ಜಿಲ್ಲೆ

ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಓದುಗರು ಕೂಡ ಮುಖ್ಯ; ಬಾಚರಣಿಯಂಡ ಪಿ.ಅಪ್ಪಣ್ಣ

ಮಡಿಕೇರಿ: ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಕೇವಲ ಸಾಹಿತಿಗಳ ಸಂಖ್ಯೆ ಹೆಚ್ಚಾದರೆ ಸಾಲದು, ಓದುವವರ ಸಂಖ್ಯೆಯೂ ಹೆಚ್ಚಾಗಬೇಕೆಂದು ಹಿರಿಯ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ ಅಭಿಪ್ರಾಯಪಟ್ಟರು.

ನಗರದ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟದ ವತಿಯಿಂದ ಗುರುವಾರ ಆಯೋಜಿಸಿದ್ದ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕಾಯಪಂಡ ಸಿ.ದೇವಯ್ಯ ಅವರ ೨ನೇ ಪುಸ್ತಕ ನೆನೆನೆನೆದೆ ಹಾಗೂ ಹೂವನರಸಿ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಬರಹಗಾರರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಥೆ, ಕವನಗಳ ರಚನೆಯಲ್ಲಿ ಆಸಕ್ತಿ ತೋರುತ್ತಿದ್ದಾರೆ. ಆದರೆ ಬರಹಗಾರರಿಗಷ್ಟೇ ಆಸಕ್ತಿ ಇದ್ದರೆ ಸಾಲದು, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವ ಸಾಹಿತ್ಯಾಸಕ್ತರ ಸಂಖ್ಯೆಯೂ ಹೆಚ್ಚಾಗಬೇಕು ಎಂದು ಹೇಳಿದರು.

ನೆನೆನೆನೆದೆ ಹಾಗೂ ಹೂವನರಸಿ ಕವನ ಸಂಕಲನದಲ್ಲಿ ಎಲ್ಲರ ಮನಸ್ಸನ್ನು ಸೂರೆಗೊಳಿಸುವ ಮತ್ತು ಚಿಂತನೆಗೆ ಒಳಪಡಿಸುವ ಅಂಶಗಳಿವೆ. ಸಾಹಿತಿಗಳನ್ನು ಹಾಗೂ ಹೊಸ ಹೊಸ ಬರಹಗಾರರನ್ನು ಪ್ರೋತ್ಸಾಹಿಸುತ್ತಾ ಬರುತ್ತಿರುವ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಅವರ ಪ್ರಯತ್ನ ಶ್ಲಾಘನೀಯವೆಂದು ಅಪ್ಪಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

ಚೇಮಿರ ದೇವಕ್ಕಿ ಭೀಮಯ್ಯ ಅವರ ಮೊದಲನೇ ಪುಸ್ತಕ ಹಾಸ್ಯ ಬರಹದ ಜೋಕ್ ಫಾಲ್ಸ್ ನ್ನು ನಾಪೋಕ್ಲು ಕೊಡವ ಸಮಾಜದ ಕಾರ್ಯದರ್ಶಿ ಹಾಗೂ ಕೊಡವ ಮಕ್ಕಡ ಕೂಟದ ಸಲಹೆಗಾರ ಕುಲ್ಲೇಟ್ಟಿರ ಅಜಿತ್ ನಾಣಯ್ಯ ಲೋಕಾರ್ಪಣೆಗೊಳಿಸಿ ಮಾತನಾಡಿ, ಕೊಡವ ಭಾಷೆ, ಸಾಹಿತ್ಯ, ಸಂಸ್ಕೃತಿ, ಆಚಾರ, ವಿಚಾರದ ಬೆಳವಣಿಗೆಗಾಗಿ ಶ್ರಮಿಸುವವರಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ನೆನೆನೆನೆದೆ ಹಾಗೂ ಹೂವನರಸಿ ಕವನ ಸಂಕಲನದ ಬರಹಗಾರ ಕಾಯಪಂಡ ಸಿ.ದೇವಯ್ಯ ಮಾತನಾಡಿ, ಸಾಮಾಜಿಕ ಜಾಲತಾಣದ ಹಾವಳಿಯಿಂದಾಗಿ ಇಂದು ಓದುಗರ ಸಂಖ್ಯೆ ಕಡಿಮೆಯಾಗಿದೆ. ಆದರೂ ತಾವು ಬರೆಯುವುದನ್ನು ನಿಲ್ಲಿಸುವುದಿಲ್ಲವೆಂದು ಸ್ಪಷ್ಟಪಡಿಸಿದ ಅವರು, ಮುಂದಿನ ಪುಸ್ತಕವನ್ನು ಇಂಗ್ಲೀಷ್ ಭಾಷೆಯಲ್ಲಿ ಬರೆಯುತ್ತಿದ್ದು, ತಾವು ಕಾರ್ಯನಿರ್ವಹಿಸುತ್ತಿರುವ ಕೇರಳ ಪ್ರದೇಶದ ರೋಚಕ ಅನುಭವಗಳನ್ನು ಬರವಣಿಗೆ ಮೂಲಕ ಹಂಚಿಕೊಳ್ಳುತ್ತಿರುವುದಾಗಿ ತಿಳಿಸಿದರು.

ಜೋಕ್ ಫಾಲ್ಸ್ ಪುಸ್ತಕದ ರಚನೆಕಾರರಾದ ಚೇಮಿರ ದೇವಕ್ಕಿ ಭೀಮಯ್ಯ ಮಾತನಾಡಿ, ಹಿರಿಯರು ಮೊದಲು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವ ಮೂಲಕ ಸಾಹಿತ್ಯದ ಬಗ್ಗೆ ಕಿರಿಯರಿಗೆ ತಿಳಿ ಹೇಳಬೇಕು ಎಂದ ಅವರು, ಇಂದಿನ ಯಾಂತ್ರಿಕ ಯುಗದಲ್ಲಿ ಬಹುತೇಕರು ಟಿವಿ, ಮೊಬೈಲ್‌ಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲವೆಂದು ತಿಳಿಸಿದ ಅವರು, ಓದುವ ಅಭಿರುಚಿಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕೆಂದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ೨೦೧೬ ರಿಂದ ಕೊಡಗಿನ ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ. ಕಳೆದ ೪ ವರ್ಷಗಳಿಂದ ಹಿರಿಯರ ಮತ್ತು ಕಿರಿಯರ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಗಿದೆ. ಪುಸ್ತಕಗಳ ಸಂಖ್ಯೆ ಇಂದು ೫೦ ಕ್ಕೆ ತಲುಪಿರುವುದು ನಮಗೆ ಹೆಮ್ಮೆ ಎನಿಸುತ್ತಿದೆ ಎಂದರು.

ಜಿಲ್ಲೆಯ ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಯ ಒಟ್ಟು ೪೮ ಕೃತಿಗಳನ್ನು ಈಗಾಗಲೇ ಲೋಕಾರ್ಪಣೆಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದೇವೆ. ಇದೀಗ ಎರಡು ಪುಸ್ತಕಗಳನ್ನು ಬಿಡುಗಡೆಗೊಳಿಸುವ ಮೂಲಕ ೫೦ ರ ಗಡಿ ತಲುಪಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಚೇಮಿರ ಭೀಮಯ್ಯ ಉಪಸ್ಥಿತರಿದ್ದರು.