ಮಡಿಕೇರಿ: ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಮೊದಲ ಬಾರಿಗೆ ಕೊಡವ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನವೆಂಬರ್ ೨೬ ಮತ್ತು ೨೭ ರಂದು ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಕಾರ್ಯದರ್ಶಿ ಒಡಿಯಂಡ ಮಾಚಯ್ಯ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದ್ದು, ೧೦ ಫ್ರಾಂಚೈಸಿಗಳ ಐಪಿಎಲ್ ಮಾದರಿ ಬಿಡ್ಡಿಂಗ್ ನಡೆದಿದೆ. ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಬಂದು ಪಂದ್ಯಾವಳಿಯನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ಬೆಂಗಳೂರು ಬಂಬಂಗ, ಮೈಸೂರು ಮಕ್ಕ, ಕೊಡವ ಬೀರಂಗ, ಎಲ್‌ಸಿಎಂ ಟಸ್ಕರ್ಸ್ @೯೭, ಟೀಮ್ ಕೈಮಡ ೨೦೨೫, ಕೆಎ೧೨ ವಾರಿಯರ್ಸ್, ಅಂಜಿಕೇರಿ ನಾಡ್‌ಕೂಟ, ಟೀಮ್ ಭಗವತಿ, ಎಂಪಿಬಿ ರಾಯಲ್ಸ್ ಹಾಗೂ ಪಿ & ಜಿ ನಾಲ್ನಾಡ್ ನರಿಯ ತಂಡಗಳು ಸೆಣಸಾಡಲು ಸಜ್ಜಾಗಿವೆ. ಮೊದಲ ಬಹುಮಾನ ಆಕರ್ಷಕ ಟ್ರೋಫಿ ಸೇರಿ ರೂ.೨ಲಕ್ಷ, ದ್ವಿತೀಯ ಟ್ರೋಫಿ ಸೇರಿ ೧ ಲಕ್ಷ ರೂ. ಮತ್ತು ತೃತೀಯ ಬಹುಮಾನ ೪೦ ಸಾವಿರ ರೂ. ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ.ಸಂ ೯೪೮೩೨೬೩೮೪೬, ೯೦೬೬೧೪೬೧೦೦ ನ್ನು ಸಂಪರ್ಕಿಸಬಹುದೆಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಂದ್ಯಾವಳಿಯ ಆಯೋಜಕರಾದ ಕುಟ್ಟಂಡ ಕುಟ್ಟಪ್ಪ, ಚೆಕ್ಕೇರ ಕಾರ್ಯಪ್ಪ, ಮುಕ್ಕಾಟಿರ ದೀಪಕ್ ಹಾಗೂ ಚಿಯಕಪೂವಂಡ ಅನಿಲ್ ಉಪಸ್ಥಿತರಿದ್ದರು.