ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಸುಂಟಿಕೊಪ್ಪ ಪಟ್ಟಣದಲ್ಲಿ ಶನಿವಾರ ಸಂಜೆ ಪಥಸಂಚಲನ ನಡೆಯಿತು. 
ಕೊಡಗು

ಸುಂಟಿಕೊಪ್ಪದಲ್ಲಿ ಆರ್‌ಎಸ್‌ಎಸ್ ಪಥಸಂಚಲನ

ಕುಶಾಲನಗರದ ತಾಲೂಕು ರಾಷ್ಟ್ರೀಯ ಸ್ಚಯಂ ಸೇವಕ ಸಂಘ

ಸುಂಟಿಕೊಪ್ಪ: ಕುಶಾಲನಗರದ ತಾಲೂಕು ರಾಷ್ಟ್ರೀಯ ಸ್ಚಯಂ ಸೇವಕ ಸಂಘದಿಂದ ವಿಜಯದಶಮಿ ಪಥಸಂಚಲನ ಸುಂಟಿಕೊಪ್ಪ ಪಟ್ಟಣದಲ್ಲಿ ಶನಿವಾರ ಸಂಜೆ ಹಮ್ಮಿಕೊಳ್ಳಲಾಗಿತ್ತು.

ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದ ಆರ್.ಕೆ.ಬಡಾವಣೆಯಲ್ಲಿ ಸಂಘದ ಭಗಧ್ವಜಕ್ಕೆ ಪುಷ್ಪನಮನ ನಡೆಸುವ ಮೂಲಕ ಪ್ರಾರ್ಥನೆಯೊಂದಿಗೆ ಪಥ ಸಂಚಲನಕ್ಕೆ ಚಾಲನೆ ನೀಡಲಾಯಿತು.

ಘೋಷ್ ವಾದ್ಯದ ಮುಂದಾಳತ್ವದಿಂದ ಶಿಸ್ತುಬದ್ಧವಾಗಿ ಸಮವಸ್ತ್ರದೊಂದಿಗೆ ನಡೆದ ಪಥಸಂಚಲನ ಗದ್ದೆಹಳ್ಳ ಮಾರ್ಗವಾಗಿ ಪಟ್ಟಣದ ಮೂಲಕ ಅಯ್ಯಪ್ಪ ದೇವಾಲಯದವರೆಗೆ ಸಾಗಿ ಅಲ್ಲಿಂದ ಹಿಂತಿರುಗಿ ಮಾರುಕಟ್ಟೆ ಮಾರ್ಗವಾಗಿ ತೆರಳಿ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಾಲಯದಲದಲ್ಲಿ ಸಂಪನ್ನಗೊಂಡಿತು. ಮಾರ್ಗದುದ್ದಕ್ಕೂ ಮಹಿಳೆಯರು, ಮಕ್ಕಳು ಪುಷ್ಪಾರ್ಚನೆ ಮಾಡುವ ಮೂಲಕ ಪಥಸಂಚಲನದಲ್ಲಿ ಭಾಗವಹಿಸಿದ ಸ್ವಯಂ ಸೇವಕರಿಗೆ ಸ್ವಾಗತ ನೀಡಿದರು.

ಕುಶಾಲನಗರ ತಾಲೂಕಿನ ಸುಂಟಿಕೊಪ್ಪ, ಏಳನೇ ಹೊಸಕೋಟೆ, ಕೊಡಗರಹಳ್ಳಿ, ಕುಶಾಲನಗರ, ನಾಕೂರು ಕಾನ್ ಬೈಲ್, ಕಂಬಿಬಾಣೆ, ಚೆಟ್ಟಳ್ಳಿ, ಕೆದಕಲ್, ಮತ್ತಿಕಾಡು ಸೇರಿದಂತೆ ಇತರ ಗ್ರಾಮಗಳ ಸ್ವಯಂ ಸೇವಕರು ಭಾಗವಹಿಸಿದ್ದರು. ಸುಂಟಿಕೊಪ್ಪ ಪಿಎಸ್‌ಐ ಮೋಹನ್ ರಾಜ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಸ್ವಯಂ ಸೇವಕರು ಮತ್ತು ಸಾರ್ವಜನಿಕರಿಗೆ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.