ಕುಶಾಲನಗರ ಸಮೀಪದ ಚಿಕ್ಕನಾಯಕನಹೊಸಳ್ಳಿಯ ಪ್ರಗತಿಪರ ಕೃಷಿಕ ಟಿ.ಜೆ.ಶೇಷಪ್ಪ ಅವರ ಮನೆಯಂಗಳಕ್ಕೆ ಗ್ರಾಮಾನುಭವ ಕಾರ್ಯಕ್ರಮದ ಅಂಗವಾಗಿ ಭೇಟಿ ನೀಡಿದ್ದ ಮಡಿಕೇರಿಯ ಪಿ.ಎಂ.ಶ್ರೀ ಶಾಲೆಯ ಮಕ್ಕಳಿಗೆ ರೈತರು ಕೃಷಿಪಾಠ ಹೇಳಿದರು. ಟಿ.ಜಿ.ಪ್ರೇಮಕುಮಾರ್, ಶಿವಾನಂದ್, ಪುನೀತ್, ತ್ರಿಣೇಶ್ ಇತರರು ಇದ್ದರು. 
ಕೊಡಗು

ಶಾಲಾ ಮಕ್ಕಳಿಗೆ ಗ್ರಾಮೀಣ ಬದುಕಿನ ಪಾಠ

ರೈತರ ಜಮೀನುಗಳಿಗೆ ಭೇಟಿ ನೀಡಿ ಕೃಷಿ ಅನುಭವ

ಕುಶಾಲನಗರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಗ್ರಾಮಾನುಭವ ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳು ಶಿಕ್ಷಕರೊಂದಿಗೆ ಕುಶಾಲನಗರ ತಾಲೂಕಿನ ಹಾರಂಗಿ ನೀರಾವರಿ ಪ್ರದೇಶದ ಹೆಬ್ಬಾಲೆ, ತೊರೆನೂರು ಹಾಗೂ ಶಿರಂಗಾಲ ಗ್ರಾಮದ ಚಿಕ್ಕನಾಯಕನ ಹೊಸಳ್ಳಿ ಗ್ರಾಮಕ್ಕೆ ತೆರಳಿ ರೈತರ ಕೃಷಿ ಜಮೀನಿಗೆ ಭೇಟಿ ನೀಡಿ ಅನುಭವ ಪಡೆದುಕೊಂಡರು.

ಮಡಿಕೇರಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪ್ರೌಢಶಾಲಾ ವಿಭಾಗ ಹಾಗೂ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ 8, 9 ಮತ್ತು 11ನೇ ತರಗತಿಯ ಒಟ್ಟು 50 ಮಕ್ಕಳು ಕೃಷಿ ಕುರಿತು ರೈತರಿಂದ ನೇರ ಅನುಭವ ಪಡೆದರು.

ಮಡಿಕೇರಿಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರು ಮಕ್ಕಳ ಹಳ್ಳಿ ಭೇಟಿಯ ಗ್ರಾಮಾನುಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.

ಪ್ರಗತಿಪರ ರೈತ ಟಿ.ಜೆ.ಶೇಷಪ್ಪ ಮಾತನಾಡಿ, ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಸೂಕ್ತ ಕಾಲದಲ್ಲಿ ವೈಜ್ಞಾನಿಕ ಕ್ರಮದಿಂದ ಕೃಷಿ ಮಾಡಿದರೆ ಖಂಡಿತವಾಗಿಯೂ ಉತ್ತಮ ಲಾಭ ಗಳಿಸಬಹುದು. ಇದರಿಂದ ರೈತರ ಜೀವನಮಟ್ಟ ಸುಧಾರಿಸುವುದರ ಜತೆಗೆ ರಾಷ್ಟ್ರದ ಆಹಾರ ಉತ್ಪಾದನೆಗೆ ಕೊಡುಗೆ ನೀಡಿದಂತಾಗುತ್ತದೆ ಎಂದರು.

ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಎಸ್.ವಿ.ಶಿವಾನಂದ, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಪ್ರಗತಿಪರ ಕೃಷಿಕ ಟಿ.ಜೆ.ಶೇಷಪ್ಪ ವೈವಿಧ್ಯಮಯ ಬೆಳೆ ತೆಗೆಯುವ ಮೂಲಕ ಮಾದರಿ ರೈತನಾಗಿ ಹೊರಹೊಮ್ಮಿದ್ದಾರೆ ಎಂದರು. ಬಳಿಕ ಜೇನು ಕೃಷಿ, ಸಮಗ್ರ ಕೃಷಿ ಕುರಿತು ಮಾಹಿತಿ ನೀಡಿದರು. ಪ್ರಕೃತಿಯೊಂದಿಗೆ ರೈತನ ಒಡನಾಟ ಕುರಿತು ಕೃಷಿ ಪಾಠ ಹೇಳಿದ ಯುವ ಕೃಷಿಕರೂ ಆದ ಕೃಷಿ ಮಾರ್ಗದರ್ಶಕ ಟಿ.ಯು.ಪುನೀತ್, ಆಹಾರದ ಮೂಲದ ಅರಿವು, ಕೃಷಿ ಪದ್ಧತಿಗಳ ಪರಿಚಯ, ಮಾರುಕಟ್ಟೆ ವ್ಯವಸ್ಥೆ ಮತ್ತು ಬೆಲೆಗಳ ಏರಿಳಿತ, ಎರೆಹುಳು ಗೊಬ್ಬರ ತಯಾರಿಕೆ, ಮಣ್ಣಿನ ಆರೋಗ್ಯ ಸಂರಕ್ಷಣೆ ಮತ್ತು ಪೋಷಕಾಂಶಗಳ ನಿರ್ವಹಣೆ, ಕೃಷಿಯಲ್ಲಿ ರೋಗಗಳ ಪತ್ತೆ ಮತ್ತು ವೈಜ್ಞಾನಿಕ ತಡೆಗಟ್ಟುವಿಕೆ ಕುರಿತು ಮಕ್ಕಳೊಂದಿಗೆ ಸಂವಾದ ನಡೆಸಿದರು.

ಇದಕ್ಕೂ ಮೊದಲು ಹೆಬ್ಬಾಲೆ ಗ್ರಾಮದ ಪ್ರಗತಿಪರ ಕೃಷಿಕರಾದ ಎಚ್.ಆರ್.ಶಿವಪ್ಪ (ಹುರಕ್ಕಿ ಕುಮಾರ್) ಅವರ ಕೃಷಿ ಜಮೀನಿಗೆ ಭೇಟಿ ನೀಡಿ ಅಡಿಕೆ ತೋಟ ಮತ್ತು ಹೆಬ್ಬಾಲೆಯ ಎಚ್.ಎನ್.ಬಸಪ್ಪ ಅವರ ತೋಟದಲ್ಲಿ ಕೃಷಿ ಹೊಂಡ ವೀಕ್ಷಿಸಿದ ತಂಡವು ಹೈನುಗಾರಿಕೆ ಕೃಷಿ ಅನುಭವ ಪಡೆಯಿತು. ನಂತರ ತೊರೆನೂರು ವಿರಕ್ತ ಮಠದ ಕೃಷಿ ಜಮೀನಿನಲ್ಲಿ ಬಾಳೆತೋಟಕ್ಕೆ ಭೇಟಿ ನೀಡಿ ಬಾಳೆ ಮತ್ತು ಮೆಕ್ಕೆಜೋಳ ಕೃಷಿ ಬಗ್ಗೆ ಮಾಹಿತಿ ಪಡೆದರು.

ಹಳ್ಳಿ ಊಟ ಸವಿದ ಮಕ್ಕಳು: ಇದೇ ವೇಳೆ ಮಧ್ಯಾಹ್ನ ರೈತ ಟಿ.ಜೆ.ಶೇಷಪ್ಪ ಅವರ ಮನೆಯಂಗಳದಲ್ಲಿ ಮಕ್ಕಳು ಹಳ್ಳಿಯ ಊಟದ ರುಚಿ ಸವಿದು ಖುಷಿಪಟ್ಟರು. ಈ ಭೇಟಿ ಸಂದರ್ಭದಲ್ಲಿ ರೈತರು ಹಾರಂಗಿ ನೀರಾವರಿ ಪ್ರದೇಶದಲ್ಲಿ ಬೆಳೆಯುತ್ತಿರುವ ಕಲ್ಲಂಗಡಿ ತೋಟ, ವಿವಿಧ ಆಹಾರ ಬೆಳೆಗಳು ತೆಂಗು, ಬಾಳೆ, ಭತ್ತ, ರಾಗಿ, ಜೋಳ, ದ್ವಿದಳ ಧಾನ್ಯಗಳು, ತರಕಾರಿ-ಸೊಪ್ಪಿನ ಕೃಷಿ, ರೈತರ ಮನೆ ಅಂಗಳದಲ್ಲಿ ಬೆಳೆದಿರುವ ಹೂವು ಹಾಗೂ ಔಷಧೀಯ ಗಿಡಗಳನ್ನು ವೀಕ್ಷಿಸಿ ಅವುಗಳ ಸಂರಕ್ಷಣೆ, ಪೋಷಣೆ ಹಾಗೂ ಪೌಷ್ಟಿಕಾಂಶಗಳ ಬಗ್ಗೆ ಮಾಹಿತಿ ನೀಡಿದರು.

ಹೆಬ್ಬಾಲೆ ಕ್ಲಸ್ಟರ್ ಸಿಆರ್ಪಿ ಎಂ.ಕೆ.ದಯಾನಂದ ಗ್ರಾಮಾನುಭವದ ಉದ್ದೇಶ ತಿಳಿಸಿದರು. ಮಡಿಕೇರಿ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕಿ ಕೆ.ಎನ್.ಪಲ್ಲವಿ, ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ಕೆ.ವಿ.ಶಶಿಕಲಾ, ಶಿಕ್ಷಕಿ ಸುಮಾ, ಪ್ರಾಥಮಿಕ ಶಾಲಾ ವಿಭಾಗದ ಡಿ.ಶ್ರುತಿಶ್ರೀ, ಎಂ.ಎಸ್.ಪ್ರಿಯ ಮತ್ತಿತರ ಶಿಕ್ಷಕಿಯರು ವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಿದ್ದರು.

ಪ್ರಗತಿಪರ ರೈತರಾದ ತೊರೆನೂರು ಗ್ರಾಮದ ಟಿ.ಎನ್.ಶಿವಾನಂದ, ಟಿ.ಸಿ.ತ್ರಿಣೇಶ್, ಟಿ.ಬಿ.ಬಸಪ್ಪ, ಮಣಜೂರಿನ ಎಂ.ಜಿ.ಕುಮಾರಸ್ವಾಮಿ, ಎಂ.ಎನ್.ಶಶಾಂಕ್, ಯಶೋದಾ, ಟಿ.ಜೆ.ನಾಗೇಶ್ (ನಾಗಣ್ಣ), ಹೆಬ್ಬಾಲೆಯ ಎಚ್.ಎನ್.ಬಸವಣ್ಣ, ಎಚ್.ಆರ್.ಶಿವಪ್ಪ (ಹುರಕ್ಕಿ ಕುಮಾರ್), ನಿವೃತ್ತ ಶಿಕ್ಷಕ ಜಿ.ಮೂರ್ತಿ, ಶೇಷಪ್ಪ ಅವರ ಪತ್ನಿ ಎಂ.ಆರ್.ಜ್ಯೋತಿ, ಮಕ್ಕಳಾದ ಕವನ್ ಮತ್ತು ಕಾವ್ಯಾ ಹಾಗೂ ಗ್ರಾಮಸ್ಥರು ಇದ್ದರು.

ಫೋಟೋ: