ಮೂರ್ನಾಡಿನ ಕಗ್ಗಾಲು ಸಮುದಾಯ ಭವನದಲ್ಲಿ ಹೈನುಗಾರಿಕೆ ಕುರಿತು ಏರ್ಪಡಿಸಿದ್ದ ‘ರೈತ ಕ್ಷೇತ್ರ ಪಾಠಶಾಲೆ’ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಶಿಲ್ಪಾ, ವರಲಕ್ಷ್ಮೀ, ದಿವ್ಯಾ ಮತ್ತಿತರರಿದ್ದರು. dairy
ಕೊಡಗು

ಮೂರ್ನಾಡಿನಲ್ಲಿ ‘ರೈತ ಕ್ಷೇತ್ರ ಪಾಠಶಾಲೆ’ ಕಾರ್ಯಕ್ರಮ

ಪಶುವೈದ್ಯೆ ಡಾ.ಶಿಲ್ಪಾ ಮಾಹಿತಿ

ಹೈನುಗಾರಿಕೆಯಲ್ಲಿ ಜಾನುವಾರು ತಳಿ ಆಯ್ಕೆ ಪ್ರಮುಖ

ನಾಪೋಕ್ಲು: ಸಮೀಪದ ಮೂರ್ನಾಡಿನ ಕಗ್ಗಾಲು ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವಿರಾಜಪೇಟೆ ವಲಯದ ವತಿಯಿಂದ ಹೈನುಗಾರಿಕೆ ಕುರಿತು ‘ರೈತ ಕ್ಷೇತ್ರ ಪಾಠಶಾಲೆ’ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಪಶುವೈದ್ಯೆ ಡಾ.ಶಿಲ್ಪಾ ಮಾತನಾಡಿ, ಹೈನುಗಾರಿಕೆಯಲ್ಲಿ ಜಾನುವಾರುಗಳ ತಳಿ ಆಯ್ಕೆ ಪ್ರಮುಖ ಪಾತ್ರ ವಹಿಸುತ್ತದೆ. ಎಚ್‌ಎಫ್ ಹಾಗೂ ಜರ್ಸಿ ಮುಂತಾದ ಮಿಶ್ರತಳಿಗಳ ಆಯ್ಕೆ ಸೂಕ್ತ. ಉತ್ತಮ ಹಾಲು ಉತ್ಪಾದನೆಗೆ ಜಾನುವಾರುಗಳಿಗೆ ಗುಣಮಟ್ಟದ ಹಸಿರು ಮೇವು ಮತ್ತು ಅಜೋಲಾ ಮುಂತಾದ ಜಲಸಸ್ಯಗಳ ಬಳಕೆ ಮಾಡಬೇಕು. ಅಲ್ಲದೆ, ಕಾಲಕಾಲಕ್ಕೆ ಕಡ್ಡಾಯವಾಗಿ ಲಸಿಕೆ ಹಾಕಿಸುವುದು, ಜಾನುವಾರುಗಳಿಗೆ ವಿಮೆ ಮಾಡಿಸುವುದು ಹಾಗೂ ಕರುಗಳ ಸಮರ್ಪಕ ಪಾಲನೆ ಅತ್ಯಗತ್ಯ ಎಂದು ಕಿವಿಮಾತು ಹೇಳಿದರು.

ವಿರಾಜಪೇಟೆ ತಾಲೂಕು ಕೃಷಿ ಅಧಿಕಾರಿ ವಸಂತ್ ಮಾತನಾಡಿ, ಧರ್ಮಸ್ಥಳ ಯೋಜನೆಯ ಮೂಲಕ ಹೈನುಗಾರಿಕೆಗೆ ಆರ್ಥಿಕ ನೆರವು ದೊರೆಯುತ್ತಿದ್ದು, ರೈತ ಮಹಿಳೆಯರು ಸದುಪಯೋಗಪಡಿಸಿಕೊಂಡು ಸ್ವ-ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಪಶು ಇಲಾಖೆ ಅಧಿಕಾರಿ ವರಲಕ್ಷ್ಮೀ, ವಲಯದ ಸೇವಾಪ್ರತಿನಿಧಿ ದಿವ್ಯಾ ಹಾಜರಿದ್ದರು.

ಪ್ರಗತಿಪರ ಕೃಷಿಕರಾದ ಮಧು, ರಾಜಣ್ಣ, ವಿಪ್ಪನ್, ಪಾರ್ವತಿ, ಕಾರ್ಯಪ್ಪ, ಮೇದಪ್ಪ, ಅಪ್ಪಯ್ಯ, ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ರೈತರು ಭಾಗವಹಿಸಿದ್ದರು.