ಮಡಿಕೇರಿ: ಕಲೆ ಮನಸ್ಸಿನ ಅಭಿವ್ಯಕ್ತಿಗೆ ರೂಪ ನೀಡುವುದರೊಂದಿಗೆ ನಮ್ಮ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತದೆ. ಮನುಷ್ಯನ ಜೀವನದಲ್ಲಿ ಭೌತಿಕ ಮತ್ತು ಬೌದ್ಧಿಕ ಬೆಳವಣಿಗೆಯಷ್ಟೇ ಭಾವನಾತ್ಮಕ ಬೆಳವಣಿಗೆಯೂ ಅತ್ಯಂತ ಪ್ರಮುಖವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಜಯಲಕ್ಷ್ಮೀ ರಾಯಕೋಡ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಜಾನಪದ ಪರಿಷತ್ತು, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕಲಾ ಪ್ರತಿಭೋತ್ಸವ-2026 ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸುವುದು ಸವಾಲಿನ ಕೆಲಸವಾಗಿದೆ. ಮಕ್ಕಳು ತಮ್ಮ ಜೀವನವನ್ನು ಸಾರ್ಥಕವಾಗಿ ರೂಪಿಸಿಕೊಳ್ಳಲು ಅವರಿಗೆ ಸಂಸ್ಕಾರದ ಅಗತ್ಯವಿದೆ ಎಂದರು.
ಸಂಸ್ಕೃತಿಯ ಮೂಲಾಧಾರ ಸಂಸ್ಕಾರವಾಗಿದ್ದು, ಅದರ ಬೆಳವಣಿಗೆಯಲ್ಲಿ ಕಲೆ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಪೋಷಿಸುವುದರೊಂದಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು. ಕಲೆಯಲ್ಲಿ ಅರಳೋಣ, ಕಲೆಯಲ್ಲಿ ಬೆಳೆಯೋಣ ಎಂಬ ಆಶಯದೊಂದಿಗೆ ಮುನ್ನಡೆಯಬೇಕು ಎಂದು ಕರೆ ನೀಡಿದ ಅವರು, ಕೊಡಗು ಜಿಲ್ಲೆ ಪುಣ್ಯವೀರ ಭೂಮಿಯಾಗಿದ್ದು, ಇಲ್ಲಿನ ಜನರ ಸಹಕಾರ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ವಿಶೇಷವಾಗಿದೆ ಎಂದು ಬಣ್ಣಿಸಿದರು.
ಕೊಡಗಿನ ಆಚಾರ-ವಿಚಾರಗಳು ವಿಶಿಷ್ಟ: ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕೊಡಗು ಸಾಂಸ್ಕೃತಿಕ ವೈವಿಧ್ಯ ಹೊಂದಿರುವ ಜಿಲ್ಲೆಯಾಗಿದ್ದು, ಇಲ್ಲಿನ ಜನರ ಸಂಸ್ಕೃತಿ, ಜೀವನಶೈಲಿ ಹಾಗೂ ಆಚಾರ-ವಿಚಾರಗಳು ವಿಶಿಷ್ಟವಾಗಿವೆ. ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆ ಇಂದಿಗೂ ಜೀವಂತವಾಗಿದ್ದು, ಜನರ ಸ್ನೇಹಪರ ಬದುಕು ಜಿಲ್ಲೆಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಸ್ಪರ್ಧೆಗಳಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ. ವಿದ್ಯಾರ್ಥಿಗಳು ಯಾವುದೇ ಸ್ಪರ್ಧೆಯಿಂದಲೂ ಹಿಂದೆ ಸರಿಯದೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು. ಪ್ರತಿಭಾವಂತರನ್ನು ಗುರುತಿಸಿ, ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಪ್ರೋತ್ಸಾಹಿಸುವ ಕಾರ್ಯವನ್ನು ಇಲಾಖೆಗಳು ಮಾಡುತ್ತಿವೆ ಎಂದ ಅವರು, ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾವಂತರಿದ್ದು, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಇದರಿಂದ ಪ್ರತಿಭೆಯನ್ನು ಅನಾವರಣಗೊಳಿಸುವುದರೊಂದಿಗೆ ರಾಜ್ಯಮಟ್ಟದಲ್ಲಿಯೂ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಮಾಡುವ ಕೆಲಸದಲ್ಲಿ ತನ್ಮಯತೆ ಇದ್ದರೆ ತನ್ನಿಂದ ತಾನೇ ಹಾಡುಗಳು ಹುಟ್ಟಿಕೊಳ್ಳುತ್ತವೆ. ಜೀವನದಲ್ಲಿ ಗೆಲುವು ಮುಖ್ಯವಾದರೂ, ಸೋಲಿನಿಂದ ಪಾಠ ಕಲಿತು ಮುನ್ನಡೆಯುವುದೇ ನಿಜವಾದ ಯಶಸ್ಸು ಎಂದು ಹೇಳಿದರು.
ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಎಚ್.ಟಿ.ಅನಿಲ್ ಮಾತನಾಡಿ, ಜೆನ್ಜೀ ಪೀಳಿಗೆಗೆ ಆಧುನಿಕ ಮಾಧ್ಯಮಗಳು ಕೈಬೆರಳಿನಲ್ಲಿಯೇ ಲಭ್ಯವಿದೆ. ಹೀಗಾಗಿ ಯುವ ಪೀಳಿಗೆಯ ಪ್ರತಿಭೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಆದರೆ, ಕಲಾವಿದರಲ್ಲಿರುವ ನೈಜ ಪ್ರತಿಭೆಯನ್ನು ಕೃತಕ ಬುದ್ಧಿಮತ್ತೆ ಅಥವಾ ಆಧುನಿಕ ಮಾಧ್ಯಮಗಳ ಮೂಲಕ ಸೃಷ್ಟಿಸಲು ಸಾಧ್ಯವಿಲ್ಲ. ನೈಜ ಕಲಾ ಪ್ರತಿಭೆಯನ್ನು ಅನಾವರಣಗೊಳಿಸಲು ಸರ್ಕಾರ ಇಂತಹ ವೇದಿಕೆಗಳನ್ನು ಕಲ್ಪಿಸಿರುವುದು ಶ್ಲಾಘನೀಯ ಎಂದರು.
ಮಡಿಕೇರಿ ಮತ್ತು ಕುಶಾಲನಗರದಲ್ಲಿ ನಿರ್ಮಾಣದ ಅಂತಿಮ ಹಂತದಲ್ಲಿರುವ ಕಲಾ ಭವನಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ ಕಲಾಪ್ರೇಮಿಗಳ ಪರವಾಗಿ ಅನಿಲ್ ಮನವಿ ಮಾಡಿದರು.
ಕನ್ನಡ ಜಾಗೃತಿ ಸಮಿತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಬಿ.ಎಸ್.ಲೋಕೇಶ್ ಸಾಗರ್ ಮಾತನಾಡಿ, ಕೊಡಗು ಜಿಲ್ಲೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವ ಅಪರೂಪದ ಸಂಸ್ಕೃತಿಯನ್ನು ಹೊಂದಿರುವ ಜಿಲ್ಲೆಯಾಗಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಭಾಗೀರಥಿ, ಪದ್ಮಶ್ರೀ ಪುರಸ್ಕೃತರಾದ ರಾಣಿ ಮಾಚಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್ ಹಾಗೂ ಜಿಲ್ಲಾ ಬರಹಗಾರರ ಸಂಘದ ಗೌರವ ಕೋಶಾಧಿಕಾರಿ ಸಂಪತ್ ಕುಮಾರ್ ಉಪಸ್ಥಿತರಿದ್ದರು.
ಬಾಲಪ್ರತಿಭೆ, ಕಿಶೋರ ಪ್ರತಿಭೆ ಹಾಗೂ ಯುವಪ್ರತಿಭೆ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆಗಳು ಆಯೋಜಿಸಲಾಗಿದೆ. ಬಾಲಪ್ರತಿಭೆ ಮತ್ತು ಕಿಶೋರ ಪ್ರತಿಭೆ ವಿಭಾಗಗಳಲ್ಲಿ ಸುಗಮ ಸಂಗೀತ, ಜಾನಪದ ಗೀತೆ, ಶಾಸ್ತ್ರೀಯ ನೃತ್ಯ, ಕರ್ನಾಟಕ ಮತ್ತು ಹಿಂದೂಸ್ತಾನಿ ವಾದ್ಯ ಸಂಗೀತ, ಶಾಸ್ತ್ರೀಯ ಸಂಗೀತ ಹಾಗೂ ಚಿತ್ರಕಲೆ ಸ್ಪರ್ಧೆಗಳು ಗಮನ ಸೆಳೆದವು. ಜಿಲ್ಲೆಯ ಐದು ತಾಲ್ಲೂಕುಗಳ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನ.6ರಂದು ಯುವಪ್ರತಿಭೆ ಹಾಗೂ ಸಮೂಹ ಸ್ಪರ್ಧೆಗಳು ನಡೆಯಲಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್, ಜಯಲಕ್ಷ್ಮೀ, ಮಣಜೂರು ಮಂಜುನಾಥ್, ಇತರರು ಇದ್ದರು.
5ಆದರ್ಶ್ಕೆಡಿಜಿಎ7: