ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ಪ್ರತಿಷ್ಠಿತ ಕುಂಡ್ಯೋಳಂಡ ಹಾಕಿ ಹಬ್ಬಕ್ಕೆ ದಿನಗಣನೆ ಆರಂಭಗೊಂಡಿದ್ದು, ಕೊಡವ ಹಾಕಿ ಅಕಾಡೆಮಿ ಒಂದು ಕೆ.ಜಿ ಬೆಳ್ಳಿಯ ರೋಲಿಂಗ್ ಟ್ರೋಫಿಯನ್ನು ಕುಂಡ್ಯೋಳಂಡ ಕುಟುಂಬಸ್ಥರಿಗೆ ಹಸ್ತಾಂತರಿಸಿತು.
ನಗರದ ಹೊಟೇಲ್ ವೃಂದಾವನ್ ಕೂರ್ಗ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಕಿ ಅಕಾಡೆಮಿಯ ಪ್ರಮುಖರು ಹಾಗೂ ಕುಂಡ್ಯೋಳಂಡ ಕುಟುಂಬದ ಮುಖ್ಯಸ್ಥರು ಹಾಕಿ ಹಬ್ಬದ ಯಶಸ್ಸಿಗಾಗಿ ಸಮಾಲೋಚಿಸಿದರು. ಈ ಸಂದರ್ಭ ಅಕಾಡೆಮಿಯ ಪದಾಧಿಕಾರಿಗಳು ರೋಲಿಂಗ್ ಟ್ರೋಫಿಯನ್ನು ಕುಂಡ್ಯೋಳಂಡ ಕುಟುಂಬದ ಪ್ರಮುಖರಿಗೆ ನೀಡಿ ಶುಭ ಕೋರಿದರು.
ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ, ಉಪಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ಕ್ರೀಡಾಕೂಟದ ಸಂಚಾಲಕ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ, ಅಧ್ಯಕ್ಷ ರಮೇಶ್ ಮುದ್ದಯ್ಯ, ಖಜಾಂಚಿ ಕುಂಡ್ಯೋಳಂಡ ವಿಶು ಪೂವಯ್ಯ, ಕಾರ್ಯಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ, ಅಕಾಡೆಮಿ ನಿರ್ದೇಶಕರು ಹಾಗೂ ಕುಂಡ್ಯೋಳಂಡ ಕುಟುಂಬಸ್ಥರು ಉಪಸ್ಥಿತರಿದ್ದರು.
ಮಾ.೩೦ ರಿಂದ ಏ.೨೮ ರವರೆಗೆ ನಾಪೋಕ್ಲುವಿನ ಕೆಪಿಎಸ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಹಾಕಿ ಹಬ್ಬ ನಡೆಯಲಿದ್ದು, ಈಗಾಗಲೇ ೩೬೦ ತಂಡಗಳು ಹೆಸರು ನೋಂದಾಯಿಸಿಕೊಂಡಿವೆ ಎಂದು ಆಯೋಜಕರು ಮಾಹಿತಿ ನೀಡಿದರು.