ಪಡಿತರಕ್ಕಾಗಿ ನ್ಯಾಯಬೆಲೆ ಅಂಗಡಿ ಬಳಿ ಸರದಿಯಲ್ಲಿ ನಿಂತಿರುವ ಅನ್ನಭಾಗ್ಯ ಯೋಜನೆ ಫಲಾನುಭವಿಗಳು 
ಕೊಡಗು

ಯುವಶಕ್ತಿಗೆ ಯುವನಿಧಿ ವರ

ಮಡಿಕೇರಿ

ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ಮೂರು ವರ್ಷದ ಸಂಭ್ರಮದಲ್ಲಿದ್ದು, ಕೊಡಗಿನಲ್ಲಿ ಯುವ ನಿಧಿ ಯೋಜನೆ ಅಡಿಯಲ್ಲಿ ಶೇ. 88.06ರಷ್ಟು ಭೌತಿಕ ಪ್ರಗತಿ ಸಾಧಿಸಲಾಗಿದೆ. ಈ ವಿಷಯದಲ್ಲಿ ಸೋಮವಾರಪೇಟೆ ತಾಲೂಕು ಪ್ರಥಮ ಸ್ಥಾನದಲ್ಲಿದೆ. ವಿಶೇಷ ಎಂದರೆ ಜಿಲ್ಲೆಯಲ್ಲಿ 6 ಫಲಾನುಭವಿಗಳು ತಮಗೆ ಕೆಲಸ ಸಿಕ್ಕಿದ ಕೂಡಲೇ ಸ್ವಯಂಪ್ರೇರಿತರಾಗಿ ಯೋಜನೆಯಿಂದ ಹೊರಬಂದಿದ್ದಾರೆ. ಮತ್ತೊಂದು ಕಡೆ ಸುಮಾರು 1.05 ಲಕ್ಷ ಕುಟುಂಬಗಳು ಅನ್ನಭಾಗ್ಯ ಯೋಜನೆಯ ಲಾಭ ಪಡೆಯುತ್ತಿದ್ದಾರೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳು ಜನಸಾಮಾನ್ಯರ ಆಹಾರ ಭದ್ರತೆ ಹಾಗೂ ನಿರುದ್ಯೋಗಿ ಯುವಜನರ ಆರ್ಥಿಕ ಸಬಲೀಕರಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಯೋಜನೆಗಳ ಯಶಸ್ವಿ ಅನುಷ್ಠಾನದ ಮೂರು ವರ್ಷದ ಹರ್ಷಾಚರಣೆ ನಡೆಯುತ್ತಿದೆ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಆಹಾರ ಭದ್ರತೆ ಗಮನದಲ್ಲಿಟ್ಟುಕೊಂಡು ಜಾರಿಗೊಳಿಸಿರುವ ಅನ್ನಭಾಗ್ಯ ಯೋಜನೆ ನಮಗೆ ಸಾಕಷ್ಟು ಅನುಕೂಲತೆ ಮಾಡಿಕೊಟ್ಟಿದೆ ಎಂದು ಫಲಾನುಭವಿ ಕುಟುಂಬಗಳು ಹೇಳುತ್ತಿವೆ.

ಮತ್ತೊಂದೆಡೆ ವಿದ್ಯಾಭ್ಯಾಸ ಪೂರ್ಣಗೊಳಿಸಿ ಉದ್ಯೋಗಕ್ಕಾಗಿ ಎದುರು ನೋಡುತ್ತಿರುವ ಯುವಜನರಿಗೆ ಯುವನಿಧಿ ಯೋಜನೆಯು ಮಾಸಿಕ ಆರ್ಥಿಕ ನೆರವು ನೀಡುವ ಮೂಲಕ ಆತ್ಮವಿಶ್ವಾಸ ತುಂಬುತ್ತಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಉದ್ಯೋಗ ಅರಸುತ್ತಿರುವ ಪದವೀಧರ ಹಾಗೂ ಡಿಪ್ಲಮೋ ಪದವೀಧರ ಯುವಜನರಿಗೆ ಆರ್ಥಿಕ ನೆರವು ನೀಡುವ ಯುವನಿಧಿ ಯೋಜನೆ ಕೊಡಗು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನÀಗೊಳ್ಳುತ್ತಿದೆ.

2026ರ ಆಗಸ್ಟ್ ಅಂತ್ಯದ ವೇಳೆಗೆ 2,148 ಪದವೀಧರ ಫಲಾನುಭವಿಗಳಿಗೆ ಒಟ್ಟಾರೆಯಾಗಿ 6.26 ಕೋಟಿ ರೂ. ಮತ್ತು 31 ಡಿಪ್ಲಮೋ ಫಲಾನುಭವಿಗಳಿಗೆ 4.20 ಲಕ್ಷ ರೂ. ಸೇರಿ ಒಟ್ಟು 2,179 ಫಲಾನುಭವಿಗಳಿಗೆ 6.30 ಕೋಟಿ ರೂ. ಹಣವನ್ನು ಡಿಬಿಟಿ ಮೂಲಕ ಜಮೆ ಮಾಡಲಾಗಿದೆ. ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ ಒಟ್ಟು 2,459 ನಿರುದ್ಯೋಗಿ ಯುವಕ-ಯುವತಿಯರು ಹೆಸರು ನೋಂದಾಯಿಸಿಕೊAಡಿದ್ದು, ಈ ಪೈಕಿ 2,179 ಅಭ್ಯರ್ಥಿಗಳಿಗೆ ಶೇ. 88.06ರಷ್ಟು ಯಶಸ್ವಿಯಾಗಿ ಡಿಬಿಟಿ ಮೂಲಕ ಆರ್ಥಿಕ ನೆರವು ತಲುಪಿಸಲಾಗಿದೆ.

ನೋಂದಾಯಿತ ಅಭ್ಯರ್ಥಿಗಳಲ್ಲಿ ಮಹಿಳೆಯರ ಪಾಲು ಗಣನೀಯವಾಗಿದ್ದು, 1,427 ಮಹಿಳೆಯರು (ಶೇ.58.03) ಹಾಗೂ 1,032 ಪುರುಷರು (ಶೇ.41.09) ಯೋಜನೆಯಡಿ ನೋಂದಾಯಿಸಿಕೊAಡಿದ್ದಾರೆ. ತಾಲೂಕುವಾರು ಯುವನಿಧಿ ಯೋಜನೆಯ ಪ್ರಗತಿಯಲ್ಲಿ ಸೋಮವಾರಪೇಟೆ ತಾಲೂಕು ಮುಂಚೂಣಿಯಲ್ಲಿದೆ. ಇಲ್ಲಿ 712 ಅಭ್ಯರ್ಥಿಗಳು ನೋಂದಾಯಿಸಿಕೊAಡಿದ್ದು, 635 ಮಂದಿ ಫಲಾನುಭವಿಗಳಿಗೆ ಡಿಬಿಟಿ ಸೌಲಭ್ಯ ದೊರೆತಿದೆ. ನಂತರದ ಸ್ಥಾನದಲ್ಲಿ ಮಡಿಕೇರಿ ತಾಲೂಕು ಇದ್ದು, 666 ಮಂದಿ ನೋಂದಾಯಿತರ ಪೈಕಿ 587 ಅಭ್ಯರ್ಥಿಗಳು ಯೋಜನೆಯ ಪ್ರಯೋಜನ ಪಡೆದಿದ್ದಾರೆ.

ಸಾಮಾಜಿಕ ವರ್ಗವಾರು ವಿವರಗಳಲ್ಲಿ ಹಿಂದುಳಿದ ವರ್ಗಗಳ 1,843 ಅಭ್ಯರ್ಥಿಗಳು, ಪರಿಶಿಷ್ಟ ಜಾತಿಯ 340, ಪರಿಶಿಷ್ಟ ಪಂಗಡದ 95 ಹಾಗೂ ಸಾಮಾನ್ಯ ವರ್ಗದ 181 ಅಭ್ಯರ್ಥಿಗಳು ಯೋಜನೆಯಡಿ ಹೆಸರು ನೋಂದಾಯಿಸಿಕೊAಡಿದ್ದಾರೆ.

ಯುವನಿಧಿ ಯೋಜನೆಯ ನಿಯಮಾವಳಿಯಂತೆ 24 ತಿಂಗಳ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ 1007 ಫಲಾನುಭವಿಗಳನ್ನು ಜುಲೈ 2026 ಅಂತ್ಯಕ್ಕೆ ಯೋಜನೆಯಿಂದ ಕೈಬಿಡಲಾಗಿದೆ. ಯೋಜನೆಯ ಸಕಾರಾತ್ಮಕ ಬೆಳವಣಿಗೆಯಾಗಿ 6 ಅಭ್ಯರ್ಥಿಗಳು ತಾವು ಉದ್ಯೋಗದಲ್ಲಿರುವುದಾಗಿ ಸ್ವಯಂ ಘೋಷಣೆಯಲ್ಲಿ ದೃಢೀಕರಿಸಿದ್ದು ಸ್ವಯಂಪ್ರೇರಿತವಾಗಿ ಯೋಜನೆಯಿಂದ ಹೊರಬಂದಿದ್ದಾರೆ.

ಜಿಲ್ಲೆಯಲ್ಲಿ 8,609 ಅಂತ್ಯೋದಯ ಅನ್ನ ಯೋಜನೆ (ಎಎವೈ) ಹಾಗೂ 96,466 ಬಿಪಿಎಲ್ ಆದ್ಯತಾ ಪಡಿತರ ಚೀಟಿಗಳು ಸೇರಿದಂತೆ ಒಟ್ಟು 1,05,075 ಆದ್ಯತಾ ಪಡಿತರ ಚೀಟಿ ಕುಟುಂಬಗಳು ಅನ್ನಭಾಗ್ಯ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿವೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಯಡಿ ಎಎವೈ ಪಡಿತರ ಚೀಟಿದಾರರಿಗೆ ಪ್ರತಿ ಕುಟುಂಬಕ್ಕೆ 35 ಕೆ.ಜಿ. ಅಕ್ಕಿ ಉಚಿತವಾಗಿ ವಿತರಿಸಲಾಗುತ್ತಿದೆ. ಬಿಪಿಎಲ್ ಆದ್ಯತಾ ಪಡಿತರ ಚೀಟಿದಾರರ ಪ್ರತಿ ಸದಸ್ಯರಿಗೆ 5 ಕೆ.ಜಿ. ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ.

ಸರ್ಕಾರದ ಆದೇಶದಂತೆ ಕೇಂದ್ರ ಸರ್ಕಾರದಿಂದ ಅಕ್ಕಿ ಖರೀದಿಸಿ, ಡಿಬಿಟಿ ವ್ಯವಸ್ಥೆಯ ಬದಲಾಗಿ 2025ರ ಫೆಬ್ರರಿಂದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ದೊರೆಯುವ 5 ಕೆ.ಜಿ. ಅಕ್ಕಿಯೊಂದಿಗೆ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ 5 ಕೆ.ಜಿ. ಸೇರಿ ಒಟ್ಟು 10 ಕೆ.ಜಿ. ಅಕ್ಕಿಯನ್ನು ಪ್ರತಿ ಅರ್ಹ ಫಲಾನುಭವಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.

ಕೊಡಗು ಜಿಲ್ಲೆಗೆ ಪ್ರತಿ ತಿಂಗಳು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ 17,959 ಕ್ವಿಂಟಾಲ್ ಮತ್ತು ಅನ್ನಭಾಗ್ಯ ಯೋಜನೆಯಡಿ 15,523 ಕ್ವಿಂಟಾಲ್ ಅಕ್ಕಿ ಹಾಗೂ ಅನ್ನಭಾಗ್ಯದ ಹೆಚ್ಚುವರಿ ಅಕ್ಕಿ ಸೇರಿ ಒಟ್ಟು 33,482 ಕ್ವಿಂಟಾಲ್ ಅಕ್ಕಿಯ ಅಗತ್ಯವಿದ್ದು, ಅಗತ್ಯ ಪ್ರಮಾಣದ ಅಕ್ಕಿಯನ್ನು ಪೂರೈಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸರ್ಕಾರದ ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳು ಕೇವಲ ಸಾಂಪ್ರದಾಯಿಕ ಸರ್ಕಾರಿ ಕಾರ್ಯಕ್ರಮಗಳಾಗಿ ಉಳಿಯದೆ, ಜಿಲ್ಲೆಯ ಶೋಷಿತ, ಬಡ ಹಾಗೂ ಯುವ ಸಮುದಾಯದ ಬದುಕಿನಲ್ಲಿ ನೈಜ ಭರವಸೆ ಮೂಡಿಸಿವೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಮೂರು ವರ್ಷಗಳ ಯಶಸ್ವಿ ಪಯಣದಲ್ಲಿ, ಹಸಿವು ಮುಕ್ತ ಜಿಲ್ಲೆಯ ನಿರ್ಮಾಣಕ್ಕೆ ಅನ್ನಭಾಗ್ಯ ಮುನ್ನುಡಿ ಬರೆದಿದ್ದರೆ, ಯುವಜನರಲ್ಲಿ ನಿರುದ್ಯೋಗದ ಕಳಂಕ ಹಾಗೂ ನಿರಾಶೆಯನ್ನು ಹೋಗಲಾಡಿಸಿ ಸ್ವಾವಲಂಬಿ ಭವಿಷ್ಯ ರೂಪಿಸಿಕೊಳ್ಳಲು ಯುವನಿಧಿ ಆಸರೆಯಾಗಿದೆ ಎನ್ನುತ್ತಾರೆ ಫಲಾನುಭವಿಗಳು.

ಸರ್ಕಾರ ಗ್ಯಾರಂಟಿ ಯೋಜನೆಯನ್ನು 2023ರಲ್ಲಿ ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿ ಶೇ.98 ರಷ್ಟು ಪ್ರಗತಿ ಸಾಧಿಸಿದೆ. ಆ ದಿಸೆಯಲ್ಲಿ ಇನ್ನಷ್ಟು ಪ್ರಯತ್ನಗಳು ನಡೆಯಬೇಕಿದೆ. ಅನ್ನಭ್ಯಾಗ್ಯ ಯೋಜನೆ ಬಡವರಿಗೆ ತಲುಪಬೇಕು. ಬಿಪಿಎಲ್ ಕಾರ್ಡ್ ಅನ್ನು ಕಡು ಬಡವರಿಗೆ ನೀಡಿ ಪಡಿತರ ವಿತರಿಸುವಂತಾಗಬೇಕು. ಜಿಲ್ಲೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜು, ಡಿಪ್ಲೋಮೊ, ಎಂಜಿನಿಯರಿAಗ್ ಕಾಲೇಜುಗಳ ಪದವೀಧದರರಿಗೆ ಯೋಜನೆಯನ್ನು ತಲುಪಿಸಬೇಕು, ಯುವ ಜನರಿಗೆ ಕೌಶಲ್ಯ ತರಬೇತಿ ಕಾರ್ಯಕ್ರಮ ಆಯೋಜಿಸಲು ಕ್ರಮ ತೆಗೆದುಕೊಂಡಿದ್ದು ಈ ಮೂಲಕ ಮತ್ತಷ್ಟು ಅರ್ಹರಿಗೆ ಯೋಜನೆಯ ಲಾಭ ತಲುಪಲು ಪ್ರಯತ್ನ ನಡೆಸಲಾಗುತ್ತಿದೆ.

ಎಸ್.ಆರ್. ಮೆಹರೋಜ್ ಖಾನ್, ಉಪಾಧ್ಯಕ್ಷ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ

ಯುವನಿಧಿ ಯೋಜನೆಯ ನಿಯಮದಂತೆ ನಿರುದ್ಯೋಗಿಗಳು ಪ್ರತಿ ತಿಂಗಳ 25ನೇ ತಾರೀಕಿನೊಳಗೆ ಸ್ವಯಂ ಘೋಷಣೆ ನೀಡಬೇಕು. ಯೋಜನೆಯ ಅತ್ಯಂತ ಆಶಾದಾಯಕ ಹಾಗೂ ಸಕಾರಾತ್ಮಕ ಬೆಳವಣಿಗೆಯೆಂದರೆ, ತಮಗೆ ಉದ್ಯೋಗ ಲಭಿಸಿದ ತಕ್ಷಣವೇ 6 ಮಂದಿ ಅಭ್ಯರ್ಥಿಗಳು ತಾವಾಗಿಯೇ ಮುಂದೆ ಬಂದು ಸ್ವಯಂ ಘೋಷಣೆ ಸಲ್ಲಿಸಿದ್ದಾರೆ. ತಮಗೆ ಕೆಲಸ ಸಿಕ್ಕಿರುವುದನ್ನು ದೃಢೀಕರಿಸಿ, ಸ್ವಯಂಪ್ರೇರಿತವಾಗಿ ಯೋಜನೆಯಿಂದ ಹೊರಬರುವ ಮೂಲಕ ಇನ್ನೊಬ್ಬರಿಗೆ ಮಾದರಿಯಾಗಿದ್ದಾರೆ.

ಧರ್ಮಜ ಉತ್ತಪ್ಪ, ಅಧ್ಯಕ್ಷ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ, ಕೊಡಗು