ಸೋಮವಾರಪೇಟೆ ಸಮೀಪದ ಸಾಂದೀಪನಿ ಶಾಲೆಯಲ್ಲಿ ಆಯೋಜಿಸಿದ್ದ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮವನ್ನು ಟಿ.ಪಿ.ರಮೇಶ್ ಉದ್ಘಾಟಿಸಿದರು. ವಿಜೇತ, ಜ್ಯೋತಿ, ವೀರರಾಜ್ ಇದ್ದರು. 
ಕೊಡಗು

ವೀರಶೈವ ಅರಸರಿಂದ ಕೊಡಗಿನ ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹ

ಟಿ.ಪಿ.ರಮೇಶ್ ಅಭಿಪ್ರಾಯ

ಸೋಮವಾರಪೇಟೆ: ಕೊಡಗಿನ ವೀರಶೈವ ಅರಸರು ಮೂಲ ನಿವಾಸಿಗಳ ಆಚಾರ-ವಿಚಾರಗಳನ್ನು ಗೌರವಿಸುವುದರೊಂದಿಗೆ ಕಲೆ, ಸಾಹಿತ್ಯ ಮತ್ತು ಧಾರ್ಮಿಕ ಪರಂಪರೆಯ ಬೆಳವಣಿಗೆಗೆ ವಿಶೇಷ ಪ್ರೋತ್ಸಾಹ ನೀಡಿದ್ದರು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಹೇಳಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸೋಮವಾರಪೇಟೆಯ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದಲ್ಲಿ ಶಾಲಾ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ದಿವಂಗತ ಶಾಂತಮಲ್ಲಸ್ವಾಮಿ, ದಿವಂಗತ ಎಸ್.ಎಸ್.ರಾಮಮೂರ್ತಿ ಹಾಗೂ ಕಟ್ಟೆಮನೆ ದಿವಂಗತ ಎಸ್.ಪುಟ್ಟಸ್ವಾಮಿ ಅವರ ಜ್ಞಾಪಕಾರ್ಥ ದತ್ತಿನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೊಡಗಿನ ಅರಸರು ವೀರಶೈವ ಲಿಂಗಾಯತ ಧರ್ಮಕ್ಕೆ ಸೇರಿದವರಾಗಿದ್ದರೂ, ಕೊಡಗಿನ ಮೂಲ ನಿವಾಸಿಗಳ ಸಂಸ್ಕೃತಿ, ಸಂಪ್ರದಾಯ ಹಾಗೂ ಆಚಾರ-ವಿಚಾರಗಳಿಗೆ ಗೌರವ ನೀಡಿದ್ದರು. ಪ್ರಕೃತಿ ಆರಾಧನೆ ಮತ್ತು ಭಗವತಿ ದೇವಿಯ ಆರಾಧನೆಗೆ ಪ್ರೋತ್ಸಾಹ ನೀಡುವ ಮೂಲಕ ಸ್ಥಳೀಯ ಜನರೊಂದಿಗೆ ಬೆರೆತು ಆಡಳಿತ ನಡೆಸಿದ್ದರು. ವಂಶದ ಕೊನೆಯ ಅರಸರಾದ ಚಿಕ್ಕವೀರರಾಜೇಂದ್ರ ಅವರ ಕಾಲದವರೆಗೂ ಕಲೆ ಮತ್ತು ಸಾಹಿತ್ಯಕ್ಕೆ ಉತ್ತಮ ಪ್ರೋತ್ಸಾಹ ದೊರೆಯುತ್ತಿತ್ತು. ಇತಿಹಾಸ ಪ್ರಸಿದ್ಧ ರಾಜೇಂದ್ರನಾಮೆ ಗ್ರಂಥವು ಕೊಡಗಿನ ಇತಿಹಾಸ ತಿಳಿಸುವ ಮಹತ್ವದ ದಾಖಲೆಯಾಗಿದೆ ಎಂದರು.

ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಿ.ಇ.ಅನಸೂಯ, ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಕವಿಗಳು, ಸಾಹಿತಿಗಳು ಹಾಗೂ ಕಲಾವಿದರ ಕೊಡುಗೆ ಕುರಿತು ಉಪನ್ಯಾಸ ನೀಡಿದರು.

ನಂತರ ಕಟ್ಟೆಮನೆ ದಿವಂಗತ ಎಸ್.ಪುಟ್ಟಸ್ವಾಮಿ ಅವರ ಜ್ಞಾಪಕಾರ್ಥ ದತ್ತಿನಿಧಿ ಕಾರ್ಯಕ್ರಮ ಅಂಗವಾಗಿ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆಗಳ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಂದೀಪನಿ ಶಾಲೆಯ ಮುಖ್ಯಶಿಕ್ಷಕಿ ಎನ್.ಎ.ರೇವತಿ, ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ವಾಸಂತಿ ರವೀಂದ್ರ ಇತರರು ಇದ್ದರು.

ವೇದಿಕೆಯಲ್ಲಿ ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಡಿ.ವಿಜೇತ್, ಕಾರ್ಯದರ್ಶಿಗಳಾದ ಎ.ಪಿ.ವೀರರಾಜ್, ಜ್ಯೋತಿ ಅರುಣ್, ಸಾಹಿತಿಗಳಾದ ಜಲ ಕಾಳಪ್ಪ, ಲಾವಣ್ಯ ಮೋಹನ್, ಶಾಫಿ ಸಾದಿ, ಶ್ರೀಧರ್ ಹೂವಲ್ಲಿ, ಜಮೀರ್, ಗಿರೀಶ್ ಕಟ್ಟೆಮನೆ ಇತರರು ಇದ್ದರು.