ಮಡಿಕೇರಿ
ಕೊಡವ ನ್ಯಾಷನಲ್ ಕೌನ್ಸಿಲ್ ನೇತೃತ್ವದಲ್ಲಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ ಹಾಗೂ ಕೊಡವರ ವಿಶಿಷ್ಟ ಸಾಂಸ್ಕೃತಿಕ ಗುರುತಿನ ರಕ್ಷಣೆಗೆ ಆಗ್ರಹಿಸಿ ಚೇರಂಬಾಣೆಯಲ್ಲಿ 5ನೇ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ಮಂಗಳವಾರ ನಡೆಯಿತು. ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ಕೊಡವಲ್ಯಾಂಡ್ ಎನ್ನುವುದು ಕೇವಲ ನಕ್ಷೆಯಲ್ಲ, ಅದು ಕೊಡವರ ಪವಿತ್ರ ಮಾತೃಭೂಮಿ. ಸಂವಿಧಾನದ ವಿಧಿ 244, 371 ಹಾಗೂ 5ನೇ ಮತ್ತು 6ನೇ ಪರಿಚ್ಛೇದಗಳ ಅಡಿಯಲ್ಲಿ ಕೊಡವರ ಸ್ವಯಂ ಆಡಳಿತ ಹಕ್ಕನ್ನು ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.
2027ರ ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರನ್ನು ವಿಶಿಷ್ಟ ಜನಾಂಗೀಯ ಸಮುದಾಯವಾಗಿ ದಾಖಲಿಸಬೇಕು. ಕೊಡವ ತಕ್ಕ್ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವುದು, ಒಳನಾಡು ಪರವಾನಗಿ ವ್ಯವಸ್ಥೆ ಜಾರಿಗೊಳಿಸುವುದು ಹಾಗೂ ಗನ್-ತೋಕ್ (ಶಸ್ತ್ರಾಸ್ತ್ರ) ಪರಂಪರೆಯನ್ನು ವಿಧಿ 25, 26 ಮತ್ತು 28ರ ಅಡಿಯಲ್ಲಿ ಧಾರ್ಮಿಕ-ಸಾಂಸ್ಕೃತಿಕ ಆಚರಣೆಯಾಗಿ ರಕ್ಷಿಸುವುದು. ವಾಣಿಜ್ಯ ಉದ್ದೇಶದ ಭೂ ಪರಿವರ್ತನೆ, ಬೃಹತ್ ರೆಸಾರ್ಟ್ ಮತ್ತು ಟೌನ್‌ಶಿಪ್‌ಗಳ ನಿರ್ಮಾಣದಿಂದ ಕೊಡಗಿನ ಜೀವವೈವಿಧ್ಯ ಹಾಗೂ ಕಾವೇರಿ ಜಲಾನಯನ ಪ್ರದೇಶಕ್ಕೆ ಧಕ್ಕೆಯಾಗುತ್ತಿದ್ದು, ಇದನ್ನು ತಕ್ಷಣವೇ ತಡೆಯಬೇಕು ಎಂದು ನಾಚಪ್ಪ ಆಗ್ರಹಿಸಿದರು.
ಇದೇ ವೇಳೆ ಕೊಡವ ನಾಡಿನ ರಕ್ಷಣೆಗೆ ಪ್ರಮಾಣ ವಚನ ಸ್ವೀಕರಿಸಲಾಯಿತು.
ಅಳ್ಮಂಡ ಜೈ ಗಣಪತಿ, ಪಟ್ಟಮಡ ಕುಶ, ಕೇಕಡ ಸಿ. ಮೊಣ್ಣಪ್ಪ, ಬಾಚರಣಿಯಂಡ ಹ್ಯಾರಿ ತಮ್ಮಯ್ಯ, ಮಂದಪAಡ ಮನೋಜ್ ಮಂದಣ್ಣ, ಬೊಳ್ಳರಪಂಡ ಸಾಬು, ನಾಪಂಡ ಗಣೇಶ್, ಕೇಕಡ ವಿಠಲ, ಪಟ್ಟಮಡ ಪ್ರಕಾಶ್, ಮಂದಪAಡ ಸೂರಜ್ ಮತ್ತಿತರರು ಇದ್ದರು. ಮುಂದಿನ ಮಾನವ ಸರಪಳಿ ಕಾರ್ಯಕ್ರಮ ಅಕ್ಟೋಬರ್ 15ರಂದು ಮೂರ್ನಾಡಿನಲ್ಲಿ ನಡೆಯಲಿದೆ ಎಂದು ಸಿಎನ್‌ಸಿ ತಿಳಿಸಿದೆ.