ಸಿದ್ದಾಪುರ: ವ್ಯಾಸ ಮಹರ್ಷಿಗಳ ನಂತರ ವೇದಾಂತ ಸೂತ್ರವನ್ನು ಬರೆದ ಮಹಾನ್ ದಾರ್ಶನಿಕ ಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಪಾಲಿಸಬೇಕು ಎಂದು ಕರ್ನಾಟಕ ಆರ್ಯ ಈಡಿಗ ಸಮಾಜದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಕರೆ ನೀಡಿದರು.
ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ ಎಸ್.ಎನ್.ಡಿ.ಪಿ. ಕರಡಿಗೋಡು ಶಾಖೆಯ ವತಿಯಿಂದ ಭಾನುವಾರ ಆಯೋಜಿಸಿದ್ದ ಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ವಿದ್ಯಾಭ್ಯಾಸದ ಜತೆಗೆ ಅವರ ನಿತ್ಯದ ಚಟುವಟಿಕೆ ಬಗ್ಗೆಯೂ ಪಾಲಕರು ನಿಗಾ ವಹಿಸಬೇಕು. ಮಕ್ಕಳಲ್ಲಿ ಶಿಸ್ತು ಮತ್ತು ಉತ್ತಮ ಸಂಸ್ಕಾರ ಬೆಳೆಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದರು.
ವನಿತಾ ಸಂಘದ ಕೊಡಗು ಜಿಲ್ಲಾಧ್ಯಕ್ಷೆ ರೀಶಾ ಸುರೇಂದ್ರ ಮಾತನಾಡಿ ಶ್ರೀ ನಾರಾಯಣ ಗುರುಗಳು ಸಕಲ ಧರ್ಮಗಳ ಸಾರವನ್ನು ಒಳಗೊಂಡಂತೆ ರಚಿಸಿದ ದೈವ ದಶಕ ಗೀತೆಗೆ 100 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಎಲ್ಲ ಶಾಖೆಗಳಲ್ಲಿ ಗುರುಗಳ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದರು.
ಎಸ್ಎನ್ಡಿಪಿ ಜಿಲ್ಲಾ ಕಾರ್ಯದರ್ಶಿ ಸಂಜೀವನ್ ಮಾತನಾಡಿ, 1903ರಲ್ಲಿ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ ಎಸ್ಎನ್ಡಿಪಿ ಸ್ಥಾಪನೆಯಾಯಿತು. 1912ರಲ್ಲಿ ಶಿವಗಿರಿಯಲ್ಲಿ ವೇದಾಂತ ಅಧ್ಯಯನಕ್ಕಾಗಿ ಶ್ರೀ ಶಾರದಾ ವಿದ್ಯಾಪೀಠ ಸ್ಥಾಪಿಸುವ ಮೂಲಕ ವಿದ್ಯೆಯಿಂದ ಪ್ರಬುದ್ಧರಾಗಿ ಸಂಘಟನೆಯಿಂದ ಶಕ್ತರಾಗಿ ಎಂಬ ಸಂದೇಶವನ್ನು ಗುರುಗಳು ಜಗತ್ತಿಗೆ ಸಾರಿದರು ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಯಮುನಾ ಮಾತನಾಡಿ, ಗ್ರಾಮದ ಎಲ್ಲ ಸಮುದಾಯದ ಬಾಂಧವರೊಂದಿಗೆ ಗುರುಗಳ ಜಯಂತಿ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದರು.
2025-26ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ಸಮುದಾಯದ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಹಗ್ಗಜಗ್ಗಾಟ ಸೇರಿದಂತೆ ವಿವಿಧ ಮನರಂಜನಾ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು.
ವನಿತಾ ಯೂನಿಯನ್ ಕೊಡಗು ಜಿಲ್ಲಾ ಅಧ್ಯಕ್ಷೆ ರೀಶಾ ಸುರೇಂದ್ರ, ಕಾರ್ಯದರ್ಶಿ ರತ್ನಾ ಅನೀಶ್, ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರತೀಶ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಯಮುನಾ, ರೈತ ಸಂಘ ಅಮ್ಮತ್ತಿ ಹೋಬಳಿ ಅಧ್ಯಕ್ಷ ಸಿ.ಬಿ.ಪೂಣಚ್ಚ, ಆರ್. ರಾಜೀವ್, ಕೆ.ವಿ.ಪ್ರೇಮಾನಂದ, ಎಂ.ಸಂಜೀವ, ಎ.ಕೆ.ಸತ್ಯನಾರಾಯಣ, ಎಂ.ಟಿ.ಶಿವಪ್ರಸಾದ್, ಕೆ.ಡಿ.ನಾಣಯ್ಯ ಉಪಸ್ಥಿತರಿದ್ದರು.