ಮಕ್ಕಳ ದಸರಾ ಸಂದರ್ಭ ಕಂಡು ಬಂದ ಜನಜಂಗುಳಿ 
ಕೊಡಗು

ಮಡಿಕೇರಿ ಗಾಂಧಿ ಮೈದಾನದಲ್ಲಿ ಮಕ್ಕಳ ಕಲರವ

ಮಡಿಕೇರಿ

ಮಕ್ಕಳಲ್ಲಿ ಸಣ್ಣ ವಯಸ್ಸಿನಲ್ಲೇ ವ್ಯಾವಹಾರಿಕ ಜ್ಞಾನ ಹಾಗೂ ಸ್ವಾವಲಂಬನೆಯನ್ನು ಹೆಚ್ಚಿಸಲು ಮಕ್ಕಳ ಸಂತೆಯAಥ ಕಾರ್ಯಕ್ರಮಗಳು ಅತ್ಯಂತ ಸಹಕಾರಿ ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಹೇಳಿದರು. ಮಡಿಕೇರಿ ದಸರಾ ಜನೋತ್ಸವದ ಪ್ರಯುಕ್ತ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ 13ನೇ ವರ್ಷದ ಮಕ್ಕಳ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗಾಗಿಯೇ ಪ್ರತ್ಯೇಕವಾಗಿ ಇಂತಹ ವಿಶಿಷ್ಟ ಸಂತೆಯನ್ನು ಆಯೋಜಿಸಿರುವುದು ಶ್ಲಾಘನೀಯ. ಮುಂಬರುವ ನವೆಂಬರ್ ತಿಂಗಳಲ್ಲಿ ಜಿಲ್ಲೆಯ ಪ್ರಮುಖ ಸಮಸ್ಯೆಗಳ ಕುರಿತು ಮಕ್ಕಳಿಗಾಗಿ ಯುವ ಸಂಸತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಇದರಲ್ಲಿ ಜಿಲ್ಲೆಯ ವಿವಿಧ ಜ್ವಲಂತ ವಿಷಯಗಳ ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು.

ಮಕ್ಕಳ ಸಂತೆ ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲೆ 3181ರ ಪ್ರಾಂತಪಾಲ ಸತೀಶ್ ಬೊಳಾರ್ ಮಾತನಾಡಿ, ರೋಟರಿ ಸಂಸ್ಥೆಯು ವಿವಿಧ ಜಿಲ್ಲೆಗಳಲ್ಲಿ ನವರಾತ್ರಿ ಆಚರಣೆಯ ಅಂಗವಾಗಿ ಅನ್ನದಾನ, ಪರಿಸರ ಜಾಗೃತಿ ಹಾಗೂ ಹಿರಿಯ ನಾಗರಿಕರಿಗೆ ಗೌರವ ಸಮರ್ಪಣೆಯಂತಹ ಹಲವು ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಮಕ್ಕಳ ದಸರಾದಲ್ಲಿ ವಿಭಿನ್ನ ಶೈಲಿಯ ವೇಷಧಾರಿಗಳು, ಧಾರ್ಮಿಕ ವೇಷಗಳು ಹಾಗೂ ಕಾಫಿ ಪ್ಲಾಂಟರ್ ವೇಷಭೂಷಣಗಳು ಗಮನಸೆಳೆಯುತ್ತಿರುವುದು ಸಂತಸದ ವಿಷಯ. ಮಕ್ಕಳು ಹಿರಿಯರಿಗೆ ಸದಾ ಗೌರವ ನೀಡುವ ಗುಣ ಬೆಳೆಸಿಕೊಳ್ಳಬೇಕೆಂದು ಹೇಳಿದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್. ರಾಜೇಶ್ ಮಾತನಾಡಿ, ಸತತ 13ನೇ ವರ್ಷವೂ ಮಕ್ಕಳ ದಸರಾವನ್ನು ಯಶಸ್ವಿಯಾಗಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಈ ಕಾರ್ಯಕ್ರಮ ಸೂಕ್ತ ವೇದಿಕೆಯಾಗಿದೆ. ಇಲ್ಲಿ ಗೆಲುವಿಗಿಂತ ಭಾಗವಹಿಸುವಿಕೆಯೇ ಪ್ರಮುಖವಾದುದು ಎಂದು ಅಭಿಪ್ರಾಯಪಟ್ಟರು.

ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಡಾ. ಜಿ.ಡಿ. ಚೇತನ್ ಮಾತನಾಡಿ, ಮುಂದಿನ ವರ್ಷಗಳಲ್ಲೂ ಇದೇ ರೀತಿಯ ವೈವಿಧ್ಯಮಯ ಕಾರ್ಯಕ್ರಮಗಳನ್ನು ಮುಂದುವರಿಸಿಕೊAಡು ಹೋಗಲಾಗುವುದು ಎಂದರು.

ರೋಟರಿ ಮಿಸ್ಟಿ ಹಿಲ್ಸ್ ಜಿಲ್ಲಾ ನಿರ್ದೇಶಕ ಹೆಚ್.ಟಿ. ಅನಿಲ್, ಸಹಾಯಕ ಪ್ರಾಂತಪಾಲ ಹೆಚ್.ಎಸ್. ವಸಂತಕುಮಾರ್, ವಲಯ ಸೇನಾನಿ ಪೊನ್ನಚ್ಚನ ಮಧುಸೂದನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಮಡಿಕೇರಿ ಗಾಂಧಿ ಮೈದಾನದ ಕಲಾಸಂಭ್ರಮ ಸಭಾಂಗಣದ ತುಂಬಾ ಶುಕ್ರವಾರ ಮಕ್ಕಳ ಕಲರವ ತುಂಬಿ ಹೋಗಿತ್ತು. ವೇದಿಕೆ ಮೇಲೆ ಛದ್ಮವೇಷ ಧರಿಸಿದ ಪುಟಾಣಿಗಳ ಪ್ರತಿಭಾ ಪ್ರದರ್ಶನವಾಗುತ್ತಿದ್ದರೆ, ಒಂದು ಕಡೆ ಮಕ್ಕಳ ಸಂತೆಯ ಗದ್ದಲ, ಮತ್ತೊಂದು ಕಡೆ ಮಕ್ಕಳ ಮಂಟಪಗಳ ಆಕರ್ಷಣೆ, ಇನ್ನೊಂದು ಮೂಲೆಯಲ್ಲಿ ಮನದಲ್ಲಿ ಮೂಡಿದ ಕಲ್ಪನೆಗಳಿಗೆ ಚಿತ್ರದ ರೂಪ ಕೊಡುವುದರಲ್ಲಿ ಮಗ್ನರಾಗಿದ್ದ ಮಕ್ಕಳು...ಒಟ್ಟಾರೆಯಾಗಿ ಮಡಿಕೇರಿ ದಸರಾ ವಿಶೇಷವಾಗಿ ಇಂದು ರಂಗೇರಿತ್ತು.