ಮಡಿಕೇರಿ
ಪ್ರಧಾನಿ ನರೇಂದ್ರ ಮೋದಿಯವರ 2047ರ ವಿಕಸಿತ ಭಾರತ ಕನಸಿಗೆ ಪೂರಕವಾಗಿ ದೇಶದಲ್ಲಿ ಒಟ್ಟಾರೆಯಾಗಿ 7 ಲಕ್ಷ ಟನ್ ಕಾಫಿ ಬೆಳೆಯುವ ಗುರಿ ಇಟ್ಟುಕೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಭಾರತೀಯ ಕಾಫಿ ಮಂಡಳಿ ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಮಂಡಳಿ ಅಧ್ಯಕ್ಷ ಎಂ.ಜಿ. ದಿನೇಶ್ ತಿಳಿಸಿದರು. ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ಕೂರ್ಗ್ ಕಾಫಿ ಪ್ಲಾಂಟರ್ಸ್ ಅಸೋಸಿಯೇಷನ್ ಸಹಯೋಗದೊಂದಿಗೆ ಬುಧವಾರ ಆಯೋಜಿಸಲಾಗಿದ್ದ 3ನೇ ವರ್ಷದ ಕಾಫಿ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಫಿಗೆ ಈಗ ಉತ್ತಮ ದರ ಇದೆ. ಇದೇ ದರ ಮುಂದೆಯೂ ಇರುತ್ತದೆ ಎಂದು ಭಾವಿಸಬಾರದು. ಹಾಗಾಗಿ ಕಾಫಿಯ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಿಸುವ ಕಡೆಗೆ ಪ್ರಯತ್ನಿಸಬೇಕು. ಕಾಫಿ ಗಿಡ ನಾಟಿ ಸಂದರ್ಭ ತಪ್ಪುಗಳಾಗುತ್ತಿದೆ. ಇದು ತಪ್ಪಬೇಕಾದರೆ ಕಾಫಿ ಮಂಡಳಿ ಅನುಮೋದಿತ ತಳಿಯ ಗಿಡಗಳನ್ನೇ ನಾಟಿ ಮಾಡಬೇಕು. ಕಾಫಿಗೆ ಸಂಬAಧಿಸಿದ ತಂತ್ರಜ್ಞಾನಗಳನ್ನು ಬೆಳೆಗಾರರು ಪರಸ್ಪರ ಹಂಚಿಕೊಳ್ಳಬೇಕು. ಕೋಳಿ ಮೊಟ್ಟೆ ಉತ್ಪಾದಕರ ಸಂಘ ಕೋಳಿ ಮೊಟ್ಟೆಯ ಆಂತರಿಕ ಬಳಕೆ ಹೆಚ್ಚಿಸಲು ತೆಗೆದುಕೊಂಡಿರುವ ಕ್ರಮಗಳನ್ನು ಮಾದರಿಯಾಗಿ ಇಟ್ಟುಕೊಂಡು ಕಾಫಿ ಆಂತರಿಕ ಬಳಕೆ ಹೆಚ್ಚಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಸದ್ಯ ಕಾಫಿಯ ಆಂತರಿಕ ಬಳಕೆ ದೇಶದಲ್ಲಿ ಒಬ್ಬ ವ್ಯಕ್ತಿ ವರ್ಷಕ್ಕೆ 70 ಗ್ರಾಂ ಮಾತ್ರ ಇದ್ದು, ಇದನ್ನು 2047ರ ಹೊತ್ತಿಗೆ 150 ಗ್ರಾಂ ಹಾಗೂ ನಂತರ 200 ಗ್ರಾಂಗೆ ಹೆಚ್ಚಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಶೇ. 15ರಷ್ಟು ಸ್ಪೆಷಾಲಿಟಿ ಕಾಫಿ ಉತ್ಪಾದನೆಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಈ ಪ್ರಯತ್ನಕ್ಕೆ ಬೆಳೆಗಾರರೂ ಸಹಕಾರ ಕೊಡಬೇಕು. ಕಾಫಿಯನ್ನು ಬೆಳೆ ವಿಮೆ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಒಪ್ಪಿದೆ. ರಾಜ್ಯ ಸರ್ಕಾರವೂ ಒಪ್ಪಬೇಕಿದೆ ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಬೇಕು.
ಬೆಳೆಗಾರರು ಹಳೆಯ ಕೃಷಿ ಪದ್ಧತಿಗಳನ್ನು ಕೈಬಿಟ್ಟು, ನರ್ಸರಿ ಅಕ್ರೆಡಿಟೇಷನ್, ಟಿಶ್ಯೂ ಕಲ್ಚರ್ ಮತ್ತು ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ಪಾದಕತೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳಬೇಕು. ಕೊಡಗು ಎಂದರೆ ಯೋಧರು, ಜೇನು, ಕಾಫಿ ಮತ್ತು ಕ್ರೀಡೆಗಳಿಗೆ ಹೆಸರುವಾಸಿಯಾಗಿದೆ. ಈ ವಿಶೇಷತೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದು, ಮುಂದಿನ ಪೀಳಿಗೆಗೆ ಸ್ಫ್ಪೂರ್ತಿದಾಯಕವಾಗುವಂತೆ ಕಾಫಿ ಉದ್ಯಮವನ್ನು ಬೆಳೆಸಲಾಗುವುದು. ದೇಶದ ಹೆಮ್ಮೆಯ ಕೊಡಗಿನ ಕಾಫಿಗೆ ಜಾಗತಿಕ ಮಟ್ಟದಲ್ಲಿ ಬೃಹತ್ ಬ್ರ್ಯಾಂಡ್ ತರಲು ಹಾಗೂ ಭವಿಷ್ಯದಲ್ಲಿ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಲು ಸಮಗ್ರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಕೊಡಗು ಕಾಫಿಗೆ ಬ್ರಾಂಡ್ ಆಗಿದೆ. ಇದನ್ನು ಕಳೆದುಕೊಳ್ಳಬಾರದು. ಮತ್ತೆ ಪಡೆದುಕೊಳ್ಳುವುದು ಕಷ್ಟ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಫಿ ಬೆಳೆಗಾರರು, ಸ್ವಸಹಾಯ ಗುಂಪುಗಳ ಮಹಿಳೆಯರು ಪಾಲ್ಗೊಂಡು ಕಾಫಿಗೆ ಸಂಬAಧಿಸಿದ ಮಾಹಿತಿಗಳನ್ನು ಪಡೆದುಕೊಂಡರು.