ಮಡಿಕೇರಿ
ಮಡಿಕೇರಿ ಮತ್ತು ಗೋಣಿಕೊಪ್ಪಲು ದಸರಾ ಶೋಭಾಯಾತ್ರೆ ಸಂದರ್ಭ ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಕೊಡಗು ಎಸ್.ಪಿ. ಆರ್.ಎನ್. ಬಿಂದುಮಣಿ ತಿಳಿಸಿದ್ದಾರೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶಗಳಂತೆ ನಿಗದಿಪಡಿಸಿದ ಡೆಸಿಬಲ್ ಮಿತಿ ಹಾಗೂ ಸಮಯದ ಗಡಿಯನ್ನು ಮೀರಿದರೆ ಅಥವಾ ನಿಯಮ ಉಲ್ಲಂಘಿಸಿದರೆ ಕಾನೂನುಬದ್ಧವಾಗಿ ಪ್ರಕರಣ ದಾಖಲಿಸಲಾಗುವುದು. ದಸರಾ ಸಮಿತಿ ಹಾಗೂ ದಶಮಂಟಪಗಳ ಆಯೋಜಕರಿಂದ ಈ ಬಗ್ಗೆ ಈಗಾಗಲೇ ಮುಚ್ಚಳಿಕೆ ಪಡೆಯಲಾಗಿದೆ ಎಂದು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಮಡಿಕೇರಿ ಮತ್ತು ಗೋಣಿಕೊಪ್ಪಲು ದಸರಾವನ್ನು ಅತ್ಯಂತ ಯಶಸ್ವಿಯಾಗಿ ಮತ್ತು ಶಾಂತಿ-ಸುವ್ಯವಸ್ಥೆಯಿAದ ಆಚರಿಸಲು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮಡಿಕೇರಿ ದಸರಾ ಹಿನ್ನೆಲೆಯಲ್ಲಿ 1,451 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಲಾಗಿದೆ. ಕೆಎಸ್ಆರ್ಪಿ, ಡಿಆರ್ ತುಕಡಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಮಹಿಳಾ ಮತ್ತು ಮಕ್ಕಳ ಸುರಕ್ಷತಾ ದಳಗಳನ್ನು ಕಣ್ಗಾವಲಿಗಾಗಿ ಸಜ್ಜುಗೊಳಿಸಲಾಗಿದೆ. ಒಟ್ಟು 150 ಹೋಮ್ ಗಾರ್ಡ್ಗಳ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ.
ದಸರಾ ಪ್ರಮುಖ ಆಕರ್ಷಣೆಯಾದ ದಶಮಂಟಪಗಳ ಪ್ರದರ್ಶನ ನಿರ್ದಿಷ್ಟ ಮಾರ್ಗಗಳಲ್ಲಿ ನಡೆಯಲಿದ್ದು, ಎಲ್ಲ ಸಂಘಟಕರು ಹಾಗೂ ಸಮಿತಿಯ ಪದಾಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಗಳನ್ನು ನಡೆಸಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ದಶಮಂಟಪಗಳ ಪ್ರದರ್ಶನದ ವೇಳೆ ಮಂಟಪಗಳ ಸ್ಥಿರತೆ ಕಾಪಾಡುವಂತೆ ಪಿಡಬ್ಲ್ಯೂಡಿ ಮತ್ತು ಆರ್ಟಿಒ ಕಡೆಯಿಂದ ಪ್ರಮಾಣಪತ್ರ ಪಡೆದುಕೊಳ್ಳಲಾಗಿದೆ. ಮಡಿಕೇರಿ ಹಾಗೂ ಗೋಣಿಕೊಪ್ಪಲು ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ವಿಧ್ವಂಸಕ ಕೃತ್ಯ ತಡೆ ತಪಾಸಣೆ ಮಾಡಲಾಗುತ್ತದೆ.
ಮುಖವಾಡಗಳ ಬಳಕೆ ಹಾಗೂ ಸಾರ್ವಜನಿಕರಿಗೆ ಕಿರಿಕಿರಿಯುಂಟು ಮಾಡುವ ಪೀಪೀಗಳ ಮೇಲೆ ಕಟ್ಟುನಿಟ್ಟಿನ ನಿಷೇಧವಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದAತೆ ಗಾಂಧಿ ಮೈದಾನ, ಜಿ.ಟಿ. ಸರ್ಕಲ್, ಎಂ.ಎA. ಸರ್ಕಲ್ ಮತ್ತು ಪೊಲೀಸ್ ಸ್ಟೇಷನ್ ಸೇರಿದಂತೆ ನಾಲ್ಕು ಪ್ರಮುಖ ಕಡೆಗಳಲ್ಲಿ ಸಹಾಯ ಕೇಂದ್ರಗಳನ್ನು ಹಾಗೂ ತುರ್ತು ಚಿಕಿತ್ಸೆಗಾಗಿ ಕ್ಲಿನಿಕಲ್ ಡೆಸ್ಕ್ಗಳನ್ನು ತೆರೆಯಲಾಗುವುದು. ನಿರಂತರ ಮೇಲ್ವಿಚಾರಣೆಗಾಗಿ ಹೆಚ್ಚುವರಿಯಾಗಿ 67 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಮೈಸೂರು ಮತ್ತು ಮಂಗಳೂರು ಕಡೆಯಿಂದ ಬರುವ ಭಾರೀ ವಾಹನಗಳಿಗೆ ಹಾಗೂ ಪ್ರವಾಸಿ ವಾಹನಗಳಿಗೆ ಪಟ್ಟಣದ ಹೊರವಲಯದಲ್ಲೇ ಸಂಚಾರ ವ್ಯತ್ಯಯವಾಗದಂತೆ ಬೈಪಾಸ್ ಹಾಗೂ ಡೈವರ್ಶನ್ ಮಾರ್ಗಗಳನ್ನು ಕಲ್ಪಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಗೂಗಲ್ ಮ್ಯಾಪ್ಸ್ ಜತೆಗೂಡಿ ದಸರಾ ದಿನಗಳಲ್ಲಿ ಡೈವರ್ಶನ್ ಮಾರ್ಗಗಳ ಬಗ್ಗೆ ಮಾಹಿತಿ ನೀಡಲು ವ್ಯವಸ್ಥೆ ಮಾಡಲಾಗಿದೆ. ವಾಹನ ನಿಲುಗಡೆಗಾಗಿ ನಗರದ ವಿವಿಧ ಪ್ರದೇಶಗಳಲ್ಲಿ ಒಟ್ಟು 16 ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ತುರ್ತು ಪರಿಸ್ಥಿತಿಗಳನ್ನು ಎದುರಿಸಲು ವೈವಸ್ ಆಸ್ಪತ್ರೆ, ಸಂಜೀವಿನಿ ಆಸ್ಪತ್ರೆ ಹಾಗೂ ಕೊಡಗು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸೇರಿದಂತೆ ಮೂರು ಪ್ರಮುಖ ಆಸ್ಪತ್ರೆಗಳನ್ನು ಹಾಗೂ ವಿಶೇಷ ಆಂಬುಲೆನ್ಸ್ ಮಾರ್ಗಗಳನ್ನು ಸಿದ್ಧಪಡಿಸಲಾಗಿದೆ.
ಗೋಣಿಕೊಪ್ಪಲು ದಸರಾಕ್ಕೆ 610 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಲಾಗಿದೆ. ಇದರೊಂದಿಗೆ ಕೆಎಸ್ಆರ್ಪಿ, ಡಿಆರ್ ತುಕಡಿಗಳನ್ನು ನಿಯೋಜಿಸಲಾಗಿದ್ದು, 100 ಗೃಹರಕ್ಷಕ ದಳ ಸಿಬ್ಬಂದಿಯನ್ನೂ ಬಂದೋಬಸ್ತ್ಗಾಗಿ ಬಳಸಿಕೊಳ್ಳಲಾಗುತ್ತಿದೆ. ಉತ್ಸವದ ವೇಳೆ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆದ್ದು, ವಿಶೇಷ ಮಹಿಳಾ ತಂಡಗಳನ್ನು ರಚಿಸಲಾಗಿದೆ. ಭದ್ರತೆ ಮತ್ತು ಕಣ್ಗಾವಲಿಗಾಗಿ ಹೆಚ್ಚುವರಿಯಾಗಿ 15 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರ ಸಂಚಾರ ದಟ್ಟಣೆ ಹಾಗೂ ಚಲನವಲನದ ಮೇಲೆ ನಿಗಾ ಇಡಲು 7 ಚೀತಾ ಪೆಟ್ರೋಲಿಂಗ್ ಬೈಕ್ಗಳನ್ನು ನಿಯೋಜಿಸಲಾಗಿದೆ.
ದಸರಾ ಸಂದರ್ಭದಲ್ಲಿ ಸಂಚಾರ ದಟ್ಟಣೆ ತಡೆಯಲು ಜಿಲ್ಲಾಧಿಕಾರಿಗಳ ಆದೇಶದಂತೆ ಪ್ರಮುಖ ಮಾರ್ಗ ಬದಲಾವಣೆಗಳನ್ನು ಮಾಡಲಾಗಿದೆ. ಗೋಣಿಕೊಪ್ಪಲಿನಲ್ಲಿ 4 ಪ್ರಮುಖ ಸ್ಥಳಗಳಲ್ಲಿ ನೋ-ವೆಹಿಕಲ್ ಝೋನ್, ಚೆಕ್ಪೋಸ್ಟ್ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಆರ್ಎಂಸಿ ಆವರಣ, ಬಸ್ ನಿಲ್ದಾಣ ಹಾಗೂ ದೇವಸ್ಥಾನದ ಸಮೀಪ ಭದ್ರತಾ ದೃಷ್ಟಿಯಿಂದ ವಾಚ್ ಟವರ್ಗಳನ್ನು ನಿರ್ಮಿಸಲಾಗಿದೆ. ತುರ್ತು ವೈದ್ಯಕೀಯ ಪರಿಸ್ಥಿತಿಗಾಗಿ ಬಸ್ ನಿಲ್ದಾಣದಿಂದ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ತಕ್ಷಣವೇ ತಲುಪಲು ಆಂಬುಲೆನ್ಸ್ ಹಾಗೂ ಇವಾಕ್ಯುವೇಶನ್ ಮಾರ್ಗವನ್ನು ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.