಡಿಯಂಡ ರಾಣಿ ಮಾಚಯ್ಯ ಇದ್ದರು. ಜಾನಕಿ ಮಾಚಯ್ಯ ಪ್ರಾರ್ಥಿಸಿದರು. ಅಜ್ಜಿಕುಟ್ಟಿರ ಗಿರೀಶ್ ಸ್ವಾಗತಿಸಿದರು. ತೇಲಪಂಡ ಕವನ್ ಕಾರ್ಯಪ್ಪ ನಿರೂಪಿಸಿದರು.
ಪುಸ್ತಕ ಅನಾವರಣ
ಡಾ.ಐಚೆಟ್ಟೀರ ಮಾ ಮುತ್ತಣ್ಣ ಬರೆದಿರುವ ಎ ಟಿನಿ ಮಾಡೆಲ್ ಸ್ಟೇಟ್ ಆಫ್ ಸೌತ್ ಇಂಡಿಯಾ (ಮರುಮುದ್ರಣ), ಕಾಟಿಮಾಡ ಜಿಮ್ಮಿ ಅಣ್ಣಯ್ಯ ರಚಿಸಿರುವ ಅಪ್ಪಚ್ಚ ಕವಿ ವಿದ್ಯಾಲಯ ಪ್ರಜ್ವಲ್ ಮೆಮೋರಿಯಲ್ ಮ್ಯೂಸಿಯಂ, ಉಳುವಂಗಡ ಕಾವೇರಿ ಉದಯ ಬರೆದಿರುವ ಕಾವೇರಿ ಮಡ್‌ಲ್’, ಚೊಟ್ಟೆಯಂಡಮಾಡ ಲಲಿತ ಕಾರ್ಯಪ್ಪ ಬರೆದಿರುವ ಎದೆರಾಳ್‌ತ್ ಬೀಂದ ಪೂ, ಬಾಚಮ್ಮಂಡ ಗೌರಮ್ಮ ಮಾದಮ್ಮಯ್ಯ ಬರೆದಿರುವ ’ಕೊಡಗ್‌ರ ಧಾರ್ಮಿಕ ಕೇಂದ್ರ ಪಿಂಞ ನಮ್ಮೆ ನಾಳ್, ಬಡಕಡಮ್ಮಂಡ ಕಸ್ತೂರಿ ಗೋಂದಮ್ಮಯ್ಯ ಬರೆದಿರುವ ಪುರುಷೋತ್ತಮ ಶ್ರೀರಾಮ, ತೇಲಪಂಡ ಕವನ್ ಕಾರ್ಯಪ್ಪ ಬರೆದಿರುವ ಕೊಡವ ಪಿಂಞ ಕೊಡವ ಭಾಷಿಕಂಗಡ ಮನೆಪೆದ’ ಪುಸ್ತಕ ಅನಾವರಣ ಮಾಡಲಾಯಿತು.
ಸಂಶೋಧಾನ ಕೃತಿ
ಕಂಬೇಯಂಡ ಡೀನಾ ಬೋಜಣ್ಣ ಬರೆದಿರುವ ಕೊಡವ ರಿಚುವಲ್ಸ್ ಅಂಡ್ ಟ್ರೆಡೀಷನ್ಸ್ ಎ ಸ್ಟಡಿ, ಕುಪ್ಪಂಡ ಈಶ್ವರಿ ಬರೆದಿರುವ ಐಡೆಂಟಿಟಿ ಆಫ್ ಕೊಡಗು, ಡಾ. ಬೊಡುಕುಟ್ಟಡ ರಾಧಿಕ ಕುಟ್ಟಪ್ಪ ಬರೆದಿರುವ ಪನ್ನಂಗಾಲತಮ್ಮೆ ಮತ್ತು ಕೆಂಬಟ್ಟಿ ಸಮುದಾಯ ಆಚರಣೆ ಮತ್ತು ಅನನ್ಯತೆ, ಚಂಗಂಡ ಪೊನ್ನಣ್ಣ ಬರೆದಿರುವ ಇನ್‌ಕ್ಲೂಷನ್ ಆಫ್ ಕೊಡವ ಲ್ಯಾಂಗ್ವೇಜ್ ಇನ್ ದಿ ಏಯ್ತ ಷೆಡ್ಯೂಲ್ ಆಫ್ ಇಂಡಿಯನ್ ಕಾನ್‌ಸ್ಟಿಟ್ಯೂಷನ್, ಕೊಕ್ಕಂಡ ರಿನಿ ಚಿಣ್ಣಪ್ಪ ಬರೆದಿರುವ ಸರಿತಾ ಮಂದಣ್ಣಾಸ್ ಟೈಗರ್ ಹಿಲ್ಸ್, ವುಮೆನ್ ಇನ್ ರಿಸಿಸ್ಟೆನ್ಸ್, ಮೊಣ್ಣಂಡ ಶೋಭಾ ಸುಬ್ಬಯ್ಯ ಬರೆದಿರುವ ದಿ ಕಲ್ಚರ್ ಅಂಡ್ ಟ್ರ್ರೆಡೀಷನ್ ಆಫ್ ಕೊಡವಾಸ್, ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ಬರೆದಿರುವ ಕೆಂಗಳಮೆ ಕಿಗ್ಗಟ್ಟ್ ಮಾದೇವಡ ತಿರಿಕೆ, ನಾಳಿಯಮ್ಮಂಡ ಅನಿತಾ ಕುಮಾರಿ ಬರೆದಿರುವ ಕೊಡಗಿನ ನಾಟಿ ವೈದ್ಯರು, ಡಾ.ನೆರವಂಡ ವೀಣಾ ಪೂಣಚ್ಚ, ಮಡೇಯಂಡ ಅಶ್ವಿನಿ ಶಶಿಧರ್, ಮಂದಪಂಡ ಶಶಿಕಲಾ ಬರೆದಿರುವ ಗ್ಲಿಂಪ್ಸಸ್ ಆಫ್ ದಿ ಹಿಸ್ಟರಿ ಅಂಡ್ ಕಲ್ಚರ್ ಆಫ್ ಕೊಡಗು ಸಂಶೋಧನಾ ಕೃತಿ ಅನಾವರಣ ಮಾಡಲಾಯಿತು.