ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಸಿ.ಎಸ್.ಸಂಜನಾ, ಡಾ.ಜೆ.ಸೋಮಣ್ಣ, ದಯಾ ಚಂಗಪ್ಪ ಇತರರಿದ್ದರು. 
ಕೊಡಗು

ಯುವಪೀಳಿಗೆ ಚಳವಳಿಗಳ ಇತಿಹಾಸ ಅರಿಯಲಿ

ನಿವೃತ್ತ ಪ್ರಾಂಶುಪಾಲ ಡಾ.ಜೆ.ಸೋಮಣ್ಣ ಸಲಹೆ

ಪೊನ್ನಂಪೇಟೆ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಪೊನ್ನಂಪೇಟೆ ತಾಲೂಕು ಆಡಳಿತದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ತಹಸೀಲ್ದಾರ್ ಸಿ.ಎಸ್.ಸಂಜನಾ ಧ್ವಜಾರೋಹಣ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್, ವಿವಿಧ ಸರ್ಕಾರಿ ಇಲಾಖೆಗಳು, ನಂದೀಶ್ವರ ಆಟೋ ಚಾಲಕರ ಸಂಘ ಹಾಗೂ ಕಲಾ ತಂಡಗಳು ಪೊನ್ನಂಪೇಟೆ ಕೆಪಿಎಸ್ ಶಾಲೆಯಿಂದ ಹೊರಟು ಶ್ರೀ ರಾಮಕೃಷ್ಣ ಶಾರದಾಶ್ರಮದವರೆಗೆ ಸಾಗಿ ಬಳಿಕ ಮರಳಿ ಕೆಪಿಎಸ್ ಶಾಲಾ ಆವರಣದಲ್ಲಿ ಸಂಪನ್ನಗೊಂಡಿತು.

ಬಾಳೆಲೆ ಪ್ರೌಢಶಾಲೆ ನಿವೃತ್ತ ಪ್ರಾಂಶುಪಾಲ ಡಾ.ಜೆ.ಸೋಮಣ್ಣ ಮಾತನಾಡಿ, ಭಾಷೆ ಮತ್ತು ಸಂಸ್ಕೃತಿ ಒಂದಕ್ಕೊಂದು ಪೂರಕವಾಗಿವೆ. ಕನ್ನಡ ನಾಡಿನ ಏಕೀಕರಣಕ್ಕಾಗಿ ಹಿರಿಯರು ಸುದೀರ್ಘ ಹೋರಾಟ ನಡೆಸಿದ್ದಾರೆ. ಕನ್ನಡ ಭಾಷೆಯ ಉಳಿವಿಗಾಗಿ ನಡೆದ ಚಳವಳಿಗಳ ಇತಿಹಾಸವನ್ನು ಯುವಪೀಳಿಗೆ ಅರಿಯಬೇಕು ಎಂದರು.

ಕನ್ನಡ ರಾಜ್ಯೋತ್ಸವ ಕೇವಲ ಆಚರಣೆಗೆ ಸೀಮಿತವಾಗಬಾರದು. ಪ್ರತಿಯೊಬ್ಬರೂ ಕನ್ನಡ ಭಾಷೆ ಮತ್ತು ಕನ್ನಡತನದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ತಾವು ವಾಸಿಸುವ ಪ್ರದೇಶದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಗೌರವಿಸುವುದರೊಂದಿಗೆ ಕನ್ನಡವನ್ನು ಹೆಮ್ಮೆಯಿಂದ ಮಾತನಾಡಬೇಕು ಎಂದು ಹೇಳಿದರು.

ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ ಮಾತನಾಡಿ, ಇತರೆ ರಾಜ್ಯಗಳಿಗಿಂತ ಕರ್ನಾಟಕ ಭಿನ್ನವಾಗಿದೆ. ಬ್ರಿಟಿಷರ ಕಾಲದಲ್ಲಿ ಕನ್ನಡಿಗರ ಪ್ರದೇಶಗಳು ಮರಾಠರು ಮತ್ತು ಹೈದರಾಬಾದ್ ನಿಜಾಮರ ಆಡಳಿತಕ್ಕೆ ಹಂಚಿಹೋಗಿದ್ದವು. ದೀರ್ಘ ಹೋರಾಟದ ಬಳಿಕ ಮೈಸೂರು ರಾಜ್ಯವು ಕರ್ನಾಟಕ ಎಂದು ನಾಮಕರಣವಾಯಿತು. ಮಾತೃಭಾಷೆ ಉಳಿವಿಗೆ ಎಲ್ಲರೂ ಕಟಿಬದ್ಧರಾಗಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಕೇಶವ ಕಾಮತ್ ಮಾತನಾಡಿ, ಇಂಗ್ಲಿಷ್ ಇಲ್ಲದೆ ಶಿಕ್ಷಣ ಸಾಧ್ಯವಿಲ್ಲ ಎಂಬ ಮನೋಭಾವದಿಂದ ಹೊರಬಂದು ಕನ್ನಡ ಭಾಷೆಯಲ್ಲಿಯೂ ಶಿಕ್ಷಣ ಪಡೆಯಲು ಉತ್ತೇಜನ ನೀಡಬೇಕು. ಇತರ ಭಾಷೆಗಳನ್ನು ಕಲಿಯುವುದು ಅಗತ್ಯವಾದರೂ ಮಾತೃಭಾಷೆಗೆ ಮೊದಲ ಆದ್ಯತೆ ನೀಡಬೇಕು ಎಂದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳಿಸಿದ ವಿದ್ಯಾರ್ಥಿಗಳಾದ ಎಚ್.ಜಿ.ಸ್ವಪ್ನಾ, ಪಿದಾ ಫಾತಿಮಾ, ಎಚ್.ಟಿ.ಸಂಜನಾ, ಪಿ.ಎಸ್.ಲಕ್ಷ್ಮೀ, ಜೆ.ಆರ್.ನಿಶಾ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಹಿತಿ ಟಿ.ಆರ್.ವಿನೋದ್, ಕಾಟೀಮಾಡ ಜಿಮ್ಮಿ ಅಣ್ಣಯ್ಯ, ಮನೆಯಪಂಡ ಶೀಲಾ ಬೋಪಣ್ಣ, ಜೆ.ವಿ.ರಮೇಶ್, ವಿ.ವಿ.ರುದ್ರಪ್ಪ, ಶಿಕ್ಷಕ ಚನ್ನಪ್ಪ ಹಾಗೂ ಉಪಪ್ರಾಂಶುಪಾಲ ಚಂಗಪ್ಪ, ಕೆ.ಆರ್.ರಾಜೇಶ್ ಅವರನ್ನು ಸನ್ಮಾನಿಸಲಾಯಿತು.

ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಆರ್.ರಾಜೇಶ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಗೋಪಿ, ತಾಲೂಕು ಐಟಿಡಿಪಿ ಅಧಿಕಾರಿ ತೇಜುರಾಜ್, ಮಕ್ಕಳ ಮತ್ತು ಮಹಿಳಾ ಕಲ್ಯಾಣಾಭಿವೃದ್ಧಿ ಅಧಿಕಾರಿ ಪೂಣಚ್ಚ, ರಾಮಕೃಷ್ಣ, ಕನ್ನಡ ಸಾಹಿತ್ಯ ಪರಿಷತ್ ಗೋಣಿಕೊಪ್ಪ ಹೋಬಳಿ ಘಟಕದ ಅಧ್ಯಕ್ಷ ಪ್ರಮೋದ್ ಗಣಪತಿ, ಬಸವರಾಜ್ ಬಡಿಗಾರ್, ಚಂಗಪ್ಪ, ನಳಿನಿ ಹಾಜರಿದ್ದರು.