ಶನಿವಾರಸಂತೆ: ಇಂದಿನ ಮೊಬೈಲ್ ಯುಗದಲ್ಲಿ ಪುಸ್ತಕ ಓದುವ ಅಭ್ಯಾಸ ಕಡಿಮೆಯಾಗುತ್ತಿದ್ದು, ಮತ್ತೆ ಪುಸ್ತಕದ ಮೇಲೆ ಆಸಕ್ತಿ ಮೂಡಿಸಲು ಪುಸ್ತಕ ಓದುವ ಸಂಭ್ರಮ ದಂತಹ ಸಾಹಿತ್ಯಕ ಕಾರ್ಯಕ್ರಮ ಅರ್ಥಪೂರ್ಣ ಎಂದು ಶನಿವಾರಸಂತೆ ಠಾಣೆ ವೃತ್ತ ನಿರೀಕ್ಷಕ ಜಿ.ಕೃಷ್ಣರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.
ಶನಿವಾರಸಂತೆಯ ನಾಟ್ಯ ಸದನ ಸಭಾಂಗಣದಲ್ಲಿ ಜಿಲ್ಲಾ ಅಭಿನಯ ಕಲಾ ಮಿಲನ ಚಾರಿಟಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಪುಸ್ತಕ ಓದುವ ಸಂಭ್ರಮ ಸಮಾರಂಭದಲ್ಲಿ ಅವರು ಜಿಲ್ಲೆಯ ಖ್ಯಾತ ಸಾಹಿತಿ ಭಾರದ್ವಾಜ ಕೆ.ಆನಂದ ತೀರ್ಥ ಅವರ ಕ್ರಮಣ ಕಾದಂಬರಿ ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪುಸ್ತಕ ಓದುವ ಅಭ್ಯಾಸ, ಕೇವಲ ಹವ್ಯಾಸವಷ್ಟೇ ಅಲ್ಲ, ಜ್ಞಾನದ ಕಡೆಗೆ ಕರೆದೊಯ್ಯುವುದು ಹಾಗೂ ಮನಸ್ಸನ್ನು ಒಂದೆಡೆ ನಿಲ್ಲಿಸುವುದಾಗಿದೆ. ಮೊಬೈಲ್ ಪಕ್ಕಕ್ಕಿಟ್ಟು ಎಲ್ಲರೂ ಓದುವ ಅಭ್ಯಾಸ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು. ಸಾಹಿತಿ ಶರ್ಮಿಳಾ ರಮೇಶ್ ಅವರ ‘ದಿಟ್ಟೆ’ ಕಥಾ ಸಂಕಲನವನ್ನು ಸಾಹಿತಿ ಶ.ಗ.ನಯನತಾರಾ ಪ್ರಕಾಶ್‌ಚಂದ್ರ ಹಾಗೂ ‘ಅವ್ವಯ್ಯಜ್ಜಿಯ ಕಥೆಗಳು’ ಕಥಾಸಂಕಲನವನ್ನು ಶಿಕ್ಷಕಿ ಜಿ.ಪಿ.ಕವಿತಾ ಓದಿ ವಿಮರ್ಶಿಸಿದರು.
ಸಾಹಿತಿ ಜಲಾ ಕಾಳಪ್ಪ ಅವರ ‘ಮುದ್ರೆ’ಕಾದಂಬರಿಯನ್ನು ಸಾಹಿತಿ ಲಾವಣ್ಯಾ ಮೋಹನ್ ಹಾಗೂ ಇತಿಹಾಸ ಪ್ರಸಿದ್ಧ ‘ಶಾಂತಳ್ಳಿ ವೈಭವ’ ಕೃತಿಯನ್ನು ಶಿಕ್ಷಕಿ ಜ್ಯೋತಿ ನಿರಂಜನ್ ಓದಿ ವಿಮರ್ಶಿಸಿದರು.
ಸಾಹಿತಿ ಹೇಮಂತ್ ಪಾರೇರಾ ಅವರ ‘ಬೆಳ್ಳಿಗೆಜ್ಜೆ’ ಕವನ ಸಂಕಲನವನ್ನು ಗೃಹಿಣಿ ಹೇಮಾ ಮುಳ್ಳೂರು ಹಾಗೂ ‘ಶಕುನದ ಹಕ್ಕಿ’ ಕಾದಂಬರಿಯನ್ನು ಶಿಕ್ಷಕಿ ಎಲ್.ಎಂ. ಪ್ರೇಮಾ ಓದಿ ವಿಮರ್ಶಿಸಿದರು.
ಮುಖ್ಯ ಅತಿಥಿ ಖ್ಯಾತ ಸಾಹಿತಿ ಭಾರದ್ವಾಜ ಕೆ.ಆನಂದ ತೀರ್ಥ ಕೃತಿಕಾರರ ಜತೆ ಸಂವಾದ ನಡೆಸಿದ ನಂತರ ಮಾತನಾಡಿ, ಪುಸ್ತಕ ಪರಿಚಯವೇ ಬೇರೆ, ವಿಮರ್ಶೆಯೆ ಬೇರೆ. ಲೇಖಕರನ್ನು, ಪತ್ರಕರ್ತರನ್ನು ಅವರ ಸಮ್ಮುಖದಲ್ಲಿ ಅತಿಯಾಗಿ ಹೊಗಳಬಾರದು. ಒಬ್ಬ ಲೇಖಕನ ಪುಸ್ತಕದಲ್ಲಿ ಇಬ್ಬಂದಿತನವಿರುತ್ತದೆ. ಸರಸ್ವತಿಯನ್ನು ಆರಾಧಿಸಿ ಒಲಿಸಿಕೊಳ್ಳಬೇಕು. ತಪ್ಪುಗಳನ್ನು ಹೇಳಿಕೊಳ್ಳುವ ಪ್ರಾಮಾಣಿಕತನ ಲೇಖಕರಲ್ಲಿ ಇರಬೇಕು.ವಿಮರ್ಶಕರಲ್ಲಿ ಗಟ್ಟಿತನ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ವೃತ್ತ ನಿರೀಕ್ಷಕ ಜಿ.ಕೃಷ್ಣರಾಜ್ ಮೂವರು ಕೃತಿಗಾರರನ್ನು ಸನ್ಮಾನಿಸಿದರು.
ಕೃತಿಕಾರರು ಆರು ಮಂದಿ ವಿಮರ್ಶಕರಿಗೆ ಹಾಗೂ ಕಲಾವಿದೆ, ಸಾಹಿತಿ ಮಿಲನ ಕೆ.ಭರತ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಅತಿಥಿ ಗಣ್ಯರನ್ನು ಹಾಗೂ ಕಾರ್ಯಕ್ರಮ ಆಯೋಜಕಿ ಹೇಮಾ ಮುಳ್ಳೂರು ಅವರನ್ನು ಅಭಿನಯ ಕಲಾ ಮಿಲನ ಚಾರಿಟಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ನಾಟ್ಯ ಮಿಲನ ನೃತ್ಯ ಶಾಲೆಯ ಮಕ್ಕಳಾದ ಪುಣ್ಯ ಪ್ರಾಂಜಲಿ ಮತ್ತು ತಂದವರು ನೃತ್ಯ ಪ್ರದರ್ಶಿಸಿ ಹಾಗೂ ಶಿಕ್ಷಕಿ ತೇಜಾವತಿ ಭಾವಗೀತೆ ಹಾಡಿ ರಂಜಿಸಿದರು.ಅಧ್ಯಕ್ಷತೆ ವಹಿಸಿದ್ದ ಅಭಿನಯ ಕಲಾ ಮಿಲನ ಚಾರಿಟಬಲ್ ಟ್ರಸ್ಟ್ ಸಂಚಾಲಕ ಪರಿಚನ ಸತೀಶ್ ಮಾತನಾಡಿ, ಸಾಹಿತ್ಯ ರಚನೆಗೆ ಮೊದಲು ಲೇಖಕರು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪುಸ್ತಕ ಓದುವಿಕೆ ವಾಸ್ತವ ಜ್ಞಾನದ ಜತೆಗೆ ಉತ್ತಮ ಆಲೋಚನೆಯನ್ನು ಮೂಡಿಸುತ್ತದೆ ಎಂದರು.
ಕಲಾವಿದೆ ಹಾಗೂ ಸಾಹಿತಿ ಮಿಲನಾ ಕೆ.ಭರತ್ ಪ್ರಾಸ್ತಾವಿಕ ನುಡಿಯಾಡಿ ಕಾರ್ಯಕ್ರಮ ನಿರ್ವಹಿಸಿದರು.
ಶಿಕ್ಷಕಿಯರಾದ ಎಸ್.ಎಂ.ಆಶಾ, ತೇಜಾವತಿ ಹಾಗೂ ಜಿತೇಂದ್ರ ಕೃತಿಕಾರರನ್ನು ಪರಿಚಯಿಸಿದರು. ಅಭಿನಯ ಕಲಾ ಮಿಲನ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕುದುಕುಳಿ ಭರತ್, ನಿರ್ದೇಶಕರಾದ ಇಂದಿರಾವತಿ ಭರತ್, ಜಿತೇಂದ್ರ, ಹೇಮಂತ್ ಹಾಗೂ ಸಿ.ಪ್ರಕಾಶ್ಚಂದ್ರ, ಹೇಮಂತ್ ಪಾರೇರಾ ಮತ್ತಿತರರಿದ್ದರು.
----------------------------