ಜಿಲ್ಲೆ

ಮಾ.೧೩ರಂದು ಕೊಡವ ಹಾಕಿ ಅಕಾಡೆಮಿ ಮಹಾಸಭೆ

ಮಡಿಕೇರಿ: ಕೊಡವ ಹಾಕಿ ಅಕಾಡೆಮಿಯ ೨೦೨೨-೨೩ನೇ ಸಾಲಿನ ಮಹಾಸಭೆ ಮಾ.೧೩ ರಂದು ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಬೋಪಣ್ಣರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸರ್ವ ಸದಸ್ಯರು ಸಭೆಗೆ ತಪ್ಪದೆ ಹಾಜರಾಗುವಂತೆ ಅಕಾಡೆಮಿ ಉಪಾಧ್ಯಕ್ಷ ಕುಕ್ಕೇರ ಜಯಾ ಚಿಣ್ಣಪ್ಪ ಮನವಿ ಮಾಡಿದ್ದಾರೆ.


ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೧೦.೩೦ ಗಂಟೆಗೆ ವಿರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಅಪ್ಪಚಟ್ಟೋಳಂಡ ಹಾಕಿ ಉತ್ಸವಕ್ಕೆ ಬೆಂಬಲ ಸೂಚಿಸುವುದು ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.


ದಿ.ಪಾಂಡಂಡ ಕುಟ್ಟಪ್ಪ(ಕುಟ್ಟಣಿ)ರವರು ೧೯೯೭ರಲ್ಲಿ ಅಕಾಡೆಮಿಯನ್ನು ಪ್ರಾರಂಭಿಸಿದ್ದು, ಪ್ರಸ್ತುತ ೪೦೬ ಕುಟುಂಬಗಳು ಸದಸ್ಯತ್ವ ಪಡೆದುಕೊಂಡಿವೆ. ಹೆಚ್ಚಿನ ಮಾಹಿತಿಗೆ ಗೌರವ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ೯೧೧೦೮೦೮೦೦೯ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.


ಹಾಕಿ ಉತ್ಸವ: ೨೩ನೇ ವರ್ಷದ ಕೊಡವ ಕುಟುಂಬಗಳ ನಡುವಣ ಪ್ರತಿಷ್ಠಿತ ಕೌಟುಂಬಿಕ ಕೊಡವ ಹಾಕಿ ಉತ್ಸವ ನಾಪೋಕ್ಲುವಿನಲ್ಲಿ ಅಪ್ಪಚೆಟ್ಟೋಳಂಡ ಕುಟುಂಬದ ಪ್ರಾಯೋಜಕತ್ವದಲ್ಲಿ ಮಾ.೧೮ ರಿಂದ ಏ.೯ರ ವರೆಗೆ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಉದ್ಘಾಟಿಸಲಿದ್ದಾರೆ.


ಈಗಾಗಲೇ ೩೩೬ ತಂಡಗಳು ನೋಂದಾಯಿಸಿಕೊಂಡಿದ್ದು, ತಂಡಗಳ ನೋಂದಾವಣಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆಸಕ್ತ ಕೊಡವ ತಂಡಗಳು ನೋಂದಾಯಿಸಿಕೊಳ್ಳಬಹುದಾಗಿದೆ. ವಿಜೇತ ತಂಡಕ್ಕೆ ಅಕಾಡೆಮಿ ವತಿಯಿಂದ ಪ್ರಥಮ ಬಾರಿಗೆ ಬೆಳ್ಳಿಯ ರೋಲಿಂಗ್ ಟ್ರೋಫಿ ನೀಡಲಾಗುವುದು. ಕೊಡಗಿನ ಜನತೆ ಹೆಚ್ಚಿನ ಸಂಖೆಯಲ್ಲಿ ಆಗಮಿಸಿ ಹಾಕಿ ಉತ್ಸವವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.


ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ನಿರ್ದೇಶಕರಾದ ಚೆಯ್ಯಂಡ ಸತ್ಯ, ಕಂಬೀರಂಡ ರಾಖಿ ಪೂವಣ್ಣ ಉಪಸ್ಥಿತರಿದ್ದರು.