ಉಡುಪಿ: ಪರಿಶುದ್ಧ ಮಹಿಳೆಯರ ವಸತಿಗೃಹ ಹೆಸರಿನಲ್ಲಿ ಅನುಮತಿ ಪಡೆದು ಕ್ರಿಶ್ಚಿಯನ್ ಪ್ರಾರ್ಥನಾ ಮಂದಿರ ನಿರ್ಮಾಣಕ್ಕೆ ಹುನ್ನಾರ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಹಿಂದೂ ಸಮುದಾಯದ ಹಕ್ಕಿಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಕೊಡಂಕೂರು ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರಘುನಾಥ್ ಅವರು ಹೇಳಿದರು.
ಶುಕ್ರವಾರ ಪುತ್ತೂರು ಗ್ರಾಮದ ಕೊಡಂಕೂರಿನಲ್ಲಿ 1.73 ಎಕರೆ ಪ್ರದೇಶದಲ್ಲಿ ಸಂಶಯಾತ್ಮಕ ಕಟ್ಟಡ ನಿರ್ಮಾಣ ವಿರೋಧಿಸಿ ಸ್ಥಳೀಯ ಕೊಡಂಕೂರು ನಾಗರಿಕ ಹಿತರಕ್ಷಣಾ ವೇದಿಕೆ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಡಿಸ್‌ಕಾಲ್ಸ್ಡ್ ಕಾರ್ಮೆಲೈಟ್ಸ್ ಕರ್ನಾಟಕ ಗೋವಾ ಪ್ರೊವಿನ್ಸ್ ಹೆಸರಲ್ಲಿ ಕಟ್ಟಡ ನೋಂದಣಿಯಾಗಿದ್ದು, ಮಂಗಳೂರಿನ ಬಿಕರನ ಕಟ್ಟೆ ಮೂಲದ ಸಂಸ್ಥೆಯಿಂದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಪ್ರದೇಶದಲ್ಲಿ ಕ್ರಿಶ್ಚಿಯನ್ ಸಮುದಾಯದ 2-3 ಮನೆಗಳಿವೆ. ಅವರಿಗೂ ಈ ಕಟ್ಟಡದ ಬಗ್ಗೆ ಮಾಹಿತಿ ಇಲ್ಲ. ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಯದೆ ಕಾಮಗಾರಿ ನಡೆಸಲಾಗುತ್ತಿದೆ. ಹಿಂದುಳಿದ ಬುಡಕಟ್ಟು ಮತ್ತು ಅಲೆಮಾರಿ ಜನಾಂಗದ ಜನರು ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ ಮತಾಂತರ ನಡೆಸುವ ಉದ್ದೇಶದಿಂದ ಪ್ರಾರ್ಥನಾ ಮಂದಿರ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಯಶ್‌ಪಾಲ್ ಸುವರ್ಣ, ತಕ್ಷಣವೇ ಕಾಮಗಾರಿ ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ಪ್ರಾರ್ಥನಾ ಮಂದಿರದಲ್ಲಿ ಮತಾಂತರ ನಡೆಯಬಹುದು ಎಂಬ ಸಂಶಯ ಜನರಿಗಿದೆ. ಹೀಗಾಗಿ ದಾಖಲೆಗಳನ್ನು ಪರೀಕ್ಷಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ನಗರಸಭಾ ಸದಸ್ಯರಾದ ವಿಜಯ ಕೊಡವೂರು, ಸಂಪಾವತಿ, ಮುಖಂಡರಾದ ಸಂತೋಷ್ ಜತ್ತನ್ನ, ಪ್ರಶಾಂತ್ ಪೂಜಾರಿ, ಅಜಿತ್ ಪೈ, ಶ್ರೀಕಾಂತ್ ಶೆಟ್ಟಿ ಉಪಸ್ಥಿತರಿದ್ದರು.