ಬಾಂಗ್ಲಾದೇಶಿ ಅಕ್ರಮ ವಲಸಿಗರ ಗಡಿಪಾರಿಗಾಗಿ ವಿರಾಜಪೇಟೆಯಲ್ಲಿ ‘ಜನಜಾಗೃತಿ ಆಂದೋಲನ’ ಆಯೋಜಿಸಲಾಗಿತ್ತು. ಸುನಿತಾ, ಗಣೇಶ್ ಗೌಡ, ಸಜೀವ, ಸಚಿನ್ ಕುಟ್ಟಯ್ಯ, ರೀನಾ ಪ್ರಕಾಶ್, ಯತೀಶ್, ಪಿ.ಜಿ.ಸುಮೇಶ್, ಬಿ.ಎಂ.ಗಣೇಶ್ ಅಮ್ಮಣಿಚಂಡ ರಂಜು ಪೂಣಚ್ಚ, ಸತೀಶ್, ಉಣ್ಣಿ, ಕಿರಣ್ ಇದ್ದರು. 
ಕೊಡಗು

ವಿರಾಜಪೇಟೆಯಲ್ಲಿ ’ಜನಜಾಗೃತಿ ಆಂದೋಲನ’

ರಥಯಾತ್ರೆಗೆ ಅದ್ದೂರಿ ಸ್ವಾಗತ

ವಿರಾಜಪೇಟೆ : ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಸಂಪೂರ್ಣವಾಗಿ ಗುರುತಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ’ಕೊಡಗು ಸುರಕ್ಷಾ ಆಂದೋಲನ ಸಮಿತಿ’ ವತಿಯಿಂದ ಜಿಲ್ಲೆಯಾದ್ಯಂತ ಆಯೋಜಿಸಿರುವ ಜನಜಾಗೃತಿ ಆಂದೋಲನ ಹಾಗೂ ರಥಯಾತ್ರೆ ಬುಧವಾರ ವಿರಾಜಪೇಟೆಗೆ ಆಗಮಿಸಿತು.

ಜಾಗೃತ ಸಮಾಜ - ಸುರಕ್ಷಿತ ಭಾರತ ಎಂಬ ಪ್ರಮುಖ ಘೋಷವಾಕ್ಯದೊಂದಿಗೆ ಸೆ.28 ರಿಂದ ಅ.9 ರವರೆಗೆ ಕೊಡಗಿನಾದ್ಯಂತ ಈ ಅಭಿಯಾನ ನಡೆಯುತ್ತಿದ್ದು, ದಕ್ಷಿಣ ಕೊಡಗಿನ ಗಡಿಭಾಗವಾದ ಕುಟ್ಟದಲ್ಲಿ ಚಾಲನೆ ದೊರೆತ್ತಿದ್ದು, ಬುಧವಾರ ರಥಯಾತ್ರೆಯು ವಿರಾಜಪೇಟೆಗೆ ತಲುಪಿತು. ಪಟ್ಟಣದ ಪಂಜರಪೇಟೆಗೆ ಆಗಮಿಸಿದ ಯಾತ್ರೆ ಹಾಗೂ ಮುಖಂಡರಿಗೆ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಭವ್ಯ ಸ್ವಾಗತ ಕೋರಿದರು. ಬಳಿಕ ಪ್ರಮುಖ ಬೀದಿಗಳ ಮೂಲಕ ಸಾಗಿ ವಿರಾಜಪೇಟೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಬೃಹತ್ ಸಮಾವೇಶ ನಡೆಸಲಾಯಿತು.

ಸಮಾವೇಶದಲ್ಲಿ ಪ್ರಮುಖರಾದ ಪಳೆಯಂಡ ರಾಬಿನ್ ದೇವಯ್ಯ ಮಾತನಾಡಿ, ದೇಶದ ಆಂತರಿಕ ಸುರಕ್ಷತೆ, ಕೊಡಗಿನ ಭೂ-ಸ್ವರೂಪ ಹಾಗೂ ಸ್ಥಳೀಯರ ಹಿತಾಸಕ್ತಿಯನ್ನು ಉಳಿಸಲು ಎಲ್ಲ ಜನರೂ ಒಂದಾಗಬೇಕು ಎಂದು ಕರೆ ನೀಡಿದರು. ದೇಶದ ವಿವಿಧ ಗುಪ್ತಚರ ವರದಿಗಳ ಪ್ರಕಾರ ಸುಮಾರು 40 ಲಕ್ಷಕ್ಕೂ ಅಧಿಕ ಅಕ್ರಮ ಬಾಂಗ್ಲಾದೇಶಿಗಳು ಭಾರತದಲ್ಲಿ ನೆಲೆಸಿದ್ದಾರೆ. ಇವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖಂಡ ಚಂದ್ರ ಉಡೋತ್ ಮಾತನಾಡಿದರು. ಈ ಸಂದರ್ಭ ಸುನಿತಾ, ಗಣೇಶ್‌ಗೌಡ, ಸಜೀವ, ಸಚಿನ್ ಕುಟ್ಟಯ್ಯ, ರೀನಾ ಪ್ರಕಾಶ್, ಯತೀಶ್, ಪಿ.ಜಿ.ಸುಮೇಶ್, ಬಿ.ಎಂ.ಗಣೇಶ್, ಅಮ್ಮಣಿಚಂಡ ರಂಜು ಪೂಣಚ್ಚ, ಸತೀಶ್, ಉಣ್ಣಿ, ಕಿರಣ್ ಇತರರು ಪಾಲ್ಗೊಂಡಿದ್ದರು. ಸಮಾವೇಶದ ಬಳಿಕ ರಥಾಯಾತ್ರೆ ಕಾಕೋಟುಪರಂಬುವಿಗೆ ತೆರಳಿತು.