ಕುಶಾಲನಗರ
ಸಂಪೂರ್ಣ ದಿವಾಳಿ ಆಗಿರುವ ರಾಜ್ಯ ಸರ್ಕಾರ ಪೊಳ್ಳು ಭರವಸೆಗಳನ್ನು ಘೋಷಿಸುತ್ತಾ ಜನರನ್ನು ವಂಚಿಸುತ್ತಿದೆ ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಆರೋಪಿಸಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತ ವೈಫಲ್ಯದಿಂದ ಸಂಪೂರ್ಣವಾಗಿ ದಿವಾಳಿಯಾಗಿದ್ದು, ಬಜೆಟ್‌ನಲ್ಲಿ 24 ಸಾವಿರ ಕೋಟಿ ರೂಪಾಯಿ ಕೊರತೆ ಇದ್ದರೂ ಜನರಿಗೆ ಪೊಳ್ಳು ಘೋಷಣೆಗಳನ್ನು ಮಾಡುತ್ತಿದೆ. ಭ್ರಷ್ಟಾಚಾರದಲ್ಲಿ ಭಾಗಿಯಾದವರನ್ನು ಸಚಿವರನ್ನಾಗಿ ಮಾಡಿ, ನಂತರ ಅವರಿಂದ ರಾಜೀನಾಮೆ ಪಡೆಯುವಂತಹ ಪರಿಸ್ಥಿತಿ ತಂದಿಟ್ಟಿರುವುದೇ ಈ ಸರ್ಕಾರದ ಸಾಧನೆ. ಸಚಿವ ಪ್ರಿಯಾಂಕ್ ಖರ್ಗೆ ಸಿದ್ದಾಂತ ಎಜುಕೇಶನ್ ಟ್ರಸ್ಟ್ ಹೆಸರಿನಲ್ಲಿ ಬೋಗಸ್ ದಾಖಲೆಗಳನ್ನು ಸೃಷ್ಟಿಸಿ 11 ಎಕರೆ ಜಾಗ ಪಡೆದುಕೊಂಡಿದ್ದಾರೆ. ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಿಡಬೇಕಾದ ಶೇ.18ರಷ್ಟು ಬಜೆಟ್ ಹಣವನ್ನು ಸಮರ್ಪಕವಾಗಿ ಬಳಸದೆ ಆ ಜನಾಂಗಕ್ಕೆ ದ್ರೋಹ ಎಸಗಲಾಗಿದೆ. ಮುಖ್ಯಮಂತ್ರಿಗಳು ದೇಶದಲ್ಲೇ ಅತ್ಯಂತ ಶ್ರೀಮಂತ ಸಿಎಂ ಆಗಿದ್ದಾರೆ. ಅವರು ಮನಸ್ಸು ಮಾಡಿದರೆ ತಮ್ಮ ಸ್ವಂತ ಹಣದಿಂದಲಾದರೂ ಈ ರಾಜ್ಯವನ್ನು ಉದ್ಧಾರ ಮಾಡಬಹುದು. ರೈತರ ಸಾಲಮನ್ನಾ ಮಾಡಿ ಪುಣ್ಯ ಕಟ್ಟಿಕೊಳ್ಳಲಿ ಎಂದರು.
ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಮಾತನಾಡಿ, ಕಸ್ತೂರಿ ರಂಗನ್ ವರದಿಯನ್ನು ಎಲ್ಲಾ ಪಕ್ಷಗಳು ಒಮ್ಮತದಿಂದ ವಿರೋಧಿಸಿ ತಿರಸ್ಕರಿಸಿವೆ. ಕೇಂದ್ರ ಸರ್ಕಾರ ರಚಿಸುವ ಸಮಿತಿಯಲ್ಲಿ ಅಧಿಕಾರಿಗಳ ಜೊತೆಗೆ ರೈತರನ್ನೂ ಸೇರಿಸಬೇಕು. ಜನವಸತಿ ಪ್ರದೇಶದ ಕೊಡಗಿನ 53 ಗ್ರಾಮಗಳನ್ನು ವರದಿಯಿಂದ ಕೈಬಿಡಬೇಕು ಹಾಗೂ ಇಎಸ್‌ಝಡ್ ಮತ್ತು ನ್ಯಾಚುರಲ್ ಫಾರೆಸ್ಟ್ ವ್ಯಾಪ್ತಿಯನ್ನು ಝೀರೋಗೆ ತರಬೇಕು. ಅರಣ್ಯ ಸಚಿವರಾಗಿದ್ದ ಈಶ್ವರ್ ಖಂಡ್ರೆ ಸಿ ಮತ್ತು ಡಿ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿ ಆದೇಶಿಸಿದ್ದರು. ಇದರಿಂದ ಶಾಂತಳ್ಳಿ, ಬೆಟ್ಟದಳ್ಳಿ, ತೊರೆನೂರು, ಶೆಟ್ಟಳ್ಳಿ, ಸೂರ್ಲಬ್ಬಿ ಸೇರಿದಂತೆ 15 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ತೀವ್ರ ಅನ್ಯಾಯವಾಗಿದೆ. 50-100 ವರ್ಷಗಳಿಂದ ವಾಸವಿರುವ ಬಡವರಿಗೆ 10 ಗುಂಟೆ ಜಮೀನು ನೀಡಲು ಈ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ಅರುಣ್ ಕುಮಾರ್, ಮಂಡಲ ಬಿಜೆಪಿ ಅಧ್ಯಕ್ಷ ಎಂ.ಎಲ್. ಗೌತಮ್, ಮಾಜಿ ಎಂಎಲ್‌ಸಿ ಎಸ್.ಜಿ. ಮೇದಪ್ಪ, ಪ್ರಮುಖರಾದ ಎಂ.ಡಿ. ಕೃಷ್ಣಪ್ಪ, ಚಿಲ್ಲನ ಗಣಿಪ್ರಸಾದ್, ಮಧು, ಭಾಸ್ಕರ್ ನಾಯಕ್ ಮತ್ತಿತರರು ಇದ್ದರು.
ಕುಶಾಲನಗರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಒತ್ತಾಯಿಸಿ ಸೋಮವಾರಪೇಟೆ ಮಂಡಲ ಬಿಜೆಪಿ ವತಿಯಿಂದ ಗುರುವಾರ ಕುಶಾಲನಗರ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆದರೆ ಬುಧವಾರ ರಾತ್ರಿ ಕುಶಾಲನಗರ ಮತ್ತು ಮಡಿಕೇರಿ ತಾಲೂಕನ್ನು ಬರಪೀಡಿತ ಎಂದು ಸರ್ಕಾರ ಪ್ರಕಟಿಸುತ್ತಿದ್ದಂತೆಯೇ ಪ್ರತಿಭಟನೆಯ ಉದ್ದೇಶವನ್ನು ಬದಲಿಸಿದ ಬಿಜೆಪಿ ಸರ್ಕಾರದ ವೈಫಲ್ಯಗಳ ವಿರುದ್ಧ ಪ್ರತಿಭಟನೆ ನಡೆಸಿತು. ಪ್ರತಿಭಟನೆ ನಂತರ ಎಂ.ಪಿ. ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಕುಶಾಲನಗರ ಪುರಸಭೆಗೆ ದಿಢೀರ್ ಭೇಟಿ ನೀಡಿದ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಭಾನುವಾರ (ಸೆ.27) ನಡೆಯಲಿರುವ ನಾಗರಿಕ ಸನ್ಮಾನ ಕಾರ್ಯಕ್ರಮವೊಂದರ ಫ್ಲೆಕ್ಸ್ಗಳನ್ನು ಅನುಮತಿಯಿಲ್ಲದೆ ನಗರದಾದ್ಯಂತ ಎಲ್ಲೆಂದರಲ್ಲಿ ಅಳವಡಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಎಚ್ಚೆತ್ತುಕೊಂಡ ಪುರಸಭೆ ಆಧಿಕಾರಿಗಳು ಕೆಲವು ಫ್ಲೆಕ್ಸ್ಗಳನ್ನು ತೆರವು ಮಾಡಿದರು.