ಮಡಿಕೇರಿ:
ಜಬ್ಬೂಮಿ ಚಾರಿಟೇಬಲ್ ಟ್ರೆಸ್ಟ್ ನೇತೃತ್ವದಲ್ಲಿ ಶನಿವಾರ (ಮೇ ೨೦) ಮಡಿಕೇರಿಯಲ್ಲಿ ಕೊಡವ ಯುವ ಮೇಳ ೨೦೨೩ ಆಯೋಜಿಸಲಾಗಿದೆ. ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಇದಕ್ಕೂ ಮೊದಲು ಕಾವೇರಿ ಹಾಲ್ ಬಳಿಯಿಂದ ಕಾರ್ಯಕ್ರಮ ನಡೆಯುವ ಸ್ಥಳದ ತನಕ ಮೆರವಣಿಗೆ ಏರ್ಪಡಿಸಲಾಗಿದೆ ಎಂದು ಜಬ್ಬೂಮಿ ಚಾರಿಟೇಬಲ್ ಟ್ರೆಸ್ಟ್ ಸಂಚಾಲಕ ಚೋಟಕ್‌ಮಾಡ ರಾಜೀವ್ ಬೋಪಯ್ಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇಳದ ಅಂಗವಾಗಿ ಮಧ್ಯಾಹ್ನ ೧೨.೩೦ಕ್ಕೆ ಊಟೋಪಚಾರ ಏರ್ಪಡಿಸಲಾಗಿದ್ದು, ೨ ಗಂಟೆಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಇದರ ಜತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಜನಾಂಗದ ಯುವ ಸಾಧಕರನ್ನು ಸನ್ಮಾನಿಸಲಾಗುವುದು. ನಂತರ ಸನ್ಮಾನಿತರು ಯುವಜನತೆ ಉದ್ದೇಶಿಸಿ ಸ್ಫೂರ್ತಿದಾಯಕ ಮಾತುಗಳನ್ನು ಆಡಲಿದ್ದಾರೆ. ಸಂಜೆ ೫ ಗಂಟೆಗೆ ಕೊಡವ ಪದ್ಧತಿ ಬಿಂಬಿಸುವ ರಾಂಪ್ ವಾಕ್, ಸಂಜೆ ೬.೩೦ರಿಂದ ಕೊಡವ ಡಿಜೆ ಹಮ್ಮಿಕೊಳ್ಳಲಾಗಿದೆ.
ಯಾವುದೇ ವೇದಿಕೆ ಕಾರ್ಯಕ್ರಮ ಇರುವುದಿಲ್ಲ. ಉದ್ಘಾಟನೆಯನ್ನು ವಿಭಿನ್ನವಾಗಿ ನೆರವೇರಿಸಲಾಗುವುದು. ಭಾಷಣಗಳ ಬದಲು ಪ್ರದರ್ಶನ ಕಲೆಗಳ ಮೂಲಕ ಯುವ ಜನತೆಗೆ ಕೊಡವ ಸಮುದಾಯ ಮತ್ತು ಕೊಡಗಿನ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮ ಸಂಚಾಲಕ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಮಾತನಾಡಿ ಇದು ೧೫ ರಿಂದ ೪೦ರ ವಯೋಮಾನದವರಿಗಾಗಿ ನಡೆಯುತ್ತಿರುವ ಕಾರ್ಯಕ್ರಮ. ಹಿರಿಯರು ಹಿಂದೆ ನಿಂತು ನಡೆಸಿಕೊಡುತ್ತಾರೆ. ಸಂಜೆ ೭.೩೦ಕ್ಕೆ ಕಾರ್ಯಕ್ರಮ ಮುಗಿಯಲಿದ್ದು, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಕ್ಕಳನ್ನು ಕಳುಹಿಸಿಕೊಡುವಂತೆ ಮನವಿ ಮಾಡಿದರು.
ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಪ್ರಮುಖರಾದ ಪಾಲೆಯಂಗಡ ಅಮಿತ್ ಭೀಮಯ್ಯ, ಮಲ್ಲಮಾಡ ಪ್ರಭು ಪೂಣಚ್ಚ, ಅಪ್ಪಂಡೇರಂಡ ಯಶ್ವಂತ್ ಕಾಳಪ್ಪ ಸುದ್ದಿಗೋಷ್ಠಿಯಲ್ಲಿ ಇದ್ದರು.