ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ವತಿಯಿಂದ ಕೊಡವಲ್ಯಾಂಡ್ ಹಕ್ಕೊತ್ತಾಯ , ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಹಾಗೂ ಕೊಡವರ ಸಾಂವಿಧಾನಿಕ ಹಕ್ಕುಗಳಿಗಾಗಿ ಆಯೋಜಿಸಿದ್ದ 8ನೇ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ಪತ್ತ್ ಕಟ್ಟ್ ನಾಡ್ ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ನಡೆಯಿತು. 
ಕೊಡಗು

ಹೆಚ್ಚಿದ ಕೊಡವ ಲ್ಯಾಂಡ್ ಹಕ್ಕೊತ್ತಾಯದ ಕೂಗು

ಮಾನವ ಸರಪಳಿ ನಿರ್ಮಿಸಿ ಒತ್ತಾಯ

ಪೊನ್ನಂಪೇಟೆಯು: ಇಲ್ಲಿನ ಪತ್ತ್ ಕಟ್ಟ್ ನಾಡ್ ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ವತಿಯಿಂದ ಕೊಡವ ಲ್ಯಾಂಡ್ ಹಕ್ಕೊತ್ತಾಯ, ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಹಾಗೂ ಕೊಡವರ ಸಾಂವಿಧಾನಿಕ ಹಕ್ಕುಗಳಿಗಾಗಿ ಶಾಂತಿಯುತವಾಗಿ ಮಾನವ ಸರಪಳಿ ನಿರ್ಮಿಸಿ ಆಗ್ರಹಿಸಲಾಯಿತು.

ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿ, ಕೊಡವಲ್ಯಾಂಡ್ ಆದಿಮಸಂಜಾತ ಕೊಡವ ಜನಾಂಗೀಯ ಸಮುದಾಯದ ಪಾರಂಪರಿಕ ಹಾಗೂ ಅವಿಭಾಜ್ಯ ಮಾತೃಭೂಮಿಯಾಗಿದೆ. ಈ ಪ್ರದೇಶದಲ್ಲಿ ಸ್ವಯಂ ಆಡಳಿತ ಮತ್ತು ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಪಡೆಯುವುದು ಕೊಡವರ ನ್ಯಾಯಸಮ್ಮತ ಹಕ್ಕಾಗಿದೆ ಎಂದು ಪ್ರತಿಪಾದಿಸಿದರು.

ಕೊಡವ ಲ್ಯಾಂಡ್ ಕೊಡವರ ಪಾರಂಪರಿಕ ಮಾತೃಭೂಮಿಯಾಗಿದ್ದು, ಕೊಡಗಿನಲ್ಲಿ ನೆಲೆಸಿರುವ ಇತರ ಸಮುದಾಯಗಳಿಗೆ ಅದು ದತ್ತು ಮಾತೃ ಭೂಮಿಯಾಗಿದೆ ಎಂಬ ಸಿದ್ಧಾಂತ ಮಂಡಿಸಿದ ಅವರು, ಕೊಡಗಿನಲ್ಲಿ ವಾಸಿಸುವ ಪ್ರತಿಯೊಬ್ಬರನ್ನೂ ಗೌರವಿಸುವುದು ಅಗತ್ಯ. ಕೊಡವರ ಸ್ವಾಯತ್ತತೆ ಹಾಗೂ ಸಾಂಸ್ಕೃತಿಕ ಗುರುತಿನ ಬೇಡಿಕೆಗಳಿಗೆ ವಿರೋಧ ವ್ಯಕ್ತಪಡಿಸುವ ಬದಲು ಗೌರವದ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಗನ್-ತೋಕ್ ಪರಂಪರೆಗೆ ಆಗ್ರಹ: ಕೊಡವರ ಸಾಂಪ್ರದಾಯಿಕ ಆಧ್ಯಾತ್ಮಿಕ ಆಚರಣೆಯ ಭಾಗವಾಗಿರುವ ಬಂದೂಕು ಅಥವಾ ಗನ್-ತೋಕ್ ಪರಂಪರೆಗೆ ಸಂವಿಧಾನದ 25 ಮತ್ತು 26ನೇ ವಿಧಿಗಳಡಿ ರಕ್ಷಣೆ ನೀಡಬೇಕು. ಕೊಡವ ತಕ್ಕ್ ಭಾಷೆಯನ್ನು ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸುವುದು, ಕೊಡವರನ್ನು ಪ್ರತ್ಯೇಕ ಜನಾಂಗೀಯ ಸಮುದಾಯವಾಗಿ ಗುರುತಿಸುವುದು ಹಾಗೂ ಸಂಸತ್ತು ಮತ್ತು ರಾಜ್ಯ ವಿಧಾನಮಂಡಲದಲ್ಲಿ ಪ್ರಾತಿನಿಧ್ಯ ಕಲ್ಪಿಸುವುದು ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟರು.

ಕೊಡಗಿನ ಭೂಮಿ, ಜಲಮೂಲಗಳು, ಕಾಫಿ ತೋಟಗಳು, ಅರಣ್ಯಗಳು ಮತ್ತು ಜೀವವೈವಿಧ್ಯತೆಯ ಸಂರಕ್ಷಣೆಯ ಅಗತ್ಯವನ್ನು ವಿವರಿಸಿದ ನಾಚಪ್ಪ, ವಾಣಿಜ್ಯ ಉದ್ದೇಶದ ಭೂಪರಿವರ್ತನೆ, ಬೃಹತ್ ರೆಸಾರ್ಟ್‌ಗಳು ಹಾಗೂ ವಸತಿ ಬಡಾವಣೆಗಳ ನಿರ್ಮಾಣದಿಂದ ಪರಿಸರಕ್ಕೆ ಹಾನಿಯಾಗುವ ಆತಂಕವಿದೆ ಎಂದರು.

ಪಶ್ಚಿಮ ಘಟ್ಟಗಳ ಪರಿಸರ ಸಮತೋಲನ ಮತ್ತು ಕಾವೇರಿ ನದಿಯ ಜಲಮೂಲ ರಕ್ಷಿಸುವುದು ಅತ್ಯಗತ್ಯ. ಬೆಟ್ಟಗಳನ್ನು ಕೊರೆಯುವುದು, ನೈಸರ್ಗಿಕ ಜಲಮೂಲ ಮುಚ್ಚುವುದು ಹಾಗೂ ಕೃಷಿಭೂಮಿ ವಾಣಿಜ್ಯ ಉದ್ದೇಶಗಳಿಗೆ ಪರಿವರ್ತಿಸುವುದರಿಂದ ಭವಿಷ್ಯದಲ್ಲಿ ಗಂಭೀರ ಪರಿಣಾಮಗಳು ಎದುರಾಗಲಿವೆ ಎಂದು ಎಚ್ಚರಿಸಿದರು.

2018ರಲ್ಲಿ ಕೊಡಗಿನ ವಿವಿಧ ಭಾಗಗಳಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದ ಘಟನೆಗಳನ್ನು ಉಲ್ಲೇಖಿಸಿದ ಅವರು, ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ನಿಯಂತ್ರಣವಿಲ್ಲದ ನಿರ್ಮಾಣ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಕಾವೇರಿ ನದಿಯ ನೀರಿನ ಹಂಚಿಕೆಯ ಚರ್ಚೆಯಲ್ಲಿ ಅದರ ಉಗಮಸ್ಥಾನವಾದ ಕೊಡಗಿನ ಪರಿಸರ ಸಂರಕ್ಷಣೆಗೂ ಸಮಾನ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಮೀದೇರಿರ ಕವಿತಾ, ಕೋದೇಂಗಡ ವಿಠಲ, ಆಲೇಮಾಡ ರೋಷನ್, ಮುದ್ದಿಯಡ ನಿತೀನ್, ಮಲಚೀರ ಲೋಕೇಶ್, ಮುದ್ದಿಯಡ ರತೀಶ್, ಮಲಚೀರ ತಶ್ವಿನ್, ಆಲೇಮಾಡ ನವೀನ್, ಕಾಟೀಮಾಡ ಜಿಮ್ಮಿ ಅಣ್ಣಯ್ಯ, ಅಪ್ಪೇಂಗಡ ಮಾಲೆ, ಚೀರಂಡ ಶರಣ್ ಅಯ್ಯಪ್ಪ, ಆಲೇಮಾಡ ರಿಚಿ, ಕೂಕಂಡ ಲತಾ ಕೋಳೆರ ರಾಜಾ, ಚೆಪ್ಪುಡೀರ ರಾಕೇಶ್, ಬೊಟ್ಟಂಗಡ ಗಿರೀಶ್, ಕಾಡ್ಯಮಾಡ ಸುಚನ್ ಇತರರು ಇದ್ದರು.