ಮಡಿಕೇರಿ:
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಡಿಕೆಗೆ ಮಾರಕವಾಗಿರುವ ಎಲೆಚುಕ್ಕಿ ಮತ್ತು ಹಳದಿ ಎಲೆ ರೋಗ ಕೊಡಗಿನ ಬೆಳೆಗಾರರನ್ನೂ ಕಾಡುತ್ತಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಅಂತರ ಬೆಳೆಯಾಗಿ ಕೆಲವೆಡೆ ಪ್ರಮುಖ ಬೆಳೆಯಾಗಿ ಅಡಿಕೆ ಬೆಳೆಯಲಾಗುತ್ತಿದ್ದು, ರೋಗದ ಹಾವಳಿಯಿಂದ ಬೆಳೆಗಾರರು ತತ್ತರಿಸಿದ್ದಾರೆ. ರೋಗಪೀಡಿತ ಪ್ರದೇಶ ಮತ್ತು ಅಂದಾಜು ನಷ್ಟದ ಪ್ರಮಾಣವನ್ನು ಸರ್ಕಾರ ಗುರುತಿಸಿದ್ದರೂ ಈ ತನಕ ಯಾವುದೇ ಪರಿಹಾರ ರೈತರಿಗೆ ಸಿಕ್ಕಿಲ್ಲ.
ಜಿಲ್ಲೆಯಲ್ಲಿ ದಕ್ಷಿಣ ಕನ್ನಡ, ಕೇರಳ ಗಡಿಭಾಗದ ಊರುಗಳಲ್ಲಿ ಮೊದಲಿನಿಂದಲೂ ಪ್ರಧಾನ ಬೆಳೆಯಾಗಿ ಅಡಿಕೆ ಬೆಳೆಯಲಾಗುತ್ತಿದೆ. ಹಾಸನ ಮತ್ತು ಮೈಸೂರು ಗಡಿ ಪ್ರದೇಶದಲ್ಲೂ ದೊಡ್ಡ ಪ್ರಮಾಣದಲ್ಲಿ ಅಡಿಕೆ ತೋಟಗಳಿವೆ. ಇದನ್ನು ಹೊರತುಪಡಿಸಿದರೆ ಕಾಫಿ ಮತ್ತು ಅಡಿಕೆಯನ್ನು ಮಿಶ್ರ ಬೆಳೆಯನ್ನಾಗಿ ಬೆಳೆದು ಯಶಸ್ಸು ಕಂಡವರೂ ಕೊಡಗಿನಲ್ಲಿದ್ದಾರೆ. ಇತ್ತೀಚಿನ ವರ್ಷಗಳ ತನಕವೂ ಅಡಿಕೆಯಿಂದ ಉತ್ತಮ ಆದಾಯ ಪಡೆಯುತ್ತಿದ್ದ ಜಿಲ್ಲೆಯ ಬೆಳೆಗಾರರಿಗೂ ಅಡಿಕೆ ತೋಟಕ್ಕೆ ಹಾವಳಿ ಇಟ್ಟಿರುವ ರೋಗಗಳ ಬಿಸಿ ತಟ್ಟಿದೆ.
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಬೆಳೆಗಾರರನ್ನು ಕಂಗಾಲು ಮಾಡಿರುವ ಅಡಿಕೆಯ ಎಲೆಚುಕ್ಕಿ ಮತ್ತು ಹಳದಿ ಎಲೆ ರೋಗ ಕೊಡಗಿನ ಅಡಿಕೆ ತೋಟಗಳಲ್ಲೂ ಹಾವಳಿ ಮಾಡುತ್ತಿದೆ. ಉತ್ತಮ ಆದಾಯ ಗಳಿಸುವ ನಿರೀಕ್ಷೆ ಇಟ್ಟುಕೊಂಡು ಅಡಿಕೆ ತೋಟ ಮಾಡಿದ್ದವರಿಗೆ ಈ ಎರಡು ಮಾರಕ ರೋಗಗಳು ಸರಿಯಾದ ಹೊಡೆತವನ್ನೇ ಕೊಡುತ್ತಿದೆ. ಪರಿಣಾಮಕಾರಿಯಾದ ಹತೋಟಿ ಕ್ರಮಗಳು ಇಲ್ಲದಿರುವುದರಿಂದ ರೋಗ ಪೀಡಿತ ಪ್ರದೇಶಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ
ತೋಟಗಾರಿಕೆ ಇಲಾಖೆಯ 2022-23ನೇ ಸಾಲಿನ ಅಂಕಿ-ಅAಶದ ಪ್ರಕಾರ ಕೊಡಗಿನಲ್ಲಿ 29,450 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಈ ಪೈಕಿ 529 ಹೆಕ್ಟೇರ್ ಪ್ರದೇಶಗಳಲ್ಲಿ ಅಡಿಕೆಯಲ್ಲಿ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದ್ದು, ಸುಮಾರು 3.5 ಕೋಟಿ ರೂ. ನಷ್ಟದ ಅಂದಾಜು ಮಾಡಲಾಗಿದೆ. 2,142 ಹೆಕ್ಟೇರ್ ಪ್ರದೇಶದಲ್ಲಿ ಹಳದಿ ಎಲೆ ರೋಗ ಕಂಡು ಬಂದಿದೆ. ಇದರಿಂದಾಗಿ ಬೆಳೆಗಾರರಿಗೆ ಸುಮಾರು 13.5 ಕೋಟಿ ರೂ. ನಷ್ಟವಾಗಿರುವುದಾಗಿ ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.
ಅಡಿಕೆಯ ಎಲೆ ಚುಕ್ಕಿ ಮತ್ತು ಹಳದಿ ಎಲೆ ರೋಗದ ಬಾಧೆಯನ್ನು ವೈಜ್ಞಾನಿಕವಾಗಿ ನಿಯಂತ್ರಿಸಲು ಮತ್ತು ಹಾನಿಗೀಡಾಗಿರುವ ಅಡಿಕೆ ತೋಟಗಳ ಪುನಶ್ಚೇತನಕ್ಕೆ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ನಷ್ಟಕ್ಕೆ ಒಳಗಾಗಿರುವ ಬೆಳೆಗಾರರಿಗೆ ಪರಿಹಾರ ನೀಡುವುದಕ್ಕೆ ಸಂಬAಧಿಸಿದAತೆ ಯಾವುದೇ ಚಿಂತನೆ ನಡೆಸದೇ ಇರುವುದು ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಅಡಿಕೆ ಎಲೆಚುಕ್ಕಿ ಮತ್ತು ಹಳದಿ ಎಲೆ ರೋಗಗಳ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ನೇಮಿಸಿರುವ ತಜ್ಞರನ್ನು ಒಳಗೊಂಡಿರುವ ಸಮಿತಿ ರೋಗ ಬಾಧಿತ ಜಿಲ್ಲೆಗಳಿಗೆ ಈಗಾಗಲೇ ಭೇಟಿ ಕೊಟ್ಟಿದೆ. ರೋಗ ಹರಡುವಿಕೆಗೆ ಪ್ರಮುಖ ಕಾರಣಗಳು, ರೋಗದ ತೀವ್ರತೆ ಮತ್ತು ಹಾನಿಯ ಪ್ರಮಾಣದ ಬಗ್ಗೆ ಪರೀಶೀಲಿಸಿ ಶಿಫಾರಸ್ಸಿನಂತೆ ರೋಗ ಬಾಧಿತ ಸಸ್ಯದ ಭಾಗಗಳನ್ನು ತೆಗೆಯುವುದು ಮತ್ತು ನಾಶಪಡಿಸುವುದು, ಪೋಷಕಾಂಶಗಳ ನಿರ್ವಹಣೆ, ಸಸ್ಯ ಸಂರಕ್ಷಣೆ ಕ್ರಮಗಳ ಅಳವಡಿಕೆ ಹಾಗೂ ತಾಂತ್ರಿಕ ಮಾಹಿತಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳಿಗೆ ಎಲೆ ಚುಕ್ಕೆ ರೋಗದಿಂದ ಹಾನಿಯಾಗಿರುವ ರಾಜ್ಯದ ಪ್ರದೇಶಗಳಿಗೆ 225.73 ಕೋಟಿ ರೂ.ಗಳ ಪ್ರಸ್ತಾವನೆ ಸಿದ್ಧಪಡಿಸಿ ಕೇಂದ್ರಿಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಮೂಲಕ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ 60:40 ಅನುಪಾತದಲ್ಲಿ 2 ವರ್ಷಗಳ ಅವಧಿಯಲ್ಲಿ ಪ್ರತಿ ವರ್ಷಕ್ಕೆ 112.83 ಕೋಟಿಗಳಿಗೆ ಪ್ರಸ್ತಾವನೆಯನ್ನು ತಯಾರಿಸಿ ಕೇಂದ್ರ ಸಲ್ಲಿಸಲಾಗಿದ್ದು, ಅನುಮೋದನೆಗಾಗಿ ಕಾಯಲಾಗುತ್ತಿದೆ.
ಈ ರೋಗಗಳ ನಿಯಂತ್ರಣದ ಕುರಿತು ಸಂಶೋಧನೆ ಕೈಗೊಳ್ಳಲು ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ರೂಪಿಸಿರುವ 7.75 ಕೋಟಿ ರೂ. ಪ್ರಸ್ತಾವನೆಯನ್ನು ನಬಾರ್ಡ್ ನೆರವಿನ ಯೋಜನೆ ಅಡಿಯಲ್ಲಿ ನೆರವು ಒದಗಿಸಲು ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿದೆ. ರಾಷ್ಟ್ರೀಯ ತೋಟಗಾರಿಕೆ ಮಿಶನ್ ಯೋಜನೆಯ ಅಡಿಯಲ್ಲೂ 6.89 ಕೋಟಿ ರೂ.ಗಳಿಗೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಇದಕ್ಕೂ ಅನುಮೋದನೆ ನಿರೀಕ್ಷಿಸಲಾಗುತ್ತಿದೆ.
ಅಡಿಕೆ ಮರಗಳಲ್ಲಿ ಸಸ್ಯ ಸಂರಕ್ಷಣಾ ಔಷಧಿ ಸಿಂಪಡಣೆ, ಕಟಾವು ಮಾಡಲು ತೋಟಗಾರಿಕೆಯಲ್ಲಿ ಯಾಂತ್ರೀಕರಣ ಯೋಜನೆಯಡಿ ಕಾರ್ಬನ್ ಫೈಬರ್ ದೋಟಿ ಖರೀದಿಸಲು ಸಾಮಾನ್ಯ ವರ್ಗದ ರೈತರಿಗೆ ಶೇ.40ರಂತೆ 40 ಸಾವಿರ ರೂ., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 50 ರಂತೆ 50 ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ.
ರಾಷ್ಟ್ರೀಯ ತೋಟಗಾರಿಕೆ ಮಿಶನ್ ಯೋಜನೆಯ ಉಪ ಕಾರ್ಯಕ್ರಮವಾದ ಸಮಗ್ರ ರೋಗ, ಕೀಟಗಳು ಹಾಗೂ ಪೋಷಕಾಂಶಗಳ ನಿರ್ವಹಣೆ ಘಟಕದಡಿ ಅಂದಾಜು ವೆಚ್ಚ 4 ಸಾವಿರ ರೂ.ಗಳಾಗಿದ್ದು, ಇದರಲ್ಲಿ ಶೇ.30 ರಂತೆ, ಪ್ರತಿ ಹೆಕ್ಟೇರ್‌ಗೆ 1,200 ರೂ. ನಂತೆ 4 ಹೆಕ್ಟೇರ್ ವರೆಗೆ ಸಹಾಯಧನ ನೀಡಲಾಗುತ್ತಿದೆ.
ಅಡಿಕೆ ಹಳದಿ ಎಲೆ ರೋಗ ಬಾಧೆಗೆ ನಿರ್ಧಿಷ್ಟವಾದ ಕಾರಣಗಳನ್ನು ಕಂಡು ಹಿಡಿಯಲು 2022-23 ನೇ ಸಾಲಿನಲ್ಲಿ ದಕ್ಷಿಣ ಕನ್ನಡದ ವಿಟ್ಲದಲ್ಲಿ ಇರುವ ಕೇಂದ್ರಿಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರಕ್ಕೆ 50 ಲಕ್ಷ ರೂ. ಅನುದಾನ ಕೊಡಲಾಗಿದೆ. ಅಡಿಕೆ ಎಲೆಚುಕ್ಕೆ ರೋಗದ ನಿಯಂತ್ರಣ ಕುರಿತು ಸಂಶೋಧನೆ ಕೈಗೊಳ್ಳಲು 2023-24 ನೇ ಸಾಲಿನಲ್ಲಿ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ 43.61 ಲಕ್ಷಗಳ ರೂ. ಅನುದಾನ ನೀಡಲಾಗಿದೆ. ಎರಡೂ ಕಡೆಯಲ್ಲೂ ಸಂಶೋಧನಾ ಕಾರ್ಯ ಪ್ರಗತಿಯಲ್ಲಿದೆ ಎಂದು ತೋಟಗಾರಿಕೆ ಇಲಾಖೆ ಮೂಲಗಳು ತಿಳಿಸಿವೆ.
2022-2023 ಮತ್ತು 2023-24ನೇ ಸಾಲಿನಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಅಡಿಕೆ ಹಳದಿ ಎಲೆ ರೋಗ ಬಾಧಿತ ಪ್ರದೇಶಗಳಲ್ಲಿ ಅಡಿಕೆ ಬೆಳೆಯ ಬದಲಾಗಿ ಇತರೆ ವಾಣಿಜ್ಯ ತೋಟಗಾರಿಕೆ ಬೆಳೆಗಳಾದ ಬಾಳೆ, ತೆಂಗು, ಕಾಫಿ, ಕೋಕೋ, ಕಾಳು ಮೆಣಸು, ಜಾಯಿಕಾಯಿ, ಬೆಣ್ಣೆ ಹಣ್ಣು ಹಾಗೂ ಇತರೆ ಬೆಳೆಗಳನ್ನು ಬೆಳೆಯಲು ಆಯಾ ಬೆಳೆಗೆ ಅನುಗುಣವಾಗಿ ಶೇ.40 ರಷ್ಟು ಪ್ರತಿ ಹೆಕ್ಟೇರ್‌ಗೆ 11,952ರಿಂದ 1,23,483 ರೂ. ತನಕ 4 ಹೆಕ್ಟೇರ್ ವರೆಗೆ ಸಹಾಯಧನ ಕೊಡಲಾಗಿದೆ ಎನ್ನುತ್ತದೆ ತೋಟಗಾರಿಕೆ ಇಲಾಖೆ ಅಂಕಿ-ಅAಶಗಳು.
ಎಲೆಚುಕ್ಕಿ ಮತ್ತು ಹಳದಿ ಎಲೆ ರೋಗಕ್ಕೆ ಸಂಬAಧಿಸಿAತೆ ಸರ್ಕಾರ ಕೇವಲ ದೀರ್ಘಾವಧಿ ಪರಿಹಾರಗಳ ಬಗ್ಗೆ ಮಾತ್ರ ಚಿಂತನೆ ನಡೆಸುತ್ತಿದೆ. ಆದರೆ ಈ ರೋಗಗಳಿಂದ ಬೆಳೆಗಾರರಿಗೆ ಆಗಿರುವ ಮತ್ತು ಆಗುತ್ತಿರುವ ನಷ್ಟಕ್ಕೆ ತಕ್ಷಣದ ಪರಿಹಾರದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೆಲವರಂತೂ ಜೀವನಾಧಾರವಾಗಿರುವ ತೋಟವನ್ನೇ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸರ್ಕಾರ ಯೋಚಿಸಬೇಕಿದೆ.
ಹೇಮಂತ್ ಪಾರೇರ, ಬೆಳೆಗಾರ, ಯಡವನಾಡು
ಅಡಿಕೆಯ ಎಲೆ ಚುಕ್ಕಿ ಮತ್ತು ಹಳದಿ ಎಲೆ ರೋಗದ ಬಾಧೆಯನ್ನು ವೈಜ್ಞಾನಿಕವಾಗಿ ನಿಯಂತ್ರಿಸಲು ಮತ್ತು ಹಾನಿಗೀಡಾಗಿರುವ ಅಡಿಕೆ ತೋಟಗಳ ಪುನಶ್ಚೇತನಕ್ಕೆ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ತೋಟಗಾರಿಕೆ ಇಲಾಖೆಯಲ್ಲಿ ರೈತರಿಗೆ ಪರಿಹಾರ ನೀಡುವ ಯಾವುದೇ ಯೋಜನೆಗಳು ಇರುವುದಿಲ್ಲ.
ಎಸ್.ಎಸ್. ಮಲ್ಲಿಕಾರ್ಜುನ್, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ