ಗೋಣಿಕೊಪ್ಪಲು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ವತಿಯಿಂದ ಸಿರಿಧಾನ್ಯಗಳಿಂದ ಮೌಲ್ಯವರ್ಧಿತ ಆಹಾರ ಉತ್ಪನ್ನಗಳ ತಯಾರಿಕೆ ಕುರಿತು ಏರ್ಪಡಿಸಿದ್ದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಗೃಹ ವಿಜ್ಞಾನ ವಿಷಯ ತಜ್ಞರಾದ ಡಾ. ಮೃಣಾಲ್ ಬರ್ಬಾಯಿ ಮತ್ತು ದೀಪ್ನಾ ಆಹಾರ ತಯಾರಿಕೆಯ ಪ್ರಾತ್ಯಕ್ಷಿಕೆ ನೀಡಿದರು. ವಿದ್ಯಾರ್ಥಿಗಳು, ಮಹಿಳೆಯರು ಪಾಲ್ಗೊಂಡಿದ್ದರು 
ಕೊಡಗು

ಸಿರಿಧಾನ್ಯಗಳಿಂದ ಮೌಲ್ಯವರ್ಧಿತ ಆಹಾರ ಉತ್ಪಾದನೆ

ಗೋಣಿಕೊಪ್ಪಲು

ಗೋಣಿಕೊಪ್ಪಲು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ವತಿಯಿಂದ ಸಿರಿಧಾನ್ಯಗಳಿಂದ ಮೌಲ್ಯವರ್ಧಿತ ಆಹಾರ ಉತ್ಪನ್ನಗಳ ತಯಾರಿಕೆ ಕುರಿತು ಸಿರಿಧಾನ್ಯಗಳ ಸವಿರುಚಿ ಪ್ರತಿ ತುತ್ತಿನಲ್ಲೂ ಪೌಷ್ಟಿಕಾಂಶ ಎಂಬ ಶೀರ್ಷಿಕೆಯಡಿ ಶುಕ್ರವಾರ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗೋಣಿಕೊಪ್ಪಲು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಸಂಗಪ್ಪ ಉಪಸ್ಥಿತಿಯಲ್ಲಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನೆರವೇರಿತು. ಈ ತರಬೇತಿಯಲ್ಲಿ 14 ವಿದ್ಯಾರ್ಥಿಗಳು ಹಾಗೂ 10 ಮಹಿಳೆಯರು ಸೇರಿದಂತೆ ಒಟ್ಟು 24 ಅಭ್ಯರ್ಥಿಗಳು ಪಾಲ್ಗೊಂಡು ತರಬೇತಿ ಪಡೆದುಕೊಂಡರು.

ಗೃಹ ವಿಜ್ಞಾನ ವಿಷಯ ತಜ್ಞರಾದ ಡಾ. ಮೃಣಾಲ್ ಬರ್ಬಾಯಿ ಅವರು ದೀಪ್ನಾ ಅವರ ಸಹಕಾರದೊಂದಿಗೆ ತರಬೇತಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಭಾಗವಹಿಸಿದವರಿಗೆ ಸಿರಿಧಾನ್ಯಗಳ ವಿವಿಧ ಪ್ರಕಾರಗಳು, ಅವುಗಳ ಪೌಷ್ಟಿಕಾಂಶದ ಮೌಲ್ಯ ಹಾಗೂ ಆರೋಗ್ಯದ ಪ್ರಯೋಜನಗಳು.

ಗುಣಮಟ್ಟದ ಕಚ್ಚಾ ವಸ್ತುಗಳ ಆಯ್ಕೆ, ಆಹಾರ ಸುರಕ್ಷತಾ ಕ್ರಮಗಳು ಮತ್ತು ಪ್ಯಾಕೇಜಿಂಗ್ ತಂತ್ರಗಳು, ಮಾರುಕಟ್ಟೆ ಅವಕಾಶಗಳು, ಉತ್ಪಾದನಾ ವೆಚ್ಚದ ಲೆಕ್ಕಾಚಾರ ಹಾಗೂ ಸಿರಿಧಾನ್ಯ ಆಧಾರಿತ ಉದ್ಯಮಶೀಲತೆಯ ಕುರಿತು ವಿಸ್ತೃತ ಮಾಹಿತಿ ನೀಡಲಾಯಿತು.

ತರಬೇತಿಯ ಭಾಗವಾಗಿ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಲಾಗಿದ್ದು, ರಾಗಿ ಚಾಕೊಲೇಟ್ ಕೇಕ್, ಸಿರಿಧಾನ್ಯ ದೋಸೆ, ರಾಗಿ ಬಿಸ್ಕತ್ತುಗಳು ಹಾಗೂ ನವಣೆ ಉಪ್ಪಿಟ್ಟು ಮುಂತಾದ ಪೌಷ್ಟಿಕಾಂಶಯುಕ್ತ ಹಾಗೂ ನವೀನ ಆಹಾರ ಉತ್ಪನ್ನಗಳನ್ನು ತಯಾರಿಸುವ ವಿಧಾನವನ್ನು ಪ್ರಾಯೋಗಿಕವಾಗಿ ಕಲಿಸಿಕೊಡಲಾಯಿತು. ಇದರಿಂದ ಭಾಗವಹಿಸಿದವರು ವಿವಿಧ ಸಿರಿಧಾನ್ಯಗಳ ಮೌಲ್ಯವರ್ಧನೆಯಲ್ಲಿ ಪ್ರಾಯೋಗಿಕ ಅನುಭವ ಪಡೆದರು.

ಸಿರಿಧಾನ್ಯ ಆಧಾರಿತ ಮೌಲ್ಯವರ್ಧಿತ ಉತ್ಪನ್ನಗಳು ಪೌಷ್ಟಿಕ ಭದ್ರತೆಯನ್ನು ಹೆಚ್ಚಿಸುವುದರ ಜೊತೆಗೆ ಸ್ವಯಂ ಉದ್ಯೋಗ ಸೃಷ್ಟಿ ಹಾಗೂ ಆದಾಯ ಗಳಿಕೆಗೆ ಉತ್ತಮ ಅವಕಾಶ ನೀಡುತ್ತವೆ ಎಂಬುದನ್ನು ಕಾರ್ಯಕ್ರಮದಲ್ಲಿ ತಿಳಿಸಲಾಯಿತು. ಭಾಗವಹಿಸಿದವರು ಸ್ವಂತ ಉದ್ಯಮ ಪ್ರಾರಂಭಿಸಿ ಮಾರುಕಟ್ಟೆ ಕಂಡುಕೊಳ್ಳಲು ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ವಿಷಯ ತಜ್ಞ ಬಿ. ಪ್ರಭಾಕರ, ಸಸ್ಯ ಸಂರಕ್ಷಣೆ ವಿಷಯ ತಜ್ಞ ಕೆ.ವಿ. ವೀರೇಂದ್ರ ಕುಮಾರ್, ಪಶು ವಿಜ್ಞಾನ ವಿಷಯ ತಜ್ಞ ಡಾ. ಎಸ್.ಸಿ. ಸುರೇಶ್, ಮಣ್ಣು ವಿಜ್ಞಾನ ವಿಷಯ ತಜ್ಞ ಡಾ. ಕೆ.ಟಿ. ಮೋಹನ್ ಕುಮಾರ್ ಹಾಗೂ ಕಂಪ್ಯೂಟರ್ ಕಾರ್ಯಕ್ರಮ ಸಹಾಯಕ ಬೆನೆಸಿಯೊ ಫರ್ನಾಂಡಿಸ್ ಉಪಸ್ಥಿತರಿದ್ದು, ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧಿತ ಉತ್ಪನ್ನ ತಯಾರಿಕೆಯ ಉದ್ಯಮಶೀಲತಾ ಚಟುವಟಿಕೆಗಳಿಗೆ ಅಗತ್ಯ ಮಾರ್ಗದರ್ಶನ ನೀಡಿದರು.

====