ಮಡಿಕೇರಿ: ಕೊಡಗಿನ ಕಿತ್ತಳೆ ಅಭಿವೃದ್ಧಿ ಪಡಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸಲಹೆ ಮಾಡಿದರು.
ಭಾರತೀಯ ಕೃಷಿ ಅನುಸಂಧಾನ ಪರಿಷತ್ ಮತ್ತು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಉಪ ಕೇಂದ್ರವಾಗಿರುವ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕಾ ಕೇಂದ್ರದ ೭೫ನೇ ವರ್ಷಾಚರಣೆಯ ಪ್ರಯುಕ್ತ ಸೊಸೈಟಿ ಫಾರ್ ಪ್ರಮೋಷನ್ ಆಫ್ ಹಾರ್ಟಿಕಲ್ಚರ್ ಸಹಯೋಗದೊಂದಿಗೆ ನಗರದ ಕ್ರಿಸ್ಟಲ್ ಕೋರ್ಟ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಪೌಷ್ಠಿಕ ಭದ್ರತೆ ಹಾಗೂ ಜೀವನೋಪಾಯಕ್ಕಾಗಿ ಆರ್ಧ್ರ ಉಷ್ಣ ವಲಯದ ತೋಟಗಾರಿಕಾ ಬೆಳೆಗಳ ’ರಾಷ್ಟ್ರೀಯ ವಿಚಾರ ಸಂಕಿರಣ’ದಲ್ಲಿ ಪಾಲ್ಗೊಂಡು ಮಾತನಾಡಿದರು.
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸ್ಟಾಲ್ ಆರಂಭಿಸಿ ರೈತರಿಗೆ ಮಾಹಿತಿ ನೀಡಬೇಕು. ತಿಂಗಳಲ್ಲಿ ಒಂದು ದಿನ ಶಾಲಾ ಮಕ್ಕಳಿಗೆ ಕೇಂದ್ರದಲ್ಲಿ ಮಾಹಿತಿ ನೀಡಬೇಕು. ಕೊಡಗಿನ ಕಿತ್ತಳೆ ಎಂದು ನಾಗಪುರ ಕಿತ್ತಳೆ ಮಾರಾಟವಾಗುತ್ತಿದ್ದು, ಪ್ರವಾಸಿಗರು ತೆಗೆದುಕೊಂಡು ಹೋಗುತ್ತಿದ್ದಾರೆ. ಆದ್ದರಿಂದ ಕೊಡಗಿನ ಕಿತ್ತಳೆ ಕಡಿಮೆಯಾಗುತ್ತಿದೆ. ಈ ಬಗ್ಗೆ ಗಮನಹರಿಸಬೇಕು. ಕೊಡಗಿನ ಕಿತ್ತಳೆ ಅಭಿವೃದ್ಧಿ ಪಡಿಸುವಂತಾಗಬೇಕು ಎಂದು ಸಲಹೆ ನೀಡಿದರು.
ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಬೋಸ್ ಮಂದಣ್ಣ ಮಾತನಾಡಿ, ಕಾಫಿ ಬೆಲೆ ಏರಿಳಿತವಾಗುತ್ತಿದೆ. ಆದ್ದರಿಂದ ಕಾಫಿಯನ್ನೇ ಅವಲಂಬಿಸಿಕೊಂಡು ರೈತರು ಜೀವನ ಸಾಗಿಸುವುದು ಕಷ್ಟ ಸಾಧ್ಯ. ಬೆಳೆಗಾರರು ಕಾರ್ಯಗಾರದಲ್ಲಿ ಪಾಲ್ಗೊಂಡು ಮಾಹಿತಿ ಪಡೆದುಕೊಳ್ಳುವಂತಾಗಬೇಕು. ತರಕಾರಿ, ಹಣ್ಣು, ಹೂ ಇತರೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುವಂತಾಗಬೇಕು ಎಂದು ತಿಳಿಸಿದರು.
ಐಸಿಎಆರ್, ಐಐಎಚ್‌ಆರ್ ನಿರ್ದೇಶಕ ದೇಬಿ ಶರ್ಮಾ ಮಾತನಾಡಿ, ಕೃಷಿ ಮತ್ತು ತೋಟಗಾರಿಕೆ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿದೆ. ತೋಟಗಾರಿಕೆ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ಅವುಗಳನ್ನು ಸರಿಯಾಗಿ ಬಳಸಿಕೊಳ್ಳುವಂತಾಗಬೇಕು. ಯಾವ ಯಾವ ಕಾಲದಲ್ಲಿ ಯಾವ ಯಾವ ಬೆಳೆಗಳನ್ನು ಬೆಳೆಯ ಬೇಕು ಎಂಬ ಬಗ್ಗೆ ಬೆಳೆಗಾರರಲ್ಲಿ ಮಾಹಿತಿ ಇರಬೇಕು ಎಂದು ಸಲಹೆ ಮಾಡಿದರು.
ಚೆಟ್ಟಳ್ಳಿ ತೋಟಗಾರಿಕೆ ಕೇಂದ್ರದ ಮುಖ್ಯಸ್ಥ ಡಾ.ರಾಜೇಂದ್ರ ಮಾತನಾಡಿದರು. ವಿಚಾರ ಸಂಕಿರಣದಲ್ಲಿ ಹಲವು ವಿಚಾರಗಳನ್ನು ವಿಜ್ಞಾನಿಗಳು ಮಂಡಿಸಿದರು. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸಂಶೋಧಕರು ಆಗಮಿಸಿದ್ದರು. ಪ್ರಮುಖವಾಗಿ ಅನುವಂಶಿಕ ವೈವಿಧ್ಯತೆ, ಸಂರಕ್ಷಣೆ, ಬಳಕೆ ಮತ್ತು ಸುಧಾರಣೆ, ಬೆಳೆ ಉತ್ಪಾದನೆ, ಬೆಳೆ ಪದ್ಧತಿ ಮಾದರಿಗಳು ಮತ್ತು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಸಸ್ಯ ಸಂರಕ್ಷಣೆ, ಪರಾಗಸ್ಪರ್ಶಕಗಳು ಮತ್ತು ಜೇನುಸಾಕಾಣೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಸಾಮಾಜಿಕ, ಆರ್ಥಿಕ ಅಂಶಗಳು ಮತ್ತು ಮಾರುಕಟ್ಟೆಯ ಬಗ್ಗೆ ಚರ್ಚೆಗಳು ನಡೆದವು.
ವಿಚಾರ ಸಂಕಿರಣದ ಜತೆಗೆ ರೈತರ ಅನುಕೂಲಕ್ಕಾಗಿ ವಸ್ತು ಪ್ರದರ್ಶನವನ್ನು ಏರ್ಪಡಿಸಿದ್ದು, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಕಾಸರಗೋಡು, ಕೇಂದ್ರೀಯ ಪ್ಲಾಂಟೇಷನ್ ಬೆಳೆಗಳ ಸಂಶೋಧನಾ ಸಂಸ್ಥೆ, ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯ, ಕ್ಯಾಲಿಕಟ್ ಭಾರತೀಯ ಸಾಂಬಾರು ಬೆಳೆಗಳ ಸಂಶೋಧನಾ ಸಂಸ್ಥೆ ಭಾಗವಹಿಸಿ, ವಿವಿಧ ತೋಟಗಾರಿಕಾ ಬೆಳೆಗಳಲ್ಲಿನ ನೂತನ ತಾಂತ್ರಿಕತೆಗಳ ಬಗ್ಗೆ ಮಾಹಿತಿ ನೀಡಿದರು.
ವಸ್ತು ಪ್ರದರ್ಶನದಲ್ಲಿ ಸಿರಿಧಾನ್ಯ ಸೇರಿದಂತೆ ಇತರೆ ಸರ್ಕಾರಿ ಹಾಗೂ ಖಾಸಗಿ ಮಳಿಗೆಗಳು ಗಮನ ಸೆಳೆಯುತ್ತಿವೆ. ರೈತರಿಗೆ ವಿದೇಶಿ ಹಣ್ಣಿನ ಗಿಡಗಳು, ತರಕಾರಿ ಬೀಜಗಳು, ಹೂವಿನ ಗಿಡಗಳು ಹಾಗೂ ಮೌಲ್ಯವರ್ಧಿತ ಆಹಾರೋತ್ಪನ್ನಗಳ ವೀಕ್ಷಣೆ ಹಾಗೂ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಮುಖ್ಯಸ್ಥರು ತಿಳಿಸಿದರು.