ಮಡಿಕೇರಿ
ಈಗಾಗಲೇ ಟೆಂಡರ್ ಆಗಿ, ಭೂಮಿಪೂಜೆ ನೆರವೇರಿಸಿದ್ದರೂ ನೆನೆಗುದಿಗೆ ಬಿದ್ದಿರುವ ರಾಜಾಸೀಟ್ ರಸ್ತೆ ಕಾಮಗಾರಿಯನ್ನು ಭಾನುವಾರದಿಂದಲೇ(ಅ. 25) ಆರಂಭಿಸದಿದ್ದರೆ ನಗರಸಭೆ ಅಧಿಕಾರಿಗಳ ವಿರುದ್ಧ ಸದನದಲ್ಲಿ ಹಕ್ಕುಚ್ಯತಿ ಮಂಡಿಸಲಾಗುವುದು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಎಚ್ಚರಿಕೆ ನೀಡಿದರು. ಮಡಿಕೇರಿ ನಗರಸಭೆ ಅಧ್ಯಕ್ಷೆ ಪಿ. ಕಲಾವತಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ನಗರಸಭೆ ಕೌನ್ಸಿಲ್ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸಾಮಾನ್ಯ ಮತ್ತು ವಿಶೇಷ ಕೌನ್ಸಿಲ್ ಸಭೆಗಳಲ್ಲಿ ಚರ್ಚಿಸಿ ತೆಗೆದುಕೊಂಡ ಯಾವುದೇ ನಿರ್ಣಯಗಳು ಕಾರ್ಯರೂಪಕ್ಕೆ ಬಾರದಿರುವ ಬಗ್ಗೆ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಗಾಂಧಿ ಮೈದಾನದ ರಂಗ ಮೈದಾನವನ್ನು ಕೂಡಲೇ ಕೆಡವಿ, ಹೊಸ ರಂಗಮAಟಪದ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಶೀಘ್ರ ಆರಂಭಿಸಬೇಕು. ಕಾವೇರಿ ಕಲಾಮಂದಿರದ ಅವಶೇಷಗಳನ್ನು ತಕ್ಷಣ ತೆರವುಗೊಳಿಸಿ ಕಾಮಗಾರಿಯನ್ನು ಚುರುಕುಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮುಂದಿನ ದಸರಾ ಮಹೋತ್ಸವದ ಕಾರ್ಯಕ್ರಮಗಳು ಹೊಸ ರಂಗಮAಟಪದಲ್ಲೇ ನಡೆಯುವಂತಾಗಬೇಕು ಎಂದು ಕಾಂಗ್ರೆಸ್ ಸದಸ್ಯ ಬಿ.ವೈ. ರಾಜೇಶ್ ಧ್ವನಿಗೂಡಿಸಿದರು.
ಮುಂದುವರಿದು ಮಾತನಾಡಿದ ಶಾಸಕ ಮಂತರ್ ಗೌಡ, ಕೊಡಗಿನಲ್ಲಿ ಒಣ ತ್ಯಾಜ್ಯ ವಿಲೇವಾರಿ ಪದ್ಧತಿ ಇನ್ನೂ ಸಮರ್ಪಕವಾಗಿಲ್ಲ. ಈ ಸಂಬAಧ ಯಾವುದೇ ಹೊಸ ವ್ಯವಸ್ಥೆ ಜಾರಿಗೆ ತರುವ ಮೊದಲು ಸ್ಥಳೀಯರ ವಿಶ್ವಾಸ ಗಳಿಸಬೇಕು. ಆದಾಯಕ್ಕಿಂತ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹಸಿಕಸ ವಿಲೇವಾರಿಗೆ ಬೆಂಗಳೂರಿನ ಕೋರಮಂಗಲ ಮಾದರಿ ಮಡಿಕೇರಿಗೆ ಸೂಕ್ತವಾಗಿದ್ದು, ನಗರದಲ್ಲಿ ಹಾಲಿ ಉತ್ಪಾದನೆಗಿಂತ 2 ಪಟ್ಟು ಹೆಚ್ಚು ಕಸ ವಿಲೇವಾರಿ ಮಾಡುವಂತೆ ಯೋಜನೆಯ ವಿನ್ಯಾಸವಿರಬೇಕು.
ಬೂಸ್ಟರ್ ಪಂಪ್ ಹೌಸ್ ಬಳಿ ಮೆಟೀರಿಯಲ್ ರಿಕವರಿ ಫೆಸಿಲಿಟಿ (ಎಂಆರ್ಎಫ್) ಪ್ಲಾಂಟ್ ಮಾಡಲು ಮೂರು ಸಭೆಗಳಲ್ಲಿ ನಿರ್ಣಯ ಕೈಗೊಂಡರೂ ಕೆಲಸ ಆರಂಭವಾಗಿಲ್ಲ. ಹಸಿ ಕಸವನ್ನು ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ತೋಟಗಳಲ್ಲಿ ಗೊಬ್ಬರ ತಯಾರಿಸುವ ಯೋಜನೆಯನ್ನು ಪ್ರಾಯೋಗಿಕವಾಗಿ ಒಂದು ವರ್ಷದ ಮಟ್ಟಿಗೆ ಬಳಸಿಕೊಳ್ಳಬಹುದು. ನಂತರ ಹಸಿ ಕಸದಿಂದ ಗ್ಯಾಸ್ ಉತ್ಪಾದನೆಯ ಯೋಜನೆ ಅನುಷ್ಠಾನದತ್ತ ಗಮನ ಹರಿಸಬೇಕು. ಮನೆ ಮತ್ತು ಹೋಟೆಲ್ಗಳಿಗೆ ಈ ಗ್ಯಾಸ್ ಬಳಸಬಹುದಾಗಿದೆ.
ಸ್ಟೋನ್ಹಿಲ್ನಲ್ಲಿ ಇನ್ನು ಮುಂದೆ ಕಸ ಹಾಕಬಾರದು ಹಾಗೂ ಪಾರಂಪರಿಕ ತ್ಯಾಜ್ಯ ಖಾಲಿ ಮಾಡಲು ಡಿಪಿಆರ್ ಸಿದ್ಧಪಡಿಸಬೇಕು. ಕಸವಿಲೇವಾರಿ ಸಮಸ್ಯೆ ಪರಿಹಾರದ ಬಗ್ಗೆ 3 ವರ್ಷ ಹಿಂದೆಯೇ ಯೋಚಿಸಬೇಕಿತ್ತು. ಬೂಸ್ಟರ್ ಪಂಪ್ ಹೌಸ್ ಒಣಕಸ ವಿಲೇವಾರಿ ಕೇಂದ್ರಕ್ಕ ಸೋಮವಾರವೇ (ಅ.26) ಗುದ್ದಲಿ ಪೂಜೆ ನೆರವೇರಿಸಬೇಕು ಎಂದು ತಾಕೀತು ಮಾಡಿದರು.
ಪೌರಾಯುಕ್ತ ಎಚ್.ಆರ್. ರಮೇಶ್ ಮಾಹಿತಿ ನೀಡಿ, ಮಡಿಕೇರಿಯಲ್ಲಿ ತಿಂಗಳಿಗೆ 450 ಟನ್ ಅಂದರೆ ದಿನಕ್ಕೆ 15 ಟನ್ ಕಸ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ 5 ಟನ್ ಒಣಕಸ ಸೇರಿದೆ. ಎಂಆರ್ಎಫ್ ಶೆಡ್ ನಿರ್ಮಾಣಕ್ಕೆ ಜಾಗದ ಕೊರತೆ ಇದೆ ಎಂದರು.
ಎಂಜಿನಿಯರ್ ಸತೀಶ್ ಮಾತನಾಡಿ, ಬೂಸ್ಟರ್ ಪಂಪ್ ಹೌಸ್ ಬಳಿ ಜಾಗದ ಪಕ್ಕದಲ್ಲಿ ತೋಡು ಹೋಗುವುದರಿಂದ ಮಳೆಗಾಲದಲ್ಲಿ ನೀರು ನುಗ್ಗುವ ಸಮಸ್ಯೆಯಿದೆ. ಸ್ಟೋನ್ ಹಿಲ್ನಲ್ಲಿ 5 ಸಾವಿರ ಮೆಟ್ರಿಕ್ ಟನ್ ಕಸವಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಮಾತನಾಡಿದ ಬಿಜೆಪಿಯ ಕೆ.ಎಸ್. ರಮೇಶ್ ಖಾಸಗಿ ಬಸ್ ನಿಲ್ದಾಣದ ಬಳಿ ಹಸಿ ಕಸ ಹಾಗೂ ಬೂಸ್ಟರ್ ಪಂಪ್ ಹೌಸ್ ಬಳಿ ಒಣ ಕಸ ವಿಲೇವಾರಿ ಕೇಂದ್ರ ಮಾಡುವುದು ಸೂಕ್ತ. ಈ ವಿಷಯದಲ್ಲಿ ಚರ್ಚೆ ಮುಂದುವರಿದರೆ ಪ್ರಯೋಜನ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟರೆ, ಎಸ್ಡಿಪಿಐ ಸದಸ್ಯ ಅಮೀನ್ ಮೊಹಿಸಿನ್, ತ್ಯಾಜ್ಯ ವಿಲೇವಾರಿ ಘಟಕದಿಂದ ಬರುವ ಉತ್ಪನ್ನಗಳು ಜನರ ಬಳಕೆಗೆ ಸಿಗುವುದರಿಂದ ಇಂಥ ಘಟಕ ನಗರದ ಒಳಗೆ ಇದ್ದರೆ ಒಳಿತು ಎಂದರು.
ತ್ಯಾಜ್ಯ ವಿಲೇವಾರಿ ಬಗ್ಗೆ ಮಾಹಿತಿ ನೀಡಲು ಆಗಮಿಸಿದ್ದ ಖಾಸಗಿ ಸಂಸ್ಥೆಯೊAದರ ಮುಖ್ಯಸ್ಥ ಪ್ರಶಾಂತ್ ಮಾತನಾಡಿ, ಕಂಪ್ರೆಸ್ಟ್ ಬಯೋ ಗ್ಯಾಸ್ (ಸಿಬಿಜಿ) ಮತ್ತು ಕಾಂಪೋಸ್ಟ್ ಪಡೆದುಕೊಳ್ಳುವ ರೀತಿಯಲ್ಲಿ ನಮ್ಮ ಸಂಸ್ಥೆಯಿAದ ತ್ಯಾಜ್ಯ ವಿಲೇವಾರಿ ಮಾಡಲಾಗುವುದು. ಇದರಿಂದ ವಾಸನೆಯ ಸಮಸ್ಯೆ ಇರುವುದಿಲ್ಲ. ಇದಕ್ಕೆ 2-3 ಸಿಬ್ಬಂದಿ ಸಾಕು ಮತ್ತು ಉತ್ಪತ್ತಿಯಾಗುವ ಗ್ಯಾಸ್ ಅನ್ನು ವಾಹನಗಳ ಬಳಕೆಗೆ ಉಪಯೋಗಿಸಬಹುದು. ಇದಕ್ಕೆ ಕನಿಷ್ಠ ಅರ್ಧದಿಂದ ಒಂದು ಎಕರೆ ಜಾಗ ಸಾಕಾಗುತ್ತದೆ. ಈಗಾಗಲೇ ಈ ರೀತಿಯ ಘಟಕ ಪುತ್ತೂರಿನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು. ಇನ್ನೂ 2 ಸಂಸ್ಥೆಗಳ ಪ್ರತಿನಿಧಿಗಳು ಹಸಿ ಕಸ ವಿಲೇವಾರಿ ತಂತ್ರಜ್ಞಾನಗಳ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ, ಸ್ಥಾಯಿ ಸಮಿತಿ ಅಧಿಕಾರಿಗಳು ಹಾಗೂ ಎಲ್ಲಾ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.
ನಗರಸಭೆಗೆ ಆದಾಯ ಬರುವ ಯೋಜನೆಗಳಿಗಿಂತ ಕಸವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಯೋಜನೆಗಳು ಮಡಿಕೇರಿಗೆ ಈಗಿನ ತುರ್ತು ಅಗತ್ಯವಾಗಿದೆ. ಹಾಗೆಂದು ತರಾತುರಿಯಲ್ಲಿ ಯೋಜನೆಗಳನ್ನು ರೂಪಿಸಬಾರದು. ಭವಿಷ್ಯದ ದೃಷ್ಟಿಕೋನ ಇಟ್ಟುಕೊಂಡು ಯೋಜನೆಗಳನ್ನು ಜಾರಿಗೆ ತರಬೇಕಾಗುತ್ತದೆ. ಮುಂದೆ ಅಧಿಕಾರಕ್ಕೆ ಬರುವ ಆಡಳಿತ ಮಂಡಳಿಗಳು ಈಗಿನ ಆಡಳಿತ ಮಂಡಳಿ ಸದಸ್ಯರನ್ನು ದೂಷಿಸದ ರೀತಿಯಲ್ಲಿ ಜನೋಪಯೋಗಿ ಕಾರ್ಯಕ್ರಮಗಳು ಬರಬೇಕು.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ
ಮಡಿಕೇರಿ ನಗರದ ತ್ಯಾಜ್ಯ ವಿಲೇವಾರಿಗೆ ಸ್ಟೋನ್ ಹಿಲ್ ಪ್ರದೇಶವನ್ನು ಬಳಕೆ ಮಾಡಿದರ ಪರಿಣಾಮವಾಗಿ ಅಲ್ಲಿ ದೊಡ್ಡದೊಂದು ಕಸದ ಬೆಟ್ಟವೇ ಎದ್ದು ನಿಲ್ಲುವಂತಾಯಿತು. ಇದರಿಂದ ಈ ವ್ಯಾಪ್ತಿಯ ನಿವಾಸಿಗಳಿಗೆ ವಾಸಕ್ಕೆ ಅನಾನುಕೂಲ ಆಗುವುದರ ಜತೆಗೆ ಮಡಿಕೇರಿ ನಗರದ ಸೌಂದರ್ಯಕ್ಕೂ ಕಪ್ಪು ಚುಕ್ಕಿ ಬೀಳುವಂತಾಯಿತು. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲೂ ಇದೆ. ಯಾವುದೇ ಕಾರಣಕ್ಕೂ ಎಲ್ಲಿಯೂ ತ್ಯಾಜ್ಯವನ್ನು ಸುರಿಯುವಂತಾಗಬಾರದು. ವಿಂಗಡಣೆ ಮಾಡಿ ಪುನರ್ಬಳಕೆ ಮಾಡುವಂತಾಗಬೇಕು.
ಕೆ.ಎಂ. ಅಪ್ಪಣ್ಣ, ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ