ಜಿಲ್ಲೆ

ಕೊಡವ ಲ್ಯಾಂಡ್ ಕೊಡವರ ಜನ್ಮ ಸಿದ್ಧ ಹಕ್ಕು

ಮಡಿಕೇರಿ: ಕೊಡವರಂತಹ ಆದಿಮ ಸಂಜಾತ ಅತೀಸೂಕ್ಷ್ಮ ಸಮುದಾಯಗಳ ಉಳಿವಿಗಾಗಿ ಸಂವಿಧಾನದಡಿಯಲ್ಲಿ ನ್ಯಾಯಸಮ್ಮತವಾದ ಹಕ್ಕುಗಳನ್ನು ಪ್ರತಿಪಾದಿಸಲು ಅವಕಾಶವಿದ್ದು, ಸ್ವಯಂ ನಿರ್ಣಯದ ಹಕ್ಕಿನ ಮೂಲಕ ಕೊಡವ ಲ್ಯಾಂಡ್ ಹೊಂದುವುದು ಕೊಡವರ ಅಂತರ್ಗತ, ಮೂಲಭೂತ, ಜನ್ಮಸಿದ್ಧ ಹಕ್ಕಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದ್ದಾರೆ.


ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಇತರರ ಬಗ್ಗೆ ಎಂದಿಗೂ ಕಾಳಜಿ ಇಲ್ಲದ ಜನರು ಊಳಿಗಮಾನ್ಯ ಮನೋಭಾವದಿಂದ ರಾಜ್ಯವನ್ನು ಆಳುತ್ತಿದ್ದಾರೆ. ಅವರು ರಾಜ್ಯದ ಕನಿಷ್ಠ ೬೦ ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಮತವನ್ನು ಹೊಂದಿದ್ದಾರೆ ಮತ್ತು ತಮ್ಮ ೬೦ ವಿಧಾನಸಭಾ ಕ್ಷೇತ್ರಗಳ ಭಾಗವಾಗಿರುವ ಇತರ ಸೂಕ್ಷ್ಮ ಸಮುದಾಯಗಳ ಯೋಗಕ್ಷೇಮದ ಬಗ್ಗೆ ಅವರು ಎಂದಿಗೂ ತಲೆಕೆಡಿಸಿಕೊಂಡಿಲ್ಲ ಎಂದು ಟೀಕಿಸಿದ್ದಾರೆ.


ಇತರರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಜನ ತಮ್ಮ ಸಮುದಾಯಕ್ಕೆ ಎಷ್ಟು ಸೀಟು ಬೇಕೆನ್ನುವ ಲೆಕ್ಕಾಚಾರದಲ್ಲಿ ಚುನಾವಣೆಗಳ ಸಂದರ್ಭ ಮತಾಂಧತೆಯ ಅಶ್ಲೀಲತೆಯನ್ನು ಅನಾವಣಗೊಳಿಸುತ್ತಾರೆ. ತಮ್ಮ ಈ ನಡೆ ಜಾತ್ಯತೀತತೆಯ ಮತ್ತು ಅಂತರ್ಗತ ರುಜುವಾತುಗಳಿಗೆ ಅನುಗುಣವಾಗಿದೆ ಎಂದು ಹೇಳಿಕೊಂಡೆ ಮತಾಂಧತೆಯ ವಿಕೃತಿಯನ್ನು ಮೆರೆಯುತ್ತಾರೆ. ಕೊಡವರಂತಹ ಆದಿಮ ಸಂಜಾತ ನಗಣ್ಯ ಅತೀಸೂಕ್ಷ್ಮ ಸಮುದಾಯಗಳು ತಮ್ಮ ಉಳಿವಿಗಾಗಿ ಸಂವಿಧಾನದಡಿಯಲ್ಲಿ ನ್ಯಾಯಸಮ್ಮತವಾದ ಹಕ್ಕುಗಳನ್ನು ಪ್ರತಿಪಾದಿಸಿದರೆ, ಈ ಕೋಮುವಾದಿಗಳು ಮೊಸಳೆ ಕಣ್ಣೀರು ಸುರಿಸುತ್ತಾ, ಕೊಡವರ ಹಕ್ಕುಗಳು ಇತರ ಸಮುದಾಯದ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತವೆ ಎಂದು ಅರ್ಥಹೀನವಾಗಿ ವರ್ತಿಸುತ್ತಿದ್ದಾರೆ. ತಾವು ಬಹುದೊಡ್ಡ ಮಾನವತಾವಾದದ ಹರಿಕಾರರು ಮತ್ತು ಸಾಮಾಜಿಕ ಸಮತಾವಾದದ ವೀರಾಗ್ರೇಸರೆಂದು ಹುಸಿಯಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.


ಕೊಡವರಿಗೆ ಸಂವಿಧಾನವೇ ಸರ್ವಶ್ರೇಷ್ಠವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಉದಾತ್ತ ಸಂವಿಧಾನ ಮಾತ್ರ ಈ ಬಹುಸಂಖ್ಯಾತ ಸಮುದಾಯಗಳ ದುಷ್ಟ ವಿನ್ಯಾಸಗಳ ಕಪಿಮುಷ್ಠಿಯಿಂದ ಕೊಡವರು ಹೊರಬರಲು ದಿವ್ಯಾಔಷಧವಾಗಿದೆ. ತಮ್ಮ ಜನಸಂಖ್ಯಾ ಬಾಹುಳ್ಯದ ತೂಕದ ಮೂಲಕ ಬೆದರಿಕೆ ಹಾಕುವುದರೊಂದಿಗೆ ವ್ಯವಸ್ಥಿತವಾದ ಸಾಂವಿಧಾನಿಕ ಉಲ್ಲಂಘನೆಯನ್ನು ಈ ಸಮುದಾಯಗಳು ನಡೆಸಿದ್ದು, ನಮ್ಮ ರಕ್ಷಣೆಗಾಗಿ ಮತ್ತು ಅವರಿಂದ ಉಂಟಾದ ಅಸಂಗತತೆಗಾಗಿ ನಮ್ಮ ದೇಶದ ಅತ್ಯುನ್ನತ ಕಾನೂನು ನ್ಯಾಯಾಲಯ (ಸರ್ವೋಚ್ಚ ನ್ಯಾಯಾಲಯ) ಮತ್ತು ವಿಶ್ವಸಂಸ್ಥೆಯ ಬಾಗಿಲು ತಟ್ಟಲು ನಮಗೆ ದಾರಿ ಮಾಡಿಕೊಡುತ್ತಿದೆ ಎಂದು ತಿಳಿಸಿದ್ದಾರೆ.