ಅರೆಕಾಲಿಕ ಕಾನೂನು ಸ್ವಯಂ ಸೇವಕರ ತರಬೇತಿ ಕಾರ್ಯಾಗಾರವನ್ನು ಮಾರುತಿ ಎಸ್.ಬಾಗಡೆ ಅವರು ಉದ್ಘಾಟಿಸಿದರು. ಶುಭಾ, ಕೆ.ಎಂ.ಮೀನಾಕುಮಾರಿ ಇತರರಿದ್ದರು.  Women becoming economically empowered by availing themselves of facilities.
ಕೊಡಗು

ಸೌಲಭ್ಯ ಪಡೆದು ಆರ್ಥಕ ಸಬಲರಾಗುತ್ತಿರುವ ಮಹಿಳೆಯರು

Women becoming economically empowered by availing themselves of facilities.

ಮಡಿಕೇರಿ: ಮಹಿಳೆಯರಿಗೆ ನೀಡಿದ ಅವಕಾಶ ಮತ್ತು ಕಾನೂನು ಸೌಲಭ್ಯಗಳನ್ನು ಬಳಸಿಕೊಂಡು ಸ್ವಾವಲಂಬಿ, ಸದೃಢ ಹಾಗೂ ಸಬಲರಾಗುತ್ತಿರುವುದು ಸಮಾಜದಲ್ಲಿ ಬದಲಾವಣೆಗೆ ಪೂರಕವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಾರುತಿ ಎಸ್.ಬಾಗಡೆ ಹೇಳಿದರು.

ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೊಡಗು-ಮಡಿಕೇರಿ, ಔಟ್‌ಲಾವೆಡ್ ಇಂಡಿಯಾ ಫೌಂಡೇಷನ್ ಮತ್ತು ವಕೀಲರ ಸಂಘದ ಸಹಯೋಗದಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ಯಾವುದೇ ಕಾರ್ಯಕ್ರಮ, ಸಭೆ ಸಮಾರಂಭವಿದ್ದರೂ ಗಂಡಸರು ಭಾಗಿಯಾಗುತ್ತಿದ್ದರು. ಆದರೆ, ಇಂದು ಬದಲಾಗಿದೆ. ಮಹಿಳೆಯರಿಗೆ ನೀಡಿದ ಅವಕಾಶ ಮತ್ತು ಕಾನೂನು ಸೌಲಭ್ಯ ಪಡೆಯುವ ಮೂಲಕ ಸ್ವಾವಲಂಬಿ, ಸದೃಢವಾಗಿ ಸಬಲರಾಗುತ್ತಿರುವುದು ಸಮಾಜದಲ್ಲಿ ಬದಲಾವಣೆಗೆ ಪೂರಕ ಎಂದರು.

ಮಹಿಳೆಯೊಬ್ಬರು ಶಿಕ್ಷಣ ಪಡೆದರೆ ಇಡೀ ಕುಟುಂಬವೇ ಶಿಕ್ಷಣವಂತರಾಗಲಿದೆ. ಕಾನೂನಿನ ಅರಿವು, ಸರ್ಕಾರದ ಸೌಲಭ್ಯದ ಬಗ್ಗೆ ತಿಳಿದು ಇಂದು ಮನೆಯವರಿಗೆ ಮಾಹಿತಿ ನೀಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಛಾಪು ಮೂಡಿಸಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಕಾನೂನು ಸೇವಾ ಪ್ರಾಧಿಕಾರ ಮತ್ತು ಸಮಾಜದ ಮಧ್ಯೆ ಸೇತುವೆಯಂತೆ ಕೆಲಸ ನಿರ್ವಹಿಸಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭಾ ಮಾತನಾಡಿ, ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಪ್ರಾಧಿಕಾರದ ವತಿಯಿಂದ ಗುರುತಿನ ಚೀಟಿ ನೀಡಲಾಗುವುದು. ಅದನ್ನು ಸದುಪಯೋಗ ಪಡಿಸಿಕೊಂಡು ಕಾನೂನು ಅರಿವು, ಜಾಗೃತಿ ಮೂಡಿಸಬೇಕು. ನೊಂದವರಿಗೆ ಕಾನೂನು ಬದ್ಧವಾಗಿ ನೆರವಾಗಬೇಕು. ಕೊಡಗು ಜಿಲ್ಲೆಯಲ್ಲಿ 67 ಅರೆಕಾಲಿಕ ಕಾನೂನು ಸ್ವಯಂ ಸೇವಕರಿದ್ದು, ಎರಡು ದಿನಗಳ ಕಾಲ ಪುನಶ್ಚೇತನ ತರಬೇತಿ ನಡೆಯಲಿದೆ ಎಂದು ತಿಳಿಸಿದರು.

ವಕೀಲೆ ಕೆ.ಎಂ.ಮೀನಾಕುಮಾರಿ ಮಾತನಾಡಿ, ಅರೆಕಾಲಿಕ ಕಾನೂನು ಸ್ವಯಂ ಸೇವಕರು ಪ್ರಾಧಿಕಾರದೊಂದಿಗೆ ಕೈಜೋಡಿಸಿ ಸಮಾಜದಲ್ಲಿನ ಅನ್ಯಾಯದ ವಿರುದ್ಧ ಮಾಹಿತಿ ನೀಡಿ ಹೆಚ್ಚಿನ ಕಾನೂನು ನೆರವು ಬೇಕಾದಾಗ ಪ್ರಾಧಿಕಾರ ಸಂಪರ್ಕಿಸಬಹುದು. ನಿಸ್ವಾರ್ಥ ಸೇವೆಯ ಮೂಲಕ ಸಮಾಜ ಸೇವೆಗೆ ಇದೊಂದು ಅವಕಾಶ ಎಂದು ಅಭಿಪ್ರಾಯಪಟ್ಟರು.

ಔಟ್‌ಲಾಡ್ ಇಂಡಿಯಾ ಬೆಂಗಳೂರು ತರಬೇತುದಾರರಾದ ಶಮಾ.ಡಿ ಮತ್ತು ನಿಹಾರಿಕಾ ಅವರು ಜಿಲ್ಲೆಯ ವಿವಿಧ ಸ್ಥಳಗಳಿಂದ ಬಂದಂತಹ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಹಲವು ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರಿದ್ದರು.