ಮಡಿಕೇರಿ:
ಕೊಡಗಿನ ವೀರ ಸೇನಾನಿಗಳಾದ ಫಿ.ಮಾ. ಕೊಡಂದೇರ ಕಾರ್ಯಪ್ಪ ಮತ್ತು ಜನರಲ್ ಕೊಡಂದೇರ ತಿಮ್ಮಯ್ಯ ಅವರನ್ನು ನಿಂದಿಸಿ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಹರಿಯಬಿಟ್ಟಿರುವುದರ ವಿರುದ್ಧ ಜಿಲ್ಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸೇನಾನಿಗಳನ್ನು ನಿಂದಿಸುವ ಮೂಲಕ ದೇಶದ್ರೋಹದ ಕೆಲಸ ಮಾಡಿರುವ ದುಷ್ಕರ್ಮಿಯನ್ನು ಬಂಧಿಸಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳದಿದ್ದರೆ ಕೊಡಗು ಬಂದ್‌ಗೆ ಕರೆ ಕೊಡುವ ಎಚ್ಚರಿಕೆಯನ್ನೂ ಕೊಡಲಾಗಿದೆ.
ಸ್ವತಂತ್ರ ಭಾರತದ ಬಲಾಢ್ಯ ಸೈನ್ಯ ಕಟ್ಟಿದ ವೀರ ಸೇನಾನಿಗಳಾದ ಫಿ.ಮಾ. ಕೊಡಂದೇರ ಕಾರ್ಯಪ್ಪ ಮತ್ತು ಜನರಲ್ ಕೊಡಂದೇರ ತಿಮ್ಮಯ್ಯ ಅವರನ್ನು ವ್ಯಕ್ತಿಯೊಬ್ಬ ಸಾಮಾಜಿಕ ಮಾಧ್ಯಮದಲ್ಲಿ ಕೆಟ್ಟ ಪದಗಳನ್ನು ಬಳಸಿ ಅವಮಾನ ಮಾಡಿರುವುದು ವೈರಲ್ ಆಗುತ್ತಿದ್ದಂತೆಯೇ ಜಿಲ್ಲೆಯಲ್ಲಿ ಆಕ್ರೋಶ ಭುಗಿಲೆದ್ದಿದೆ.
ಈ ಇಬ್ಬರೂ ಸೇನಾನಿಗಳ ದೇಶ ಸೇವೆ ಮತ್ತು ದೇಶ ಭಕ್ತಿಯನ್ನು ಇಡೀ ವಿಶ್ವವೇ ಕಂಡು, ಕೊಂಡಾಡಿದೆ. ಅಂದಿನಿAದ ಇಂದಿನವರೆಗೂ, ಮುಂದೆಯೂ ಕೂಡ ಭಾರತೀಯ ಸೇನೆಯ ಮಾದರಿ ನೇತಾರರಾಗಿ ನಿಲ್ಲುವ ಈ ಇಬ್ಬರು ಮಹನೀಯರ ಬಗ್ಗೆ, ಅತ್ಯಂತ ತುಚ್ಛವಾಗಿ ನಿಂದಿಸಿರುವ ಕ್ರಮವನ್ನು ದೇಶ ಭಕ್ತರು ಯಾರೂ ಕೂಡ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಸ್ವತಂತ್ರ ಭಾರತದ ಸೇನೆ ಕಟ್ಟಿ ಬೆಳೆಸಿದ, ದೇಶ ಉಳಿಸಿದ ಮಹಾನ್ ಚೇತನಗಳ ವಿರುದ್ದ ಮಾತನಾಡುವುದು ಸಂಪೂರ್ಣ ದೇಶದ್ರೋಹಿ ಚಟುವಟಿಕೆಗೆ ಸಮ. ಹಾಗಾಗಿ ಆರೋಪಿಯನ್ನು ತಕ್ಷಣ ಬಂಧಿಸಿ, ಕಾನೂನಿನ ಮೂಲಕ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸುವಂತಾಗಬೇಕು ಎಂದು ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಆಗ್ರಹಿಸಿದ್ದಾರೆ. ಈ ಸಂಬAಧ ಎಸ್‌ಪಿ ಕೆ. ರಾಮರಾಜನ್ ಅವರಿಗೆ ದೂರು ಸಲ್ಲಿಸಲಾಗಿದ್ದು, ಪ್ರತಿಗಳನ್ನು ಗೃಹಸಚಿವರು, ಪೊಲೀಸ್ ಮಹಾ ನಿರ್ದೇಶಕರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ಶಾಸಕರು, ಸಂಸದರಿಗೂ ರವಾನಿಸಲಾಗಿದೆ.
ಕೊಡಗು ಪೊಲೀಸರ ಕಾರ್ಯಕ್ಷಮತೆಯ ಬಗ್ಗೆ ಹೆಮ್ಮೆಯಿದ್ದು, ಸಂಪೂರ್ಣ ವಿಶ್ವಾಸವಿದೆ. ಅವರು ದೇಶದ್ರೋಹಿಯನ್ನು ಹೆಡೆಮುರಿ ಕಟ್ಟುವ ನಂಬಿಕೆಯೂ ಇದೆ. ಆದರೆ ಈ ಕಾರ್ಯ ಯಾವುದೇ ಕಾರಣಕ್ಕೂ ವಿಳಂಬ ಆಗಬಾರದು ಮತ್ತು ಯಾವುದೇ ರಾಜಕೀಯ ಶಕ್ತಿ ಆರೋಪಿಯ ರಕ್ಷಣೆಗೆ ನಿಲ್ಲಬಾರದು. ಒಂದು ವೇಳೆ ಆರೋಪಿಯ ರಕ್ಷಣೆಯ ಸುಳಿವು ಸಿಕ್ಕರೆ ಅಥವಾ ವಿಳಂಬ ಧೋರಣೆಯಾದರೆ, ಕೊಡಗಿನ ಎಲ್ಲರ ಸಹಕಾರದಿಂದ ಜಿಲ್ಲಾ ಬಂದ್‌ಗೆ ಕರೆ ಕೊಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಈ ಹಿಂದೆಯೂ ಕೂಡ ಸಾಕಷ್ಟು ಬಾರಿ ಇಂಥ ಘಟನೆಗಳು ನಡೆದಿದ್ದು, ಪ್ರತಿ ಬಾರಿಯೂ ಕೇವಲ ತೇಪೆ ಹಚ್ಚುವ ಮತ್ತು ಕ್ಷಮೆ ಕೇಳಿ ಬಿಟ್ಟುಬಿಡುವುದರಿಂದ ಇಂಥವರ ಸಂಖ್ಯೆ ಏರುತ್ತಿದೆ. ಹಾಗಾಗಿ ಈ ವಿಚಾರದಲ್ಲಿ ಯಾರೂ ಕೂಡ ಮೃದು ಧೋರಣೆ ತೋರದೆ, ಆರೋಪಿಗೆ ಗರಿಷ್ಠ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಮತ್ತು ಜಿಲ್ಲೆಯ ಪ್ರತೀ ಮೂಲೆಗಳಲ್ಲೂ ಆ ದುಷ್ಕರ್ಮಿ ವಿರುದ್ದ ದೂರು ದಾಖಲಿಸುವಂತೆ ಎಲ್ಲಾ ದೇಶಭಕ್ತರಲ್ಲೂ ಮನವಿ ಮಾಡುವುದಾಗಿಯೂ ದಿನೇಶ್ ಬೆಳ್ಯಪ್ಪ ತಿಳಿಸಿದ್ದಾರೆ.
ಈ ಪ್ರಕರಣವನ್ನು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಂಡಿಸಿದ್ದಾರೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಮತ್ತು ಕೊಡಗಿನ ಶೌರ್ಯವಂತ ಸೈನಿಕರು ನಮ್ಮ ದೇಶವನ್ನು ರಕ್ಷಿಸಲು ಅಪಾರ ತ್ಯಾಗ ಮತ್ತು ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಅವರ ಪರಂಪರೆಯು ಕಾಲ ಮತ್ತು ರಾಜಕೀಯವನ್ನು ಮೀರಿರುವಂತದ್ದು, ಅತ್ಯುತ್ತಮ ಕರ್ತವ್ಯ ಮತ್ತು ದೇಶಭಕ್ತಿಯ ಮೌಲ್ಯಗಳನ್ನು ಪ್ರತಿಪಾದಿಸುವಂತದ್ದು. ದೇಶಕ್ಕೆ ನಿಸ್ವಾರ್ಥ ಸೇವೆಯ ಸಂಕೇತರಾದ ಇವರುಗಳನ್ನು ಅವಮಾನಿಸುವಂತಹ ಕೃತ್ಯಗಳು ನಡೆಯುತ್ತಿರುವುದು ಅತೀವ ನೋವಿನ ಸಂಗತಿ. ಮೈಸೂರು ಮತ್ತು ಕೊಡಗಿನ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುವ ಸಂಸದನಾಗಿ, ಈ ವೀರರ ಗೌರವವನ್ನು ಕಾಪಾಡಲು ನಾನು ದೃಢ ನಿರ್ಧಾರದಿಂದ ನಿಲ್ಲುತ್ತೇನೆ. ಅವರ ಸೇವೆ ಮತ್ತು ತ್ಯಾಗಗಳು ನಮ್ಮ ದೇಶದ ಭದ್ರತೆ ಮತ್ತು ಏಕತೆಯನ್ನು ರೂಪಿಸಿರುವ ಕಾರಣ, ಅವರಿಗೆ ನಮ್ಮ ಅಚಲ ಗೌರವವನ್ನು ನೀಡುವುದು ನಮ್ಮ ಕರ್ತವ್ಯ ಎಂದಿದ್ದಾರೆ.
ಮುಖ್ಯಮಂತ್ರಿ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಶಾಸಕ ಎ.ಎಸ್. ಪೊನ್ನಣ್ಣ ಕೂಡ ದುಷ್ಕರ್ಮಿಯ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಭಾರತೀಯ ಸೇನೆಯ ಪ್ರಥಮ ಮಹಾ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಧೀಮಂತ ನಾಯಕ ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಮತ್ತು ಭಾಷಾ ಅಲ್ಪಸಂಖ್ಯಾತರಾದ ಆದಿವಾಸಿ ಬುಡಕಟ್ಟು ಕೊಡವ ಜನಾಂಗದ ಬಗ್ಗೆ ಅವಹೇಳನಕಾರಿ ಸಂದೇಶವನ್ನು ಹರಿಬಿಟ್ಟಿರುವುದು ರಾಜಕೀಯ ಪಿತೂರಿ ಎಂದು ಹೇಳಿದ್ದಾರೆ.
ಈ ಪ್ರಕರಣವನ್ನು ಮಡಿಕೇರಿ ಕೊಡವ ಸಮಾಜ ತೀವ್ರವಾಗಿ ಖಂಡಿಸಿದೆ. ಇಡೀ ವಿಶ್ವವೇ ಹೆಮ್ಮೆ ಪಡುವ ವೀರಸೇನಾನಿಗೆ ಮತ್ತು ಕೊಡವ ಜನಾಂಗಕ್ಕೆ ಅಪಮಾನ ಮಾಡಿರುವುದು ದೇಶಕ್ಕೆ ಅಪಮಾನ ಎಸಗಿದಂತೆ. ಅಂಥ ವ್ಯಕ್ತಿಯನ್ನು ಕೂಡಲೇ ಬಂಧಿಸುವ ಮೂಲಕ ಕಠಿಣಕ್ರಮ ಕೈಗೊಳ್ಳಬೇಕೆಂದು ಸಮಾಜದ ವತಿಯಿಂದ ಎಸ್‌ಪಿಗೆ ದೂರು ನೀಡಿ ಒತ್ತಾಯಿಸಲಾಗಿದೆ.
ಭಾರತ ದೇಶ ಕಂಡ ವೀರ ಸೇನಾನಿಗಳಾದ ಫೀ.ಮಾ. ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿರುವ ವ್ಯಕ್ತಿಯನ್ನು ತಕ್ಷಣ ಬಂಧಿಸಬೇಕು. ಭಾರತೀಯ ಸೇನೆಯ ಪಿತಾಮಹ ಫೀ.ಮಾ. ಕಾರ್ಯಪ್ಪ ಹಾಗೂ ಜನರಲ್ ಗಳ ಜನರಲ್ ಖ್ಯಾತಿಯ ಜನರಲ್ ತಿಮ್ಮಯ್ಯ ಅವರನ್ನು ಅವಮಾನಿಸಲಾಗಿದೆ. ಇದು ಕೊಡಗು ಮಾತ್ರವಲ್ಲದೆ ಇಡೀ ದೇಶದ ಜನರಿಗೆ ನೋವನ್ನುಂಟು ಮಾಡಿದೆ. ಭಾರತೀಯ ಸೇನೆಯ ಬಗ್ಗೆ ಗೌರವವಿಲ್ಲದ ದೇಶದ್ರೋಹಿ ವೀರ ಸೇನಾನಿಗಳ ಬಗ್ಗೆ ಕೇವಲವಾಗಿ ಪ್ರತಿಕ್ರಿಯೆ ನೀಡಿದ್ದಾನೆ ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.